ಬಹು ಭಾಷಿಗರನ್ನು ಹೊಂದಿರುವ ಸದೃಢ ದೇಶ ಭಾರತ : ತಮ್ಮಯ್ಯ

KannadaprabhaNewsNetwork | Published : Dec 27, 2024 12:47 AM

ಸಾರಾಂಶ

ಚಿಕ್ಕಮಗಳೂರು, ಬಹು ಭಾಷಿಗರನ್ನು ಹೊಂದಿರುವ ಸದೃಢ ದೇಶ ಭಾರತ. ವಿವಿಧತೆಯಲ್ಲಿ ಏಕತೆ ಮೆರೆದಿರುವ ಪ್ರತಿ ರಾಜ್ಯಗಳು ಭಾರತಾಂಭೆಯ ಕೂಸುಗಳು. ಆಯಾ ಭಾಷಿಗರು ಮಾತೃಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಸೊಗಡನ್ನು ಎಲ್ಲೆಡೆ ಪಸರಿಸಲು ಮುಂದಾಗಬೇಕು ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರಿನ ಅಂಬೇಡ್ಕರ್‌ ಭವನದಲ್ಲಿ ನಡೆದ ದ್ರಾವಿಡ ಸಂಸ್ಕೃತಿ ಸಮ್ಮೀಲನೋತ್ಸವ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಹು ಭಾಷಿಗರನ್ನು ಹೊಂದಿರುವ ಸದೃಢ ದೇಶ ಭಾರತ. ವಿವಿಧತೆಯಲ್ಲಿ ಏಕತೆ ಮೆರೆದಿರುವ ಪ್ರತಿ ರಾಜ್ಯಗಳು ಭಾರತಾಂಭೆಯ ಕೂಸುಗಳು. ಆಯಾ ಭಾಷಿಗರು ಮಾತೃಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಸೊಗಡನ್ನು ಎಲ್ಲೆಡೆ ಪಸರಿಸಲು ಮುಂದಾಗಬೇಕು ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀ ಸುಬ್ರಮಣ್ಯ ಭಾರತಿ ಮಹಾಸಭಾ ಗುರುವಾರ ಆಯೋಜಿಸಿದ್ಧ ದ್ರಾವಿಡ ಸಂಸ್ಕೃತಿ ಸಮ್ಮೀಲನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವಾರು ದಶಕಗಳ ಹಿಂದೆಯೇ ತಮಿಳುನಾಡಿನ ನಿವಾಸಿಗಳು ಕರ್ನಾಟಕದಲ್ಲಿ ಬದುಕು ಕಂಡುಕೊಂಡು ಭಾಷಾಭಿಮಾನ ತೋರಿದ್ದಾರೆ. ಅಲ್ಲದೇ ತಾಯ್ನಾಡಿಗೆ ಅತ್ಯಂತ ಪ್ರಾಮುಖ್ಯತೆ ನೀಡಿದ್ದಾರೆ. ಹೀಗಾಗಿ ಎರಡು ರಾಜ್ಯಗಳಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿ ಸರ್ಕಾರಗಳು ರಾಜ್ಯದಲ್ಲಿ ತಿರುವಳ್ಳವರ್ ಹಾಗೂ ತಮಿಳುನಾಡಿನಲ್ಲಿ ಸರ್ವಜ್ಞ ಪುತ್ಥಳಿ ಸ್ಥಾಪಿಸಿ ಬಾಂಧವ್ಯ ವೃದ್ಧಿಸಿವೆ ಎಂದರು.

ತಮಿಳು ಭಾಷೆ ವಿವಿಧ ದೇಶಗಳಲ್ಲಿ ಪ್ರಖ್ಯಾತಿ ಹೊಂದಿದೆ. ಮಲೇಶಿಯಾ, ಸಿಂಗಾಪುರ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ಬದುಕು ಕಟ್ಟಿಕೊಂಡಿದ್ದಾರೆ ಎಂದ ಅವರು, ಯಾವುದೇ ಸಮಾಜ ಏಕಾಂಗಿ ಹೋರಾಟದ ಬದಲಾಗಿ ಸಂಘಟನಾತ್ಮಕವಾಗಿ ಪ್ರಯತ್ನಿಸಿದರೆ ಮಾತ್ರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ತಮಿಳು ಭಾಷೆ ಕೇವಲ ಭಾರತದ್ದಲ್ಲ, ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದು. ಭಾಷೆಗಳು ಬೇರೆಯಾದರೂ ಸಂಸ್ಕೃತಿ ಹಾಗೂ ಭಾವನೆಗಳಲ್ಲಿ ನಾವುಗಳು ಒಂದೇ. ಕೆಲವರು ಭಾಷೆ ಆಧಾರವಾಗಿಟ್ಟುಕೊಂಡು ಬೇರೆ ಮಾಡುವ ಪ್ರಯತ್ನಗಳು ಇಂದಿಗೂ ನಡೆಯುತ್ತಿರುವುದು ವಿಷಾಧನೀಯ ಎಂದರು.ಭಾರತದಲ್ಲಿ ಸಾಮ್ರಾಜ್ಯ ವಿಸ್ತರಣೆ, ಪ್ರತಿಷ್ಟೆ, ಹೆಣ್ಣು ಹಾಗೂ ದ್ವೇಷಕ್ಕಾಗಿ ಸಾಲು ಸಾಲು ಯುದ್ಧಗಳು ನಡೆದಿವೆ. ಆದರೆ, ಭಾಷೆಗಾಗಿ ಎಂದಿಗೂ ಯುದ್ಧ ನಡೆದಿಲ್ಲ. ಭಾರತದ ಒಂದು ಭಾಷೆ, ಇನ್ನೊಂದು ಭಾಷೆಯನ್ನು ಒಪ್ಪಿ, ಅಪ್ಪಿಕೊಂಡು ನಡೆದಿರುವ ಕಾರಣ ಸಮೃದ್ಧವಾಗಿ ರಾಷ್ಟ್ರಾದ್ಯಂತ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.

ಭಾಷೆಯ ಬೇರು ಗಟ್ಟಿಗೊಂಡರೆ ಮಾತ್ರ ಬೆಳವಣಿಗೆ ಹೊಂದಲು ಸಾಧ್ಯ. ಎಲ್ಲರೂ ಒಂದಾಗಿ ಭಾಷೆಯ ಬೇರಿಗೆ ಅಭಿಮಾನ ಎಂಬ ನೀರನ್ನು ಚಿಮ್ಮಿಸಿದಾಗ ಬಲಿಷ್ಠಗೊಂಡು ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂಬುದನ್ನು ಮನಗಾಣಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ದೇಶದಲ್ಲೇ ಮೊಟ್ಟ ಮೊದಲು ತಮಿಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ದೊರೆತಿದೆ. ತಮಿಳಿನಲ್ಲಿ ಕವಿ ದಾರ್ಶನಿಕರು, ಲೇಖಕರು ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆ ನೀಡಿ ಭಾಷೆಯ ಸೊಗಡನ್ನು ಎತ್ತಿ ಹಿಡಿಯುವ ಕೆಲಸ ಮಾಡಿರುವುದು ಹೆಮ್ಮೆಯ ವಿಷಯ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ, ತಮಿಳರು ಅತ್ಯಂತ ಶ್ರಮ ಜೀವಿಗಳು. ದುಡಿಯುವ ಜನಾಂಗಕ್ಕೆ ಸಮುದಾಯ ಭವನ ಕೊರತೆ ಎದ್ದು ಕಾಣುತ್ತಿರುವುದು ಶೋಚನೀಯ. ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದರು. ರೈತಪರ ಹೋರಾಟಗಾರ ಎಸ್. ವಿಜಯಕುಮಾರ್‌ ಮಾತನಾಡಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹದಿಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ತಮಿಳರಿಗೆ ಯಾವುದೇ ಪಕ್ಷಗಳು ರಾಜಕೀಯ, ಸಾಮಾಜಿಕವಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿ ಯಾವುದೇ ಪ್ರಾಧಿಕಾರ ಅಥವಾ ನಿಗಮಗಳಲ್ಲಿ ತಮಿಳರಿಗೆ ನಾಮಿನಿ ಸ್ಥಾನ ಕಲ್ಪಿಸಿಕೊಟ್ಟರೆ ಜನಾಂಗಕ್ಕೆ ಒಳಿತಾಗಲಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುಬ್ರಮಣ್ಯ ಭಾರತಿ ಮಹಾಸಭಾ ಅಧ್ಯಕ್ಷ ಜಿ.ರಘು ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಸಿಪಿಐ ರಾಜ್ಯ ಮಂಡಳಿ ಸದಸ್ಯ ಎಚ್. ಎಂ.ರೇಣುಕಾರಾಧ್ಯ, ತಿರುವಳ್ಳವರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಕರ್‌, ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಗುಣಶೇಖರ್, ನಗರಸಭಾ ಮಾಜಿ ಅಧ್ಯಕ್ಷ ಮುತ್ತಯ್ಯ, ಮಹಾಸಭಾ ಕಾರ್ಯ ದರ್ಶಿ ಎಸ್.ಅಣ್ಣವೇಲು, ಖಜಾಂಚಿ ಎ.ಲಕ್ಷ್ಮೀನಾರಾಯಣ, ಉಪಾಧ್ಯಕ್ಷರಾದ ಸಿ.ಎನ್.ರಾಮಸ್ವಾಮಿ, ಕೃಷ್ಣರಾಜ್, ಸಹ ಕಾರ್ಯದರ್ಶಿಗಳಾದ ಸಿ.ಕೆ.ಮೂರ್ತಿ, ಕೆ.ಕುಮಾರ್, ಯುವಘಟಕದ ಜಿ.ಕೆ. ಕಾರ್ತೀಕ್, ಮುಖಂಡರಾದ ರಾಮಣ್ಣ, ಸತ್ಯವತಿ, ಲಕ್ಷ್ಮೀ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಕಲಾತಂಡಗಳೊಂದಿಗೆ ನಗರದ ತಾಲೂಕು ಕಚೇರಿಯಿಂದ ಅಂಬೇಡ್ಕರ್ ಭವನದವರೆಗೆ ನೂರಾರು ಸಂಖ್ಯೆಯ ತಮಿಳರು ಮೆರವಣಿಗೆ ನಡೆಸಿದರು. 26 ಕೆಸಿಕೆಎಂ 1ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಶ್ರೀ ಸುಬ್ರಮಣ್ಯ ಭಾರತಿ ಮಹಾಸಭಾ ಗುರುವಾರ ಆಯೋಜಿಸಿದ್ಧ ದ್ರಾವಿಡ ಸಂಸ್ಕೃತಿ ಸಮ್ಮೀಲನೋತ್ಸವವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ವಿಧಾನಪರಿಷತ್‌ ಸದಸ್ಯರಾದ ಎಸ್‌.ಎಲ್‌. ಭೋಜೇಗೌಡ, ಸಿ.ಟಿ. ರವಿ, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಇದ್ದರು.

Share this article