ಕನ್ನಡಪ್ರಭ ವಾರ್ತೆ ಹೊಳಲ್ಕೆರೆಭಾರತ ದೇಶದಲ್ಲಿ ಮೈಲಿಗೊಮ್ಮೆ ಭಾಷೆ, ಆಹಾರ ಪದ್ಧತಿಗಳ ಶೈಲಿ ಬದಲಾಗುತ್ತದೆ. ಬೃಹತ್ ಭಾರತ ನೂರಾರು ಭಾಷೆ ಸಂಸ್ಕೃತಿ ಜನಪದಗಳ ಸಾಗರ. ಅದರಲ್ಲಿಯೂ ಕರ್ನಾಟಕ ಸಂಸ್ಕೃತಿಯ ಜನಪದ ಕಲೆಗಳ ತವರೂರು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ. ಉಮೇಶ್ ಹೇಳಿದರು.ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಮೂಲಕ ಆಯ್ಕೆಗೊಂಡು, ರಾಜಸ್ಥಾನದ ಉದಯಪುರದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದಲ್ಲಿ "ಶಿಕ್ಷಣದಲ್ಲಿ ಪರಂಪರೆಯ ಬೊಂಬೆಯಾಟ " (ಹೆರಿಟೇಜ್ ಪಪ್ಪೆಟ್ರಿ ಇನ್ ಎಜುಕೇಶನ್) ಕಾರ್ಯಾಗಾರವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆ ತಮ್ಮ ಅನುಭವಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.ಉದಯಪುರ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರಕ್ಕೆ ಆಯ್ಕೆಯಾದ ರಾಜ್ಯದ ಹತ್ತು ಜನ ಶಿಕ್ಷಕರಲ್ಲಿ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಅಮೃತಾಪುರದ ಶಿಕ್ಷಕ ಟಿ.ಪಿ. ಉಮೇಶ್ ಹಾಗು ತುಪ್ಪದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕಿ ಟಿ.ಬಿ. ಅನಿತ ಇದ್ದರು.
ಆ.6 ರಿಂದ ಐದು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಹೊಸ ಶಿಕ್ಷಣ ನೀತಿಯಲ್ಲಿ ಕ್ರಿಯಾಶೀಲತೆ, ಸ್ವಚ್ಛ ಭಾರತ ಅಭಿಯಾನ ಮಹತ್ವ, ರಾಜಭಾಷ ನೀತಿ, ಶಿಕ್ಷಣದಲ್ಲಿ ಜನಪದ ಹಾಗು ಸಂಸ್ಕೃತಿ, ಪ್ರಾಥಮಿಕ ಶಿಕ್ಷಣದಲ್ಲಿ ತೊಗಲು ಬೊಂಬೆ, ನೆರಳು ಬೊಂಬೆ, ಹ್ಯಾಂಡ್ ಪೊಪ್ಪೆಟ್ ಹಾಗು ಗ್ಲೋ ಪೊಪ್ಪೇಟಗಳ ಪರಿಣಾಮಕಾರಿ ಬಳಕೆ, ಭಾರತದ ಶ್ರೀಮಂತ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಎಂಬ ವಿಚಾರಗಳ ಕುರಿತು ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣಗಳು ಮತ್ತು ಚರ್ಚಾ ಗೋಷ್ಠಿಗಳು ನಡೆಸಲ್ಪಟ್ಟವು. ಕರ್ನಾಟಕ ರಾಜ್ಯದ ಸಂಸ್ಕೃತಿ, ಜನಪದ ವಿಶಿಷ್ಟತೆ, ಕಲಾ ಶ್ರೀಮಂತಿಕೆ ಅನಾವರಣದ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಟಿ.ಪಿ. ಉಮೇಶ್ ಮತ್ತು ಕರ್ನಾಟಕ ತಂಡದವರು ಜನಪದ ನೃತ್ಯ ಹಾಗು ಹುಲಿಕುಣಿತ ಪ್ರದರ್ಶಿಸಿದರು. ಸ್ವತಃ ಕವಿಗಳು ಬರಹಗಾರರು ನಾಟಕಕಾರರು ಆದ ಉಮೇಶ್, ಚಿತ್ರದುರ್ಗದ ವೀರ ಮದಕರಿನಾಯಕರ ಪಾತ್ರಭಿನಯ ಮಾಡಿ ದೇಶದ ಹತ್ತು ರಾಜ್ಯಗಳಿಂದ ಬಂದಿದ್ದ ನೂರು ಶಿಕ್ಷಕರ ಮೈರೋಮಾಂಚನಗೊಳಿಸಿ ಕೇಂದ್ರದ ನಿರ್ದೇಶಕ ಡಾ.ಸಂದೀಪ ಶರ್ಮರಿಂದ ಪ್ರಶಂಸೆ ಪಡೆದರು.ಉದಯಪುರ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರಕ್ಕೆ ಆಯ್ಕೆಯಾಗಿದ್ದ ಶಿಕ್ಷಕಿ ನ್ಯಾಷನಲ್ ಇನ್ನೋವೇಟಿವ್ ಅವಾರ್ಡಿ ಟಿ.ಬಿ. ಅನಿತ ಪ್ರತಿಕ್ರಿಯಿಸಿ, ಚಿತ್ರದುರ್ಗದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಇನಾಯತುಲ್ಲಾ, ಹಿರಿಯ ಉಪನ್ಯಾಸಕ ಪ್ರಶಾಂತ್, ಬಸವರಾಜ್ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಉದಯಪುರದ ಸಾಂಸ್ಕೃತಿಕ ಕೇಂದ್ರದಲ್ಲಿ ಮಧ್ಯ ಕರ್ನಾಟಕದ ಜನಪದ ಕಲೆ ಸಂಸ್ಕೃತಿ ಬಿಂಬಿಸಲು ಸಾಧ್ಯವಾಯಿತು. ಈ ಕಾರ್ಯಾಗಾರ ಶಿಕ್ಷಕಿಯಾಗಿ ವೃತ್ತಿಜೀವನದಲ್ಲಿ ವೃತ್ತಿ ದಕ್ಷತೆ ಹೆಚ್ಚಿಸಿಕೊಳ್ಳಲು ನೆರವು ನೀಡಿದೆ ಎಂದು ಹೇಳಿದರು.