ಹನುಮಸಾಗರ: ಜಗತ್ತಿನ 180 ದೇಶಗಳಲ್ಲಿ ಭಾರತ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದು, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಕ್ಕಳಿಗೆ ಪ್ರೋತ್ಸಾಹ ಕಡಿಮೆ ಸಿಗುತ್ತಿದೆ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.
ಗ್ರಾಮದ ಶ್ರೀಲಕ್ಷ್ಮೀ ವೆಂಕಟೆಶ್ವರ ಬೆಟ್ಟದಲ್ಲಿರುವ ಸಮುದಾಯ ಭವನದಲ್ಲಿ ಭಾನುವಾರ ೧೧ನೇ ರಾಜ್ಯಮಟ್ಟದ ಪಿಂಕಾಕ್ ಸಿಲಾತ್ ಕ್ರೀಡೆ ಉದ್ಘಾಟಿಸಿ ಮಾತನಾಡಿದರು.ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್, ಅತ್ಯುನತ್ತ ಹುದ್ದೆ ಸೇರಿದಂತೆ ಸರ್ಕಾರಿ ನೌಕರಿ ಹೊಂದಬೇಕು ಎಂದು ಪಾಲಕರು ಆಶಯ ಪಡುತ್ತಾರೆ. ಆದರೆ ಕ್ರೀಡೆಯಲ್ಲಿ ಯುವಕರು ಭಾಗವಹಿಸಲು ಮುಂದಾಗಬೇಕು. ಕ್ರೀಡೆಯ ಮೀಸಲಾತಿಯಿಂದ ನಾನಾ ರೀತಿಯ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ. ಬೇರೆ ರಾಜ್ಯದಂತೆ ಇಲ್ಲಿಯು ಈ ಕ್ರೀಡೆಗೆ ಸರ್ಕಾರದ ಮಟ್ಟದಲ್ಲಿ ಮಾನ್ಯತೆ ಮಾಡಲು ಪ್ರಯತ್ನಿಸಲಾಗುವುದು. ಕ್ರೀಡೆ ಬೆಳೆಯಲು ಎಲ್ಲರ ಸಹಕಾರ ಅವಶ್ಯ. ಇದಕ್ಕೆ ಬೇಕಾದ ಸೌಲಭ್ಯ ಸರ್ಕಾರ ಸರ್ಕಾರ ನೀಡಲು ಬದ್ಧವಾಗಿದೆ ಎಂದರು.
ರಾಜ್ಯ ಜಂಪರೋಪ್ ಕಾರ್ಯದರ್ಶಿ ಅಬ್ದುಲ್ ರಜಾಕ ಟೇಲರ ಪ್ರಾಸ್ತಾವಿಕ ಮಾತನಾಡಿ, ಗ್ರಾಮದ ಪ್ರಮುಖರ ಸಹಕಾರದಿಂದ ಉನ್ನತಮಟ್ಟದ ಕ್ರೀಡೆ ನಡೆಯುತ್ತಿದೆ ಎಂದರು.ಅಬ್ದುಲ್‌ಕರಿಂ ವಂಟೆಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೊಡ್ಡಬಸವಗೌಡ ಪಾಟೀಲ್ ಬಯ್ಯಾಪುರ, ವಿಶ್ವನಾಥ ಕನ್ನೂರ, ಮಹಾಂತೇಶ ಅಗಸಿಮುಂದಿನ, ಪ್ರಶಾಂತ ಗಡಾದ, ವಿಶ್ವನಾಥ ನಾಗೂರ, ಬಸವರಾಜ ಬಾಚಲಾಪುರ, ಉಮೇಶ ಮಂಗಳೂರ, ಶ್ರೀಶೈಲಪ್ಪ ಮೋಟಗಿ, ಫಾರುಕ್ ಡಾಲಾಯತ್, ಮೌಲಿ ಮೋಟಗಿ, ಮಲ್ಲಿಕಾರ್ಜುನ ಬಡಿಗೇರ, ಶಿವಪ್ಪ ಕಂಪ್ಲಿ, ಭರಮಪ್ಪ ದೇವರಮನಿ, ರೇಣುಕಾ ಪುರದ, ಈರಣ್ಣ ಬದಾಮಿ ಸೇರಿದಂತೆ ರಾಜ್ಯದ ನಾನಾ ಭಾಗಗಳ ಕಾರ್ಯದರ್ಶಿಗಳು ಇದ್ದರು.ಚಿಕ್ಕಮಗಳೂರು, ಮೈಸೂರ, ಬೆಂಗಳೂರು, ರಾಯಚೂರ, ಕೊಪ್ಪಳ, ಮಂಗಳೂರ, ಶಿವಮೊಗ್ಗ, ಯಾದಗಿರಿ, ಧಾರವಾಡ ಸೇರಿದಂತೆ ರಾಜ್ಯದ ೧೪ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಮಂಜುನಾಥ ಗೊಂಡಬಾಳ, ವಿಜಯಕುಮಾರ ಹಂಚಿನಾಳ ನಿರ್ವಹಿಸಿದರು.