ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ಹೊಂದಿದ ದೇಶ ಭಾರತ: ಸಿದ್ಧರಾಮ ಹಿಪ್ಪರಗಿ

KannadaprabhaNewsNetwork | Published : Feb 23, 2024 1:48 AM

ಸಾರಾಂಶ

ದೇಶದಲ್ಲಿನ ಹಲವಾರು ಸಮಸ್ಯೆಗಳು, ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಅಧ್ಯಯನ ನಡೆಸಿ, ನಮ್ಮ ಸಂವಿಧಾನವನ್ನು ರಚನೆ ಮಾಡಲಾಗಿದೆ. ಪ್ರಸ್ತಾವನೆಯು ಸಂವಿಧಾನದ ಎಲ್ಲ ಆಶಯಗಳನ್ನು ಹೊಂದಿದೆ ಎಂದು ಹುಬ್ಬಳ್ಳಿಯ ಕಿರೇಸೂರಿನಲ್ಲಿ ಸಂಪನ್ಮೂಲ ವ್ಯಕ್ತಿ ಸಿದ್ದರಾಮ ಹಿಪ್ಪರಗಿ ಹೇಳಿದ್ದಾರೆ.

ಹುಬ್ಬಳ್ಳಿ: ಇಡೀ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ಹೊಂದಿದ ದೇಶ ನಮ್ಮದಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಸಿದ್ದರಾಮ ಹಿಪ್ಪರಗಿ ಹೇಳಿದರು.

ತಾಲೂಕಿನ ಕಿರೇಸೂರ ಗ್ರಾಮದ ಪ್ರಭುದೇವ ಕಲ್ಯಾಣ ಮಂಟಪದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕಿರೇಸೂರ ಗ್ರಾಪಂ ಆಶ್ರಯದಲ್ಲಿ 75ನೇ ಸಂವಿಧಾನ ದಿನಾಚರಣೆ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶವನ್ನು 200 ವರ್ಷಗಳ ಕಾಲ ಪರಕೀಯರು ಆಳ್ವಿಕೆ ಮಾಡಿ ಕೊಳ್ಳೆ ಹೊಡೆದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಲವಾರು ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಜಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶವನ್ನು ಸುಭದ್ರ ಸ್ಥಿತಿಯಲ್ಲಿ ಮುನ್ನೆಡೆಸಲು ಕಾಯ್ದೆ, ಕಾನೂನುಗಳು ಅವಶ್ಯಕವಾಗಿದ್ದವು. ಆ ಹಿನ್ನೆಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿ ರಚಿಸಲಾಯಿತು. ದೇಶದಲ್ಲಿನ ಹಲವಾರು ಸಮಸ್ಯೆಗಳು, ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಅಧ್ಯಯನ ನಡೆಸಿ, ನಮ್ಮ ಸಂವಿಧಾನವನ್ನು ರಚನೆ ಮಾಡಲಾಗಿದೆ. ಪ್ರಸ್ತಾವನೆಯು ಸಂವಿಧಾನದ ಎಲ್ಲ ಆಶಯಗಳನ್ನು ಹೊಂದಿದೆ ಎಂದರು.

ಧರ್ಮಗ್ರಂಥಗಳು ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಆದರೆ ಸಂವಿಧಾನ ಎಲ್ಲ ಧರ್ಮದವರನ್ನು ಒಂದುಗೂಡಿಸುವ ಶಕ್ತಿಯನ್ನು ಹೊಂದಿದೆ. ಮಹಿಳೆಯರಿಗೆ ಮೂಲಭೂತ ಹಕ್ಕುಗಳ ಮೂಲಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ಸರ್ವರ ಏಳಿಗೆ, ಕಲ್ಯಾಣ, ಹಿತವನ್ನು ಬಯಸುವ ಸಂವಿಧಾನ ನಮ್ಮದಾಗಿರುತ್ತದೆ. ಇಂತಹ ಸಂವಿಧಾನವನ್ನು ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಾರ್ಯವನ್ನು ನೆನಯುವ ದೂರದೃಷ್ಟಿಯೊಂದಿಗೆ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಗ್ರಾಮದ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅಲ್ಲದೇ ಮುತ್ತೈದೆಯರು ಜಾಥಾ ವಾಹನಕ್ಕೆ ಆರತಿ ಎತ್ತಿ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಚಕ್ಕಡಿ ಹಾಗೂ ಟ್ರ‍್ಯಾಕ್ಟರ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.

ಕುಂಭಮೇಳ, ಬೈಕ್, ಎತ್ತಿನ ಬಂಡಿ, ಸೇವಾದಳ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ಕಣ್ಮನ ಸೆಳೆದವು. ಮಹಿಳೆಯರ ಡೊಳ್ಳು ಕುಣಿತ, ಕೋಲಾಟ, ಲೆಜಿಮ್ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ಆರ್. ಅಂಬಿಗೇರ, ಗ್ರಾಪಂ ಅಧ್ಯಕ್ಷ ಬಿ.ಕೆ. ಪಾಟೀಲ, ಉಪಾಧ್ಯಕ್ಷೆ ಸಾವಿತ್ರಿ ಸವದತ್ತಿ, ಪಿಡಿಒ ಪೂರ್ಣಿಮಾ, ಗೌರವ್ವ ತಳವಾರ, ಎಸ್.ಸಿ. ಗುರಿಕಾರ, ಮುತ್ತಪ್ಪ, ಶಿಲ್ಪಾ, ಲಕ್ಷ್ಮಿ ಕಲ್ಲನವರ, ಹನುಮಂತಗೌಡ ರಾಯನಗೌಡರ ಸೇರಿದಂತೆ ಅಧಿಕಾರಿಗಳು ಇದ್ದರು.

Share this article