ಕನ್ನಡಪ್ರಭ ವಾರ್ತೆ ತುರುವೇಕೆರೆ
ಪ್ರತಿಯೊಂದು ಮನೆಗೆ ದೇವರ ಮನೆ ಹೇಗೆ ಇರುತ್ತದೋ, ಹಾಗೆಯೇ ಪ್ರಪಂಚಕ್ಕೆ ಭಾರತವೇ ದೇವರ ಮನೆ ಇದ್ದ ಹಾಗೆ ಎಂದು ಶಿವಗಂಗಾ ಕ್ಷೇತ್ರದ ಮೇಲಣಗವಿ ಮಠದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.ಇಲ್ಲಿಯ ಶ್ರೀ ವೀರಶೈವ ಸಮಾಜ, ಬಸವೇಶ್ವರ ಯುವಕ ಸಂಘ, ಪಾರ್ವತಿ ಮಹಿಳಾ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ಭಾರತ ಸಂಸ್ಕೃತಿಯ ನೆಲೆಬೀಡು. ಇಲ್ಲಿ ದೈವೀ ಶಕ್ತಿ ಇದೆ. ಗುರು ಹಿರಿಯರು ಸೇರಿದಂತೆ ಎಲ್ಲರಿಗೂ ಗೌರವ ಕೊಡುವ ಪದ್ಧತಿ ಇದೆ. ಇದು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಸಾವಿರಾರು ತಪಸ್ವಿಗಳು ನೆಲೆಸಿದ ಪುಣ್ಯ ಭೂಮಿ. ಯೋಗಪುರುಷರು ಜನಿಸಿದ ಕ್ಷೇತ್ರ. ಹಾಗಾಗಿ ಈ ಪುಣ್ಯ ಭೂಮಿ ಪ್ರಪಂಚದ ದೇವಾಲಯವಾಗಿದೆ ಎಂದು ಶ್ರೀಗಳು ಹೇಳಿದರು.ಶ್ರೀ ರೇಣುಕಾಚಾರ್ಯರು ಎಲ್ಲಾ ಮುನಿವರ್ಯರಿಗೂ ಶಿಖರವಿದ್ದಂತೆ. ಎಲ್ಲ ಮಹಾಪುರುಷರಿಗೂ ಮಾರ್ಗದರ್ಶಕರಾಗಿದ್ದರು. ರೇಣುಕಾಚಾರ್ಯರು ಮಾನವತಾವಾದಿಯಾಗಿದ್ದರು. ಅವರು ಜಾತಿಭೇಧಭಾವ ಮಾಡದೇ ಮನುಕುಲ ಶ್ರೇಯಸ್ಸಿಗೆ ದುಡಿದವರಾಗಿದ್ದರು. ರೇಣುಕಾಚಾರ್ಯರು ಸಾವಿರಾರು ವರ್ಷಗಳ ಹಿಂದೆ ಮಾಡಿದ್ದ ಸಾಧನೆ ಇಂದಿಗೂ ಎಲ್ಲರೂ ನೆನೆಯುವಂತೆ ಮಾಡಿದೆ. ಸರ್ವರ ಹಿತ ಕಾಯುವ ಮನಸ್ಥಿತಿ ಇದ್ದ ರೇಣುಕಾಚಾರ್ಯರ ಮಾರ್ಗದರ್ಶನದಲ್ಲಿ ಎಲ್ಲ ಮಠಾಧಿಪತಿಗಳು ನಡೆಯುವಂತಾಗಬೇಕು ಎಂದು ಡಾ.ಮಲಯಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಯೋಗಶಕ್ತಿಯಿಂದ ಹೆಚ್ಚು ಆರೋಗ್ಯ:ಯೋಗಶಕ್ತಿಯಿಂದ ಜನರು ಹೆಚ್ಚು ಆರೋಗ್ಯವಂತರಾಗಿ ಹೆಚ್ಚು ವರ್ಷಗಳ ಕಾಲ ನಿರೋಗಿಯಾಗಿ ಬದುಕಬಹುದು. ಯಾರು ಯೋಗದೊಂದಿಗೆ ಪರಮಾತ್ಮನ ಸೇವೆ ಮಾಡುವನೇ ಅವನೇ ಸುಖೀಜೀವಿ. ಲಿಂಗ ಪೂಜೆ ಮಾಡುವವನು ಜಗತ್ತೇ ನನ್ನದು. ಎಲ್ಲರೂ ಸುಖ ಸಂತೋಷದಿಂದ ಇರಲಿ ಎಂದು ಆಶಿಸುವವನು ಆಗಿರುತ್ತಾನೆ. ದೇವಾನು ದೇವತೆಗಳೇ ಲಿಂಗಪೂಜೆ ಮಾಡುತ್ತಿದ್ದರು. ಮೊದಲ ಪೂಜೆಯೇ ಲಿಂಗಪೂಜೆಯಾಗಿತ್ತು. ಲಿಂಗಪೂಜೆ ಮಾಡುವವನಿಗೆ ನಾಶ ಎಂಬುದೇ ಇರುವುದಿಲ್ಲ ಎಂದರು. ನಾವು ಏನೇ ಕಾಯಕ ಮಾಡಿದರೂ ಸಹ ಬಹಳ ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಏಕಾಗ್ರತೆ ಇರಬೇಕು. ವ್ಯವಸಾಯ ಎಂಬುದು ಭೂತಾಯಿಯ ಸೇವೆಯಂತೆ. ಆದರೆ ಈಗ ಭೂತಾಯಿಯ ಸೇವೆ ಮಾಡುವವರಿಗೆ ಬೆಲೆಯೇ ಇಲ್ಲದಂತೆ ಆಗಿದೆ. ಇಡೀ ಜೀವಸಂಕುಲಕ್ಕೆ ಜೀವನಾಧಾರವಾಗಿರುವ ರೈತರ ಬೆಲೆ ಇನ್ನು ಕೆಲವೇ ದಿನಗಳಲ್ಲಿ ಪ್ರಪಂಚದ ಅರಿವಿಗೆ ಬರಲಿದೆ. ಎಷ್ಠೇ ಹಣ, ಚಿನ್ನ, ಬೆಳ್ಳಿ ಸಂಪಾದಿಸಿದರೂ ಸಹ ಎಲ್ಲರೂ ರೈತರು ಬೆಳೆಯುವ ಆಹಾರವನ್ನೇ ತಿನ್ನಬೇಕು. ಮುಂಬರುವ ದಿನಗಳಲ್ಲಿ ಆಹಾರದ ಬೆಲೆ ಏನು ಎಂಬುದು ಅರಿವಿಗೆ ಬರಲಿದೆ ಎಂದರು.
ಪ್ರಶಸ್ತಿ: ಶಿವಗಂಗಾ ಮೇಲಣಗವಿ ಮಠದಿಂದ ಕೊಡ ಮಾಡುವ ಶಿವಗಂಗಾ ಪ್ರಶಸ್ತಿಯನ್ನು ಮುಂಬರುವ ವರ್ಷದಲ್ಲಿ ಕಾಡ ಸಿದ್ದೇಶ್ವರ ಮಠವನ್ನು ಜನ ಸಾಮಾನ್ಯರ ಹತ್ತಿರಕ್ಕೆ ತಂದು ಎಲ್ಲರ ಬದುಕಿಗೆ ದಾರಿ ದೀಪವಾಗಿ ಸೇವೆ ಮಾಡುತ್ತಿರುವ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶೀಕೇಂದ್ರ ಮಹಾಸ್ವಾಮಿಗಳಿಗೆ ಪ್ರದಾನ ಮಾಡಲಾಗುವುದು.ಭಕ್ತರಿಗೆ ಆಶೀರ್ವಚನ ನೀಡಿದ ಡಾ.ಕರಿವೃಷಭ ದೇಶೀಕೇಂದ್ರ ಮಹಾಸ್ವಾಮಿಗಳು ವೀರಶೈವ ಧರ್ಮ ಆಲದ ಮರವಿದ್ದಂತೆ. ನಾಲ್ಕು ಸಾವಿರ ವರ್ಷಗಳ ಇತಿಹಾಸವಿರುವ ವೀರಶೈವ ಧರ್ಮ ಸರ್ವರ ಹಿತ ಕಾಯುವ ಧರ್ಮವಾಗಿದೆ ಎಂದರು.ಈ ವೇಳೆ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮಿಜಿ, ಸಮಾಜದ ಮುಖಂಡರಾದ ಗುರುಚನ್ನಬಸವಾರಾಧ್ಯ, ಎಸ್.ಎಂ.ಕುಮಾರಸ್ವಾಮಿ, ಮುಖ್ಯ ಶಿಕ್ಷಕ ನಟೇಶ್, ಚಂದ್ರಶೇಖರ್, ಸುನಿಲ್ ಬಾಬು, ಡಾ.ರುದ್ರಯ್ಯ ಹಿರೇಮಠ್, ಅಂಬಿಕಮ್ಮ, ನಿರ್ಮಲಾ, ಗಣೇಶ್, ಚಿದಾನಂದ್, ರೇಣುಕೇಶ್, ವಿಶ್ವನಾಥ್, ವಕೀಲ ಧನಪಾಲ್, ಮಲ್ಲಿಕಾರ್ಜುನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ನಟೇಶ್ ಸ್ವಾಗತಿಸಿದರು. ಸುನಿಲ್ ಬಾಬು ಕಾರ್ಯಕ್ರಮ ನಿರೂಪಿಸಿದರು.