ಯೋಗ ವಿಶ್ವಕ್ಕೆ ಭಾರತದ ಕೊಡುಗೆ

KannadaprabhaNewsNetwork | Published : Jun 22, 2024 12:55 AM

ಸಾರಾಂಶ

ಯೋಗವು ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಯೋಗ ಮಾಡುವುದರಿಂದ ರೋಗದಿಂದ ದೂರವಾಗಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಯೋಗಾಚಾರ್ಯ ಬಾಲಗಾಂವ ಗುರುದೇವ ಆಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಯೋಗವು ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಯೋಗ ಮಾಡುವುದರಿಂದ ರೋಗದಿಂದ ದೂರವಾಗಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಯೋಗಾಚಾರ್ಯ ಬಾಲಗಾಂವ ಗುರುದೇವ ಆಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ವಿಜಯಪುರ ಅನುಗ್ರಹ ಆಸ್ಪತ್ರೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ 10ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾಪಕ್ಕೆ ಸುಮಾರು 195 ದೇಶಗಳು ವಿಶ್ವ ಯೋಗ ದಿನಾಚರಣೆ ಒಪ್ಪಿಗೆ ನೀಡುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದೆ. ವಿದೇಶಿಗರು ಭಾರತಕ್ಕೆ ಬಂದು ಯೋಗ ಕಲಿಯುತ್ತಿದ್ದಾರೆ. ನಮ್ಮನ್ನು ನಾವು ಅರಿತುಕೊಳ್ಳಲು ಜೀವನದಲ್ಲಿ ಅಷ್ಟಾಂಗ ಯೋಗದ ಪ್ರಾಮುಖ್ಯತೆ, ಮನಸ್ಸಿನ ಏಕಾಗ್ರತೆ ಕುರಿತು ಹಾಗೂ 21 ಆಸನಗಳನ್ನು, 21 ದಿನಗಳ ಕಾಲ ಮಾಡಿದರೆ 21ರ ತರುಣನ ಹಾಗೆ ಕಾಣುವಿರಿ. ಯೋಗದಿಂದ ಆರೋಗ್ಯ, ಆಯುಷ್ಯವೃದ್ಧಿ ಆಗುತ್ತದೆ ಎಂದು ಯೋಗಾಭ್ಯಾಸವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು, ನಿತ್ಯ ಯೋಗಾಭ್ಯಾಸದಿಂದ ಮಾತ್ರ ಉತ್ತಮ ಆರೋಗ್ಯ ಸಾಧ್ಯ. ನಿರಂತರ 10 ವರ್ಷಗಳಿಂದ ಜಗತ್ತಿಗೆ ಯೋಗವನ್ನು ಪರಿಚಯಿಸಿ ಭಾರತ ವಿಶ್ವಕ್ಕೆ ಆರೋಗ್ಯವನ್ನು ಕೊಟ್ಟಿದೆ. ಯೋಗ ಆಚರಣೆ ಆಗದೇ ನಮ್ಮ ದೈನಂದಿನ ಬದುಕಿನಲ್ಲಿ ಯೋಗಕ್ಕೆ ಸ್ವಲ್ಪ ಸಮಯ ಕೊಟ್ಟು ಆರೋಗ್ಯವನ್ನು ಸದೃಢವಾಗಿಸಿ ಕೊಳ್ಳಬೇಕು ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿದ ಡಾ.ಪ್ರಭುಗೌಡ ಅವರ ತಂಡದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಮಾತನಾಡಿ, ಯೋಗವು ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಎಲ್ಲರೂ ತಮ್ಮ ದಿನನಿತ್ಯದ ಕಾರ್ಯದಲ್ಲಿ ಯೋಗ ಅಳವಡಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಅವರು ಮಾತನಾಡಿ, ವಿಶ್ವಕ್ಕೆ ಯೋಗದ ಮಹತ್ವವನ್ನು ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಮನುಷ್ಯ ಉತ್ತಮ ಆರೋಗ್ಯದಿಂದ ಇದ್ದರೆ ಮಾತ್ರ ಉತ್ತಮ ಜೀವನ ನಡೆಸಬಹುದು. ಇದಕ್ಕೆ ಪೂರಕವಾಗುವಂತೆ ಯೋಗ, ಧ್ಯಾನ ಅವಶ್ಯಕ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪಟ್ಟಣದ ಸದಯ್ಯನ ಮಠದ ಷ.ಬ್ರ ಶ್ರೀ ವೀರಗಂಗಾಧರ ಶಿವಾಚಾರ್ಯರು ವಹಿಸಿದ್ದರು. ಸಾನ್ನಿಧ್ಯವನ್ನು ಪಟ್ಟಣದ ಗದ್ದಗಿಮಠದ ಶ್ರೀ, ಪರದೇಶಿ ಮಠದ ಶ್ರೀ, ನಿವಾಳಖೇಡದ ಬಸವಾನಂದ ಶ್ರೀಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ವಹಿಸಿದ್ದರು.

Share this article