ಭಾರತ ಅಭಿವೃದ್ಧಿ ಆಗಲು ಬಹುಆಯಾಮಕಾರ್ಯತಂತ್ರ ಅಗತ್ಯ: ಡಾ। ರಂಗರಾಜನ್‌

KannadaprabhaNewsNetwork |  
Published : Jun 20, 2024, 01:01 AM IST
ಡಾ.ಬಿ.ಆರ್‌.ಅಂಬೇಡ್ಕರ್‌ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ. ಸಿ. ರಂಗರಾಜನ್ , ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ಕುಲಪತಿ ಡಾ. ಎಸ್.ಆರ್. ಭಾನುಮೂರ್ತಿ ಮತ್ತಿತರರಿದ್ದರು. | Kannada Prabha

ಸಾರಾಂಶ

ಡಾ। ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯದ (ಬೇಸ್‌) ಮೊದಲ ಘಟಿಕೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತವು ತನ್ನ ಸ್ವಾತಂತ್ರ್ಯದ ಶತಮಾನೊತ್ಸವದ ವೇಳೆಗೆ (2047) ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಒಟ್ಟು ದೇಶೀಯ ಉತ್ಪನ್ನ, ರಫ್ತು ಸೇರಿದಂತೆ ಒಟ್ಟಾರೆ ಪ್ರಗತಿಯ ವಿಚಾರಗಳಲ್ಲಿ ಸ್ಪಷ್ಟ ಹಾಗೂ ಬಹುಆಯಾಮದ ಕಾರ್ಯತಂತ್ರ ಹೊಂದಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ। ಸಿ.ರಂಗರಾಜನ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ನಡೆದ ಡಾ। ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯದ (ಬೇಸ್‌) ಮೊದಲ ಘಟಿಕೋತ್ಸವದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು (ಐಎಂಎಫ್) ಪ್ರಸ್ತುತ 13,845 ಡಾಲರ್ ಮತ್ತು ಅದಕ್ಕಿಂತ ಹೆಚ್ಚಿನ ತಲಾದಾಯ ಹೊಂದಿರುವ ದೇಶಗಳನ್ನು ಅಭಿವೃದ್ಧಿ ಹೊಂದಿದ ದೇಶಗಳೆಂದು ವರ್ಗೀಕರಿಸುತ್ತವೆ. ಇದು ಭಾರತದ ಸ್ವಾತಂತ್ರ್ಯ ಶತಮಾನೋತ್ಸವದ ವೇಳೆಗೆ ಮತ್ತಷ್ಟು ಹೆಚ್ಚಳವಾಗಲಿದೆ. ಪ್ರಸಕ್ತ ಭಾರತದ ತಲಾದಾಯ ಕೇವಲ 2,500 ಡಾಲರ್ (ಐಎಂಎಫ್ ವರದಿ 2024ರ ಏಪ್ರಿಲ್) ಇದೆ. ಇದು ಭಾರತ ಅಭಿವೃದ್ಧಿ ರಾಷ್ಟ್ರವಾಗಲು ಸಾಗಬೇಕಾದ ದಾರಿ ಹೇಗಿದೆ, ಸಾಧಿಸಬೇಕಾದ ಪ್ರಗತಿ ಎಷ್ಟು ಎನ್ನುವುದನ್ನು ತೋರಿಸುತ್ತದೆ ಎಂದರು.

ಎರಡನೇ ಮಹಾಯುದ್ಧದ ನಂತರ ಪೂರ್ವ ಏಷ್ಯಾ ದೇಶಗಳು ರಫ್ತು ಬೆಳವಣಿಗೆಗೆ ತನ್ನದೇ ತಂತ್ರಗಳನ್ನು ಅಳವಡಿಸಿಕೊಂಡು ತ್ವರಿತ ಪ್ರಗತಿ ಸಾಧಿಸಿದವು. ಇದರಲ್ಲಿ ಚೀನಾ ಒಂದು. 1970ರಲ್ಲಿ ಚೀನಾ ಮತ್ತು ಭಾರತದ ರಫ್ತು ಶೇ.0.6 ಆಗಿತ್ತು. 2022ರ ವೇಳೆಗೆ ಚೀನಾದ ರಫ್ತು ಪ್ರಗತಿ ಶೇ.11.9ಕ್ಕೆ ಏರಿದರೆ, ಭಾರತದ್ದು ಮಾತ್ರ ಶೇ.2.5 ಆಗಿತ್ತು. 1991-92 ರಿಂದಲೂ ಅದೇಶದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಭಾರತದ ಅಭಿವೃದ್ಧಿ ವಿಚಾರದಲ್ಲಿ ಸುಧಾರಣಾ ಕಾರ್ಯಸೂಚಿಯನ್ನು ಅನುಸರಿಸುತ್ತಿವೆ. ಆದರೆ, ಜಾಗತಿಕವಾಗಿ ಬೇರೆ ಬೇರೆ ದೇಶಗಳಲ್ಲಿ ಆಗುತ್ತಿರುವ ಅಭಿವೃದ್ಧಿ ದರವನ್ನು ಗಮನಿಸಿದಾಗ ಭಾರತ ತನ್ನ ಗುರಿಸಾಧನೆಗೆ ಬಹು ಆಯಾಮದ ಕಾರ್ಯತಂತ್ರ ಹೊಂದಿರಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಎಲ್ಲ ಕ್ಷೇತ್ರಗಳ ಬೆಳವಣಿಗೆಗೆ ಅಗತ್ಯ ನೆರವು ಹಾಗೂ ಉತ್ತೇಜನ ನೀಡುವ ಕೆಲಸ ಮಾಡಬೇಕು ಎಂದರು.

ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮಾತನಾಡಿ, ಡಾ। ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ ಮತ್ತು ನೀತಿಗಳನ್ನು ಆಧರಿಸಿ ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಗೆ ಅನೇಕ ನಿರ್ಧಾರಗಳನ್ನು ಕೈಗೊಂಡಿದೆ. ಇದರಿಂದ ಭಾರತದ ಆರ್ಥಿಕತೆ ಬಲಿಷ್ಠಗೊಳ್ಳುತ್ತಿದ್ದು ಅಭಿವೃದ್ಧಿ ಮಥದತ್ತ ಸಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್‌, ಬೇಸ್ ಕುಲಪತಿ ಡಾ। ಎಸ್.ಆರ್.ಭಾನುಮೂರ್ತಿ, ಕುಲಸಚಿವೆ ವಿದ್ಯಾಶ್ರೀ ಚಂದರಗಿ, ಪರೀಕ್ಷಾ ನಿಯಂತ್ರಕ ಡಾ। ನಾಗೇಶ್ವರ್ ಬಂಸೋಡೆ, ಹಣಕಾಸು ಅಧಿಕಾರಿ ಪ್ರಶಾಂತ್‌ಕುಮಾರ್ ಉಪಸ್ಥಿತರಿದ್ದರು.ನಾಲ್ವರಿಗೆ ಚಿನ್ನದ ಪದಕ

ಇದೇ ವೇಳೆ ಬೇಸ್‌ನ ಮೊದಲ ಘಟಿಕೋತ್ಸವದಲ್ಲಿ ರ್‍ಯಾಂಕ್‌ ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 12 ವಿದ್ಯಾರ್ಥಿಗಳಿಗೆ ಶ್ರೇಯಾಂಕ ಪ್ರಮಾಣ ಪತ್ರ ಸೇರಿದಂತೆ ಒಟ್ಟು 180 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆ.ಎಸ್.ಪುಟ್ಟಣ್ಣಯ್ಯ ಆದರ್ಶ ಎಲ್ಲಾ ಕಾಲಕ್ಕೂ ಮಾದರಿ, ಅನುಸರಣೀಯ: ನಾಗತಿಹಳ್ಳಿ ಚಂದ್ರಶೇಖರ್
ಮೇಲುಕೋಟೆ: ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ