ಜ್ಞಾನದಿಂದ ಜಗತ್ತು ಗೆದ್ದ ಭಾರತ ವಿಶ್ವಗುರು: ಚ.ರಾ. ನರೇಂದ್ರ

KannadaprabhaNewsNetwork | Updated : Jan 16 2024, 03:02 PM IST

ಸಾರಾಂಶ

ಪಾಶ್ಚಿಮಾತ್ಯರು ಬಾಹ್ಯ ಸೌಂದರ್ಯಕ್ಕೆ ಮಹತ್ವ ಕೊಟ್ಟರೆ ಮನುಷ್ಯನ ಮನಸ್ಸಿನ ಆಳ ಅರಿತು ಸುಸಂಸ್ಕೃತ ಜೀವನ ನಡೆಸುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟವರು ನಮ್ಮ ಪೂರ್ವಜರು. ಇದು ಇಂದಿನ ವರೆಗೂ ನಡೆದುಕೊಂಡು ಬಂದಿದೆ.

ಗೋಕರ್ಣ: ಜಗತ್ತನ್ನು ಜ್ಞಾನದ ಮೂಲಕ ಗೆದ್ದಿರುವ ಭಾರತ ವಿಶ್ವಗುರು ಆಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕ ಚ.ರಾ. ನರೇಂದ್ರ ಹೇಳಿದರು.

ಆರ್‌ಎಸ್‌ಎಸ್‌ ಗೋಕರ್ಣ ತಾಲೂಕು ವತಿಯಿಂದ ಭಾನುವಾರ ಸಂಜೆ ಇಲ್ಲಿನ ತಾರಮಕ್ಕಿಯಲ್ಲಿ ನಡೆದ ಸಂಕ್ರಾಂತಿ ಮಹೋತ್ಸವ ಹಾಗೂ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪಾಶ್ಚಿಮಾತ್ಯರು ಬಾಹ್ಯ ಸೌಂದರ್ಯಕ್ಕೆ ಮಹತ್ವ ಕೊಟ್ಟರೆ ಮನುಷ್ಯನ ಮನಸ್ಸಿನ ಆಳ ಅರಿತು ಸುಸಂಸ್ಕೃತ ಜೀವನ ನಡೆಸುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟವರು ನಮ್ಮ ಪೂರ್ವಜರು. 

ಇದು ಇಂದಿನ ವರೆಗೂ ನಡೆದುಕೊಂಡು ಬಂದಿದ್ದು, ನಿರಂತರ ಹಾಗೂ ಶಾಶ್ವತವಾಗಿ ದೇಶದ ತತ್ವಾದರ್ಶ ಪ್ರತಿಪಾದಿಸುತ್ತಿದೆ ಎಂದರು.ಬೆಳಕು ಹೆಚ್ಚಾಗಿ ಕತ್ತಲು ಕಡಿಮೆಯಾಗುವ ಸಂಕ್ರಮಣ ಈ ದಿನ. ಎಲ್ಲರ ಬದುಕಲ್ಲಿ ಅ ಅಜ್ಞಾನ ತೊರೆದು ಜ್ಞಾನದ ಬೆಳಕು ಹರಿಯಲಿ. ಅದರಂತೆ ದೇಶವು ಸಮೃದ್ಧಿಯಿಂದ ಪ್ರಜ್ವಲಿಸಲಿ ಎಂದರು.

ವೇ. ಗಣೇಶ್ವರ್ ದೀಕ್ಷಿತ್ ಮಾತನಾಡಿ, ಪ್ರತಿಯೊಬ್ಬರೂ ರಾಷ್ಟ್ರ ರಕ್ಷಣೆಗಾಗಿ ಬದ್ಧರಾಗಿರಬೇಕು. ನಮ್ಮಲ್ಲೆ ಇರುವ ದೇಶ ವಿರೋಧಿಗಳ ಕುರಿತು ಜಾಗೃತವಾಗಿದ್ದು, ಕೆಟ್ಟ ಯೋಚನೆಗಳಿಂದ ಸದಾ ದೂರ ಇರಬೇಕು ಎಂದು ಹೇಳಿದರು. ಪ್ರಾಂತ ಸಹಕಾರ್ಯವಾಹಕ ಟಿ. ಪ್ರಸನ್ನ ಮತ್ತಿತರರು ಹಾಜರಿದ್ದರು.

ಸ್ವಂಯಂ ಸೇವಕರಿಂದ ಪಥ ಸಂಚಲನ:

ಇದಕ್ಕೂ ಮೊದಲು ನೂರಾರು ಸ್ವಯಂ ಸೇವಕರಿಂದ ಪಥ ಸಂಚಲನ ನಡೆಯಿತು. ಮುಖ್ಯಕಡಲ ತೀರದಿಂದ ಮಹಾಬಲೇಶ್ವರ ದೇವಸ್ಥಾನ ರಥಬೀದಿ ಮೂಲಕ ಸಾಗಿದ ತಾರಮಕ್ಕಿಯಲ್ಲಿನ ಸಮಾವೇಶ ಸ್ಥಳದಲ್ಲಿ ಕೊನೆಗೊಂಡಿತು. 

ಆಕರ್ಷಕ ವಾದ್ಯಘೋಷದೊಂದಿಗೆ ಸಾಗಿದ ಈ ಪಥ ಸಂಚಲನ ಎಲ್ಲರನ್ನು ಆಕರ್ಷಿಸಿತು. ಕೆಲವೆಡೆ ಹೂವುಗಳನ್ನು ಎಸೆಯಲಾಯಿತು. ಕುಮಟಾ ಸಿಪಿಐ. ತಿಮ್ಮಪ್ಪ ನೇತೃತ್ವದಲ್ಲಿ ಪಿಎಸ್ಐ ರವೀಂದ್ರ ಬಿರಾದಾರ, ಸುಧಾ ಅಘನಾಶಿನಿ ಮತ್ತು ಪೊಲೀಸ್ ಸಿಬ್ಬಂದಿ ಪಥ ಸಂಚಲನದ ವೇಳೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

Share this article