ಸಂಡೂರು: 2047 ರೊಳಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ - ಡಾ.ಗೋವಿಂದರಾವ್

KannadaprabhaNewsNetwork | Updated : Dec 23 2024, 12:41 PM IST

ಸಾರಾಂಶ

3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡುವಲ್ಲಿ ಅಗತ್ಯ ಕೌಶಲ್ಯ ಹೊಂದಿದ ಯುವಕರ ಪಾತ್ರ ಮಹತ್ವದ್ದಾಗಿದೆ

ಸಂಡೂರು: 2047 ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳಾಗಲಿವೆ. 2047 ರೊಳಗೆ ನಮ್ಮ ದೇಶವನ್ನು ವಿಕಸಿತ ಭಾರತವನ್ನಾಗಿ ರೂಪಿಸಲು ಮತ್ತು ಜಗತ್ತಿನ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡುವಲ್ಲಿ ಅಗತ್ಯ ಕೌಶಲ್ಯ ಹೊಂದಿದ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ಪರಿಹಾರ ಆಯೋಗದ ಅಧ್ಯಕ್ಷ ಡಾ.ಎಂ. ಗೋವಿಂದರಾವ್ ಅಭಿಪ್ರಾಯಪಟ್ಟರು.

ಪಟ್ಟಣದ ಸ್ಮಯೋರ್ ಸಂಸ್ಥೆಯ ಎಸ್.ಆರ್.ಎಸ್ ಶಾಲೆಯ ಡೈಮಂಡ್ ಜ್ಯೂಬಿಲಿ ಹಾಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ೧೨ನೇ ಆದರ್ಶ ಉಪನ್ಯಾಸ ಕಾರ್ಯಕ್ರಮದಲ್ಲಿ 2047 ರ ಹೊತ್ತಿಗೆ ಭಾರತವು ವಿಕಸಿತ ರಾಷ್ಟçವಾಗುವಲ್ಲಿನ ಸವಾಲುಗಳು ಎನ್ನುವ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ದೇಶವನ್ನು ವಿಕಸಿತ ದೇಶವನ್ನಾಗಿಸುವಲ್ಲಿ ಮತ್ತು ವಿಶ್ವದ ೩ನೇ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವಲ್ಲಿ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಿದೆ. ಗುಣ ಮಟ್ಟದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇವುಗಳಿಗೆ ಹೆಚ್ಚಿನ ಮಹತ್ವ ನೀಡುವುದುರಿಂದ, ಉತ್ಪಾದಕ ಶಕ್ತಿ ಹೆಚ್ಚಲಿದೆ. ಇದು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಹೆಚ್ಚಿನ ಆದಾಯವನ್ನು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಬೇಕಿದೆ. ರಾಷ್ಟ್ರೀಯ ಮತ್ತು ತಲಾದಾಯವನ್ನು ಹೆಚ್ಚಿಸಬೇಕಿದೆ. ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಬೇಕಿದೆ. ಅಗತ್ಯ ಕೌಶಲ್ಯ ಇಲ್ಲದ ಕಾರಣ, ಪದವಿ ಮುಗಿಸಿ ಹೊರ ಬರುವ ಹೆಚ್ಚಿನ ಪದವೀಧರರು ನಿರುದ್ಯೋಗಿಗಳಾಗಿ ಉಳಿದುಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿನ ಸ್ಪರ್ಧೆಯನ್ನು ಎದುರಿಸಲು ಅಗತ್ಯವಾದ ಕೌಶಲ್ಯವನ್ನು ಬೆಳೆಸಬೇಕಿದೆ. ವಿತ್ತೀಯ ಕೊರತೆಯನ್ನು ನಿಯಂತ್ರಿಸಬೇಕಿದೆ. ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಬೇಕು ಎಂಬುದನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದರು. ಅಲ್ಲದೆ, ಅಧಿಕಾರ ವಿಕೇಂದ್ರೀಕರಣ, ಶಿಕ್ಷಣ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಎಂ.ವೈ. ಘೋರ್ಪಡೆಯವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಅತಿಥಿಯಾಗಿ ಆಗಮಿಸಿದ್ದ ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಅಜಯ್ ಘೋರ್ಪಡೆಯವರು ಮಾತನಾಡಿ, ವಿದ್ವಾಂಸರು, ದಾರ್ಶನಿಕರು ಮತ್ತು ಚಿಂತನಶೀಲ ವ್ಯಕ್ತಿಗಳಾಗಿರುವ ಡಾ.ಎಂ. ಗೋವಿಂದರಾವ್ ಅವರನ್ನು ೧೨ನೇ ಆದರ್ಶ ಉಪನ್ಯಾಸಕರಾಗಿ ಆಹ್ವಾನಿಸಲು ನಮಗೆ ತುಂಬ ಹೆಮ್ಮೆ ಎನಿಸುತ್ತದೆ. ಅವರ ಉಪನ್ಯಾಸದಿಂದ ಅವರ ಅಪಾರ ತಿಳಿವಳಿಕೆ ಮತ್ತು ಮುಂದಾಲೋಚನೆಯ ದೃಷ್ಟಿಕೋನಗಳು ನಿಸ್ಸಂದೇಹವಾಗಿ ಅರ್ಥಪೂರ್ಣ ಚರ್ಚೆಗಳನ್ನು ಹುಟ್ಟು ಹಾಕುತ್ತವೆ. ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ನಮ್ಮ ಪಾತ್ರಗಳ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸಲು ನಮ್ಮನ್ನು ಪ್ರೇರೇಪಿಸುತ್ತವೆ ಎಂದರು.

ಸ್ಮಯೋರ್ ಸಂಸ್ಥೆಯ ಛೇರಮನ್ ಟಿ.ಆರ್. ರಘುನಂದನ್ ಮಾತುಗಳಲ್ಲಿ ಎಂ.ವೈ. ಘೋರ್ಪಡೆ ಅವರೊಂದಿಗೆ ತಮ್ಮ ಹಾಗೂ ಡಾ. ಗೋವಿಂದ್ ರಾವ್ ಅವರ ಒಡನಾಟ ಸ್ಮರಿಸಿದರು.

ಜಿ.ಎನ್. ಈಶ್ವರ್ ಮತ್ತು ಅನ್ನಪೂರ್ಣ ಮಾಧುರಿ ಕಾಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಘೋರ್ಪಡೆ ರಾಜ ವಂಶಸ್ಥರಾದ ಸೂರ್ಯಪ್ರಭ ಅಜಯ್ ರಾಜೆ ಘೋರ್ಪಡೆ, ಏಕಾಂಬರ್ ಅಜಯ್ ಘೋರ್ಪಡೆ, ಸಂಡೂರು ಎಜ್ಯುಕೇಷನ್ ಸೊಸೈಟಿಯ ಕಾರ್ಯದರ್ಶಿ ಜಗದೀಶ ಬಸಾಪುರ, ಶಿವಪುರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆಶಿಯಾ ಬಾನು ಸೇರಿದಂತೆ ಸ್ಮಯೋರ್ ಸಂಸ್ಥೆಯ ಅಧಿಕಾರಿಗಳು, ಸಂಡೂರು ಪಾಲಿಟೆಕ್ನಿಕ್, ಸಂಡೂರು ಎಜ್ಯುಕೇಷನ್ ಸೊಸೈಟಿ, ಎಸ್.ಆರ್.ಎಸ್ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಡೂರಿನ ಎಸ್.ಆರ್.ಎಸ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೧೨ನೇ ಆದರ್ಶ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಸಂಡೂರಿನ ಎಸ್.ಆರ್.ಎಸ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೧೨ನೇ ಆದರ್ಶ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ಪರಿಹಾರ ಆಯೋಗದ ಅಧ್ಯಕ್ಷ ಡಾ.ಗೋವಿಂದರಾವ್ ೨೦೪೭ರ ಹೊತ್ತಿಗೆ ಭಾರತವು ವಿಕಸಿತ ರಾಷ್ಟ್ರವಾಗುವಲ್ಲಿನ ಸವಾಲುಗಳ ಕುರಿತು ಉಪನ್ಯಾಸ ನೀಡಿದರು.

Share this article