ಭಾರತೀಯ ಸೇನೆಗೆ ವಿಶ್ವದಲ್ಲೇ ಅಗ್ರಪಂಕ್ತಿಯ 4ನೇ ಸ್ಥಾನ: ಸೋಮಶೇಖರ

KannadaprabhaNewsNetwork | Published : Jan 21, 2024 1:36 AM

ಸಾರಾಂಶ

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ತರೀಕೆರೆಯಲ್ಲಿ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ತರೀಕೆರೆ

ಪ್ರವಾಸಗಳಿಂದಲೂ ಹೆಚ್ಚು ಶಿಕ್ಷಣ ಕಲಿತುಕೊಳ್ಳುವ ಅವಕಾಶ ಇರುತ್ತದೆ ಎಂದು ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಹೇಳಿದರು.ಅವರು, ಶನಿವಾರ ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಪಟ್ಟಣದ ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಭಾರತೀಯ ಸೇನೆಯ ಲೆಫ್ಟಿನಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರೊಂದಿಗೆ ಏರ್ಪಾಡಾಗಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿ, ಸೈನಿಕ ಶಾಲೆಗಳಿಗೆ ಹೆಚ್ಚು ಪ್ರವಾಸ ಮಾಡಬೇಕು, ಶಾಲೆಯಲ್ಲಿ ಮಾತನಾಡಲು ಶಿಕ್ಷಕರು ಮಕ್ಕಳಿಗೆ ಹೆಚ್ಚು ಅವಕಾಶ ಕೊಡಬೇಕು, ದೇಶದ ರಕ್ಷಣೆಗಾಗಿ ಸೈನಿಕರು ಗಡಿ ಪ್ರದೇಶದಲ್ಲಿ ಇರುತ್ತಾರೆ. ದೇಶದ ಒಳಗಡೆಯೂ ಶಾಂತಿ ಕಾಪಾಡಲು ಮಿಲಿಟರಿ ಸೇನೆ ಬರುತ್ತದೆ. ಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಕ್ಷಮತೆ ಅಗತ್ಯ ಎಂದರು.

ಬೇರೆ ಬೇರೆ ಹವಾಗುಣಗಳಲ್ಲಿ ಇರುವ ಹಾಗೆ ಸೈನಿಕರಿಗೆ ತರಬೇತಿ ನೀಡಲಾಗಿರುತ್ತದೆ. ಅಗ್ನಿಪಥ ಯೋಜನೆ ಮೂಲಕ ಅಗ್ನಿವೀರರಾಗಿ ಸೇವೆ ಸಲ್ಲಿಸಬಹುದು. ಹತ್ತನೇ ತರಗತಿಯ ನಂತರ ಸೇನೆಗೆ ಸೇರಲು ಸನ್ನದ್ಧರಾಗಬೇಕು. ಸೇನೆಯಲ್ಲಿ ಸೇವೆ ಸಲ್ಲಿಸಲು ಹೆಣ್ಣು ಮಕ್ಕಳಿಗೂ ಹೆಚ್ಚು ಅವಕಾಶ ಇರುತ್ತದೆ. ಸೈನಿಕರ ತರಬೇತಿ ಶಾಲೆಗಳಲ್ಲಿ ಹೆಣ್ಣು ಮಕ್ಕಳೂ ಸೈನಿಕ ತರಬೇತಿ ಪಡೆಯುತ್ತಿದ್ದಾರೆ. ಸೇನೆಯಲ್ಲಿರುವಾಗಲೇ ಶಿಕ್ಷಣವನ್ನು ಮುಂದುವರಿಸಬಹುದು ಎಂದರು.

ಸವಾಲುಗಳನ್ನು ಎದುರಿಸಲು ಸೈನಿಕರು ಸದಾಸಿದ್ಧರಾಗಿರುತ್ತಾರೆ. ಹಾಗೆಯೇ ತರಬೇತಿ ಪಡೆದಿರುತ್ತಾರೆ. ಸೈನಿಕ ತರಬೇತಿ ಶಾಲೆಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ 4 ಗಂಟೆಯಿಂದಲೇ ದೈಹಿಕ ಸದೃಢತೆಗಾಗಿ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ. ಸೇನೆಯಲ್ಲಿ ಸೇವೆ ಸಲ್ಲಿಸಲು ಯುವಜನತೆಗೆ ಸ್ಫೂರ್ತಿ ಒಳಗಿನಿಂದಲೇ ಬರಬೇಕು, ಪೋಷಕರು ಶಿಕ್ಷಕರು ಪ್ರೋತ್ಸಾಹಿಸಬೇಕು, ನಮ್ಮ ಸೇನೆಯು ಅಧುನಿಕ ಯುದ್ಧ ಸಾಮಗ್ರಿಗಳನ್ನು ಹೊಂದಿದೆ. ಹಳ್ಳಿಯ ಜೀವನ ನನಗೆ ಸಂತೋಷ ಕೊಟ್ಟಿದೆ, ಹಳ್ಳಿಗೆ ಹಿಂತಿರುಗಿರುವುದರಿಂದ ನಿಮ್ಮ ಜೊತೆ ಇಂತಹ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಒಳ್ಳೆಯ ಅವಕಾಶ ದೊರಕಿದೆ. ಭಾರತೀಯ ಸೇನೆಯು ವಿಶ್ವದಲ್ಲಿಯೇ 4ನೇ ಅಗ್ರಸ್ಥಾನ ಪಡೆದಿದೆ ಎಂದವರು ಹೇಳಿದರು.ರಚನಾ ಶ್ರೀನಿವಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಸ್ವಯಂಪ್ರೇರಿತರಾಗಿ ಭಾರತೀಯ ಸೇನೆಯನ್ನು ಅತಿ ಹೆಚ್ಚು ಜನರು ಸೇರುತ್ತಾರೆ, ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರು ಸೇನೆಯಲ್ಲಿ ಅತ್ಯಂತ ಉನ್ನತ ಸ್ಥಾನದ್ಲಲಿದ್ದರೂ ಸರಳ ಜೀವನ ನೆಡೆಸುತ್ತಿದ್ದಾರೆ, ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಸಂತೋಷವನ್ನು ವ್ಯಕ್ತಪಡಿಸಿ ಇಲ್ಲಿ ಭಾಗವಹಿಸಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ಅವರು ಹೇಳಿದರು.

ಇದೇ ವೇಳೆ ವಿವೇಕ್ ರಾವುತ್ ಮಾತನಾಡಿದರು. ಪಟ್ಟಣದ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಗೀತಾ ಹರ್ಷ ಮತ್ತು ತಂಡದವರು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರನ್ನು ಸನ್ಮಾನಿಸಿದರು.ಒಂದೂ ಮುಕ್ಕಾಲು ಗಂಟೆಗೂ ಹೆಚ್ಚು ಸಮಯ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನಿವೃತ್ತ ಲೆಫ್ಟಿನೆಂಟ್‌ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರು ಉತ್ಸಾಹದಿಂದ ಸವಿಸ್ತಾರವಾಗಿ ಉತ್ತರಿಸಿ ಸಂವಾದದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿ.ಆರ್.ಪಿ.ಶಿಲ್ಪ ನಿರೂಪಿಸಿದರು. ವಾಣಿ ಶ್ರೀನಿವಾಸ್, ಬಿ.ಇ.ಒ.ಗೋವಿಂದಪ್ಪ, ಎಸ್.ಜೆ.ಎಂ.ಕಾಲೇಜು ಪ್ರಾಂಶುಪಾಲ ಕೆ.ಜಿ. ಚವ್ಹಾಣ, ಪಟ್ಟಣದ ವಿವಿಧ ಶಾಲೆಯ ಮಕ್ಕಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this article