ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗಣರಾಜ್ಯ ದಿನವು ದೇಶದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆಯ ಮೂಲಕ ಎಲ್ಲ ಭಾರತೀಯರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಆಡಳಿತಾತ್ಮಕ ಬೆಸುಗೆಯಾಗಿದೆ. ಭಾಷೆ, ಪ್ರದೇಶ, ಜಾತಿ-ಧರ್ಮಗಳ ಭೇದವಿಲ್ಲದೆ ಸಂವಿಧಾನವನ್ನು ಎಲ್ಲರೂ ಅಂತಃಕರಣದಿಂದ ಮನಃಪೂರ್ವಕವಾಗಿ ಸಂತೋಷದಿಂದ ಒಪ್ಪಿ, ಅಪ್ಪಿ ಜೀವನದಲ್ಲಿ ಅಳವಡಿಸಿಕೊಂಡಿರುವ ದಿನವಾಗಿದೆ ಎಂದರು.
ದೇಶದಲ್ಲಿ ಪ್ರತಿಯೊಬ್ಬರಿಗೂ ಸಿಕ್ಕಿರುವ ಸ್ವಾತಂತ್ರ, ಅಭಿವ್ಯಕ್ತಿ, ಅಡಳಿತ, ನೈತಿಕತೆ, ಜೀವನ, ಉದ್ಯೋಗ, ಹಕ್ಕು ಎಲ್ಲವೂ ಸಂವಿಧಾನದ ಕೊಡುಗೆ. ಹೀಗಾಗಿ ಪ್ರತಿಯೊಬ್ಬರೂ ಸಂವಿಧಾನಿಕ ಮೌಲ್ಯಗಳನ್ನು ಅನುಸರಿಸಬೇಕು, ಗೌರವಿಸಬೇಕು ಎಂದು ತಿಳಿಸಿದರು.ಗಾಂಧೀಜಿ ನೇತೃತ್ವದಲ್ಲಿ ಹಿರಿಯರು ತ್ಯಾಗ, ಬಲಿದಾನ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ ಡಾ.ಅಂಬೇಡ್ಕರ್ ನೇತೃತ್ವದ ಸಂವಿಧಾನ ನಿರ್ಮಾತೃಗಳು ಸ್ವಾತಂತ್ರೋತ್ತರ ಭವಿಷ್ಯಕ್ಕೆ ಪ್ರಜಾಪ್ರಭುತ್ವದ ಮಾರ್ಗದರ್ಶನ ನೀಡಿ, ಕಾನೂನಿನ ಚೌಕಟ್ಟುಗಳನ್ನು ರೂಪಿಸಿದರು. ಸಂವಿಧಾನದ ಆಶಯಗಳನ್ನು ಪಾಲಿಸುತ್ತ, ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ದೇಶವನ್ನು ಸುಭದ್ರವಾಗಿ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾಲಯವು ಸ್ಥಾಪನೆಯಾಗಿ ಕೇವಲ 15 ವರ್ಷಗಳಾಗಿವೆ. ಆದರೆ ಇಲ್ಲಿಯ ಅಧ್ಯಾಪಕರು, ವಿದ್ಯಾರ್ಥಿಗಳ ಸಂಘಟಿತ ಪರಿಶ್ರಮ, ಸಂಯೋಜಿತ ಕಾರ್ಯ ಯೋಜನೆಗಳಿಂದಾಗಿ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಉನ್ನತ ಗುರಿ ಸಾಧನೆಯತ್ತ ದಾವಣಗೆರೆ ವಿಶ್ವವಿದ್ಯಾನಿಲಯವು ದಾಪುಗಾಲು ಇಟ್ಟಿದ್ದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.ಶೈಕ್ಷಣಿಕ ಕ್ಷೇತ್ರಗಳಲ್ಲಿ ದೌರ್ಬಲ್ಯಗಳು, ಕೊರತೆಗಳೇ ಪ್ರತಿರೋಧಕ್ಕೆ ಕಾರಣವಾಗಬಾರದು. ಅವುಗಳನ್ನು ಮೆಟ್ಟಿ ಉನ್ನತ ಗುರಿಯತ್ತ ಮುನ್ನುಗ್ಗುವ ಪ್ರಯತ್ನ ಮಾಡಿದಾಗ ಯಶಸ್ಸು ಸಿಗುತ್ತದೆ ಎಂಬುದಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯವೇ ಉದಾಹರಣೆ. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಮೂಲಕ ಅಧ್ಯಾಪಕರು ಯಶಸ್ಸು ಪಡೆದರೆ, ವಿಶ್ವವಿದ್ಯಾಲಯಕ್ಕೆ ನೀಡುವ ಮನ್ನಣೆಯಾಗಿದೆ. ಅಲ್ಲದೆ ಅದೇ ಸಂವಿಧಾನಕ್ಕೆ ಸಲ್ಲಿಸುವ ಗೌರವವೂ ಆಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಕುಲಪತಿ ಪ್ರೊ.ಕುಂಬಾರ ಎಂಪಿಇಡಿ ವಿದ್ಯಾರ್ಥಿಗಳು ನಡೆಸಿದ ಪರೇಡ್ ಮೂಲಕ ಆಗಮಿಸಿ, ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ, ಡೀನ್‌ರಾದ ಪ್ರೊ.ಕೆ.ವೆಂಕಟೇಶ, ಪ್ರೊ.ಎಂ.ಯು. ಲೋಕೇಶ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಅಧ್ಯಾಪಕೇತರರು, ಹೊರಗುತ್ತಿಗೆ ನೌಕರರು ಭಾಗವಹಿಸಿದ್ದರು.