ಕಾರಟಗಿ: ವಿಶ್ವದಲ್ಲಿಯೇ ಭಾರತ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು, ಜಗತ್ತಿನಲ್ಲಿ ನಮ್ಮ ದೇಶ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾಗಿದೆ, ಹೀಗಾಗಿ ಇಡೀ ವಿಶ್ವ ನಮ್ಮ ಸಂವಿಧಾನವನ್ನು ಗೌರವಿಸುತ್ತದೆ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ರಚನೆ ಮಾಡಿಕೊಟ್ಟಿರುವಂತಹ ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳಿಂದ ಭಾರತ ದೇಶ ವಿಶ್ವಮಟ್ಟದಲ್ಲಿ ತಲೆ ಎತ್ತುವಂತಾಗಿದೆ. ನಮ್ಮ ರಾಷ್ಟ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಇತಿಹಾಸ ನೆನಪಿಸಿಕೊಳ್ಳಬೇಕು. ಈ ದೇಶದ ಸಂವಿಧಾನ ಜಾಗತಿಕ ಮಟ್ಟದಲ್ಲಿ ಗೌರವ ಪಡೆದುಕೊಂಡ ಹೆಗ್ಗಳಿಕೆ ಹೊಂದಿದ್ದು, ಎಲ್ಲರೂ ಸೇರಿ ಭವ್ಯ ಭಾರತ ನಿರ್ಮಿಸಲು ಪ್ರತಿಯೊಬ್ಬರು ಕಟಿಬದ್ಧರಾಗಬೇಕು ಎಂದರು.
ತಾಪಂ ಇಓ ಲಕ್ಷ್ಮೀದೇವಿ ಮಾತನಾಡಿ, ನಮ್ಮ ಸಂವಿಧಾನವು ಎಲ್ಲ ನಾಗರಿಕರಿಗೆ ಹಕ್ಕು ಮತ್ತು ಮೂಲ ಕರ್ತವ್ಯ ನೀಡಿದೆ. ನಮ್ಮದು ವಿಶ್ವದ ಅತೀ ದೊಡ್ಡ ಲಿಖಿತ ಸಂವಿಧಾನವಾಗಿದ್ದು ನಾವು ನಮ್ಮ ದೇಶವನ್ನು ವಿಶ್ವದ ಶ್ರೇಷ್ಠ ದೇಶವನ್ನಾಗಿ ಮಾಡಬೇಕಾಗಿದೆ. ಇದು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಅದರ ಬೆಳವಣಿಗೆಗೆ ಹಾಗೂ ಅಭಿವೃದ್ಧಿ ಎತ್ತಿ ತೋರಿಸುತ್ತದೆ ಎಂದರು.ಪುರಸಭೆ ಅಧ್ಯಕ್ಷ ಮಂಜುನಾಥ ಮೆಗೂರ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ ಕರಡು ಸಮಿತಿ ಅಧ್ಯಕ್ಷರಾಗಿ ಹಲವು ದಿನಗಳ ಕಾಲ ವಿವಿಧ ದೇಶದ ಸಂವಿಧಾನ ಅಧ್ಯಯನ ಮಾಡಿ ಸತತ ಪರಿಶ್ರಮದ ಮೂಲಕ ಸಂವಿಧಾನ ರಚಿಸಿ ಅಖಂಡ ಭಾರತಕ್ಕೆ ಅರ್ಪಿಸಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸಮಾನವಾಗಿ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯ ಸಂವಿಧಾನವು ನೀಡಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ, ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಶಿಕ್ಷಣ ಸಂಯೋಜಕ ಶಶಿಧರಸ್ವಾಮಿ ಮಾತನಾಡಿದರು. ಈ ವೇಳೆ ಗ್ರೇಡ್೨ ತಹಸೀಲ್ದಾರ ಷಣ್ಮುಖಪ್ಪ, ಪಿ.ಐ. ಸುಧಿರ ಕುಮಾರ ಬೆಂಕಿ, ಪುರಸಭೆ ಉಪಾಧ್ಯಕ್ಷೆ ಸುಜಾತಾ ನಾಗರಾಜ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ದೇವಪ್ಪ ಬಾವಿಕಟ್ಟಿ, ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿಭೂತಿ ರಾಮಣ್ಣ, ಪುರಸಭೆ ಸದಸ್ಯ ದೊಡ್ಡಬಸವರಾಜ ಬೂದಿ, ಶ್ರೀನಿವಾಸ, ಶೇಖರಪ್ಪ ಗ್ಯಾರೇಜ್ ಸೇರಿದಂತೆ ಇನ್ನಿತರರು ಇದ್ದರು.ಕಾರ್ಯಕ್ರಮಕ್ಕೂ ಮುನ್ನ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಪೊಲೀಸ್ ಗೌರವ ರಕ್ಷೆ ವಂದನೆ ಸ್ವೀಕಾರ ನಡೆಯಿತು.
ಮೆಹೆಬೂಬ ಕಿಲ್ಲೆದಾರ ರಾಷ್ಟ್ರಗೀತೆ ಹಾಗೂ ರೈತಗೀತೆ ಹಾಡಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಾಧಕರಿಗೆ, ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ತಿಮ್ಮಣ್ಣ ನಾಯಕ ಮತ್ತು ವಿಜಯಕುಮಾರ ಕಾರ್ಯಕ್ರಮ ನಿರ್ವಹಿಸಿದರು.