ಕುರುಗೋಡು: ಭಾರತೀಯ ಸಂಸ್ಕೃತಿ ಉಳಿವಿನಲ್ಲಿ ಮೇಟಿ ಮತ್ತು ನಾಟಿ ಮಾಡುವ ವರ್ಗದ ಪಾತ್ರ ಮಹತ್ವದ್ದು. ಈ ವರ್ಗದಲ್ಲಿ ವಿಚ್ಛೇದನ ಪ್ರಕರಣ ಗೌಣ ಎಂದು ಪ್ರತಿಯೊಬ್ಬರೂ ಭಾರತೀಯ ಸಂಸ್ಕೃತಿ ಮತ್ತು ಆಚಾರವನ್ನು ಪಾಲಿಸಬೇಕು ಎಂದು ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು ಹೇಳಿದರು. ಸತಿ- ಪತಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಜತೆಗೆ ಜೀವನದ ಅಂತ್ಯದ ತನಕ ಜೊತೆಯಾಗಿರಬೇಕು ಎಂದರು.
ಸಮೀಪದ ಸಿದ್ದರಾಂಪುರ ಗ್ರಾಮದಲ್ಲಿ ಶ್ರೀಶೈಲ ಕದಳೀವನ ಸಿದ್ದೇಶ್ವರ ತಾತನವರ ೨೧ನೇ ಪುಣ್ಯಸ್ಮರಣೆಯ ಅಂಗವಾಗಿ ಗುರುವಾರ ಜರುಗಿದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಏಷ್ಯಾಖಂಡದಲ್ಲಿಯೇ ಹೆಚ್ಚು ನೈಸರ್ಗಿಕ ಸಂಪತ್ತು ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಳ್ಳಾರಿ ಜಿಲ್ಲೆ ಸಿದ್ದರಾಂಪುರದ ಕದಳೀವನ ಸಿದ್ದೇಶ್ವರ ತಾತನವರಂ ಮಹಾಪುರುಷರಿಂದ ಆಧ್ಯಾತ್ಮಿಕವಾಗಿ ನಾಡಿನ ಗಮನ ಸೆಳೆದಿದೆ ಎಂದರು.ಭೂಮಂಡಲವನ್ನು ಕಾಗದ ಮಾಡಿ, ಸಪ್ತ ಸಾಗರಗಳ ನೀರನ್ನು ಮಸಿ ಮಾಡಿ, ಭೂಮಿ ಮೇಲಿರುವ ಎಲ್ಲ ವೃಕ್ಷಗಳನ್ನು ಲೇಖನಿ ಮಾಡಿ ಬರೆದರೂ ಸಿದ್ದಯ್ಯ ತಾತನವರಂತ ಗುರುಗಳ ಪರಿಪೂರ್ಣ ಮಹಿಮೆ ಬರೆಯಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.
ಕನ್ನಡಿಯಲ್ಲಿ ನೋಡಿದರೆ ಸೌಂದರ್ಯ ಕಾಣುವುದಿಲ್ಲ. ಲಿಂಗದೊಳಗೆ ಸೌಂದರ್ಯವಿದೆ ಎನ್ನುವುದನ್ನು ಲಿಂಗಪೂಜೆ ಮೂಲಕ ತೋರಿಸಿಕೊಟ್ಟವರು ಸಿದ್ದಯ್ಯ ತಾತನವರು ಎಂದರು.ಉಟಕನೂರು ಮರಿಬಸವರಾಜ ರಾಜದೇಶೀಕೇಂದ್ರ ಶಿವಾಚಾರ್ಯರು ಮಾತನಾಡಿ, ಭಕ್ತರನ್ನು ಭಕ್ತಿ ಮತ್ತು ಜ್ಞಾನದ ಮಾರ್ಗದಲ್ಲಿ ನಡೆಸುವ ಕಾರ್ಯಕ್ರಮಗಳ್ನು ಪ್ರತಿವರ್ಷ ಶ್ರೀಮಠದಲ್ಲಿ ಆಯೋಜಿಸುತ್ತಿರುವುದು ಅನುಕರಣೀಯವಾದುದು ಎಂದರು.
ಕದಳೀವನ ಸಿದ್ದೇಶ್ವರ ತಾತನವರ ಮಠದ ಚಿದಾನಂದತಾತ, ಶ್ರೀಶೈಲ ವೀರಭದ್ರ ಶಿವಾಚಾರ್ಯರು ಮಾತನಾಡಿದರು.ವೇದಿಕೆ ಕಾರ್ಯಕ್ರಮದ ಪೂರ್ವದಲ್ಲಿ ಕದಳೀವನ ಸಿದ್ದೇಶ್ವರ ತಾತನವರ ೨೧ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಉತ್ಸವಮೂರ್ತಿಯ ಜತೆಗೆ ಎಮ್ಮಿಗನೂರಿನ ವಾಮದೇವ ಮಹಾಂತ ರಾಜದೇಶೀಕೇಂದ್ರ ಶಿವಾಚಾರ್ಯ ಮತ್ತು ಉಟಕನೂರು ಮರಿಬಸವರಾಜ ರಾಜದೇಶೀಕೇಂದ್ರ ಶಿವಾಚಾರ್ಯ ಶ್ರೀಗಳ ಮೆರವಣಿಗೆ ಗುರುವಾರ ಜರುಗಿತು.
ಈಶ್ವರ ಬೆಟ್ಟದಿಂದ ಆರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠದ ಆವರಣದಲ್ಲಿ ಸಮಾವೇಶಗೊಂಡಿತು.ಸುಮಂಗಳೆಯರ ಕಳಸ, ಡೊಳ್ಳು, ಕಳಸ, ಪೂರ್ಣಕುಂಭ, ನಂದಿಧ್ವಜ, ವೀರಗಾಸೆ, ಸಮಾಳ ಸೇರಿ ಇತರ ಕಲಾತಂಡಗಳು ಭಾಗವಹಿಸಿ ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು.
ಪುಣ್ಯಸ್ಮರಣೆ ಅಂಗವಾಗಿ ೨ ಮಕ್ಕಳಿಗೆ ಅಯ್ಯಾಚಾರ ಮತ್ತು ೧೧ ಜೋಡಿ ಉಚಿತ ಸಾಮೂಹಿಕ ವಿವಾಹ ಜರುಗಿದವು.ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಶ್ರೀ , ಉಟಕನೂರು ಮರಿಬಸವರಾಜ ರಾಜದೇಶೀಕೇಂದ್ರ ಶಿವಾಚಾರ್ಯ ಶ್ರೀಗಳಿಗೆ ಮತ್ತು ಕಾಯಕಯೋಗಿ ಶ್ರೀಮಠದ ಪೀಠಾಧಿಪತಿ ಚಿದಾನಂದತಾತ ತುಲಾಭಾರ ಸೇವೆ ನೆರವೇರಿಸಲಾಯಿತು.
ವೀರಭದ್ರ ಶಿವಾಚಾರ್ಯ, ಸಿರುಗುಪ್ಪ ಬಸವಭೂಷ ಸ್ವಾಮಿ, ಕೊಟ್ಟೂರು ಶ್ರೀ, ಸೋಮಸಮುದ್ರ ಶಾಖಾ ವಿರಕ್ತಮಠದ ಸಿದ್ದಲಿಂಗ ಶ್ರೀ, ರೇವಣ್ಣ ಸಿದ್ದಯ್ಯ ಸ್ವಾಮಿಗಳು, ವೀರಶೈವ ಸ್ವಾಮಿ, ವೇದಮೂರ್ತಿ ಅರ್ಚಕರು , ತೇಜಮೂರ್ತಿ, ವೀರೇಶ್ ಇದ್ದರು.