ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಸಾರಿದ್ದಾರೆ. ಮಹಾ ಕಾವ್ಯದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.ಮಹರ್ಷಿ ವಾಲ್ಮೀಕಿ ಅವರ ಪರಿಕಲ್ಪನೆ, ದೂರದರ್ಶಿತ್ವ ಸ್ಮರಣೀಯವಾದುದು ಎಂದು ಜಿಲ್ಲಾಧಿಕಾರಿ ಅವರು ನುಡಿದರು.
ಅಧ್ಯಯನ ಕಡೆ ಗಮನ ನೀಡಬೇಕು:
ವಿದ್ಯಾರ್ಥಿಗಳು ಸೇನೆ, ವೈದ್ಯಕೀಯ, ಎಂಜಿನಿಯರಿಂಗ್, ವಕೀಲರು, ಪತ್ರಕರ್ತರು ಹಾಗೆಯೇ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು.
ಸಮಾಜಕ್ಕೆ ಉತ್ತಮ ಸಂದೇಶ:
ಮಹರ್ಷಿ ವಾಲ್ಮೀಕಿ ಸೇರಿದಂತೆ ಹಲವು ಮಹಾನ್ ಸಾಧಕರು ಹಾಕಿಕೊಟ್ಟಿರುವ ಹೆಜ್ಜೆ ಗುರುತಿನಂತೆ ನಡೆಯಬೇಕು ಎಂದು ಅವರು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಅವರು ಕ್ರಿ.ಪೂ.ದಲ್ಲಿಯೇ ಒಳ್ಳೆಯ ನಾಗರಿಕ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಮಹಾನ್ ಮೇಧಾವಿಯಾಗಿದ್ದ ಮಹರ್ಷಿ ವಾಲ್ಮೀಕಿ ಅವರು ಇಡೀ ಮಾನವ ಸಮಾಜಕ್ಕೆ ಸಂಸ್ಕಾರ ಕಲಿಸಿದ್ದಾರೆ ಎಂದರು.
ರಾಮಾಯಣವು ರಾಷ್ಟ್ರದ ಪೌರಾಣಿಕ ಇತಿಹಾಸ ಹೊಂದಿದೆ. ರಾಷ್ಟ್ರ ಪ್ರೇಮ ಹಾಗೂ ದೇಶಭಕ್ತಿ ಒಳಗೊಂಡಿದೆ. ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರಂತೆ ಬದುಕು ನಡೆಸಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದರು.
ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು:ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಶಿಕ್ಷಣದ ಮೂಲಕ ವಿಮೋಚನೆ ಪಡೆಯಬೇಕು. ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ಕಾಣಬೇಕು ಎಂದು ಜಮೀರ್ ಅಹಮದ್ ಅವರು ವಿವರಿಸಿದರು.
ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಅಧ್ಯಕ್ಷರಾದ ಅಶೋಕ್ ಅವರು ಮಾತನಾಡಿ, ವಾಲ್ಮೀಕಿ ರಾಮಾಯಣವು ರಾಷ್ಟ್ರದ ಸಂಸ್ಕೃತಿ, ನಾಡು, ನುಡಿ ಹಾಗೂ ಸಹೋದರತ್ವ ಹೊಂದಿದ್ದು, ಇದನ್ನು ಅರಿತು ನಡೆದರೆ ರಾಷ್ಟ್ರ ರಾಮರಾಜ್ಯ ಆಗಲಿದೆ ಎಂದು ಅಭಿಪ್ರಾಯಪಟ್ಟರು.ಮಹರ್ಷಿ ವಾಲ್ಮೀಕಿ ಅವರ ತತ್ವ ಸಂದೇಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಬೇಡರ ಕಣ್ಣಪ್ಪ, ಏಕಲವ್ಯ, ಚಿತ್ರದುರ್ಗದ ಕೋಟೆ ಹೀಗೆ ಹಲವು ಐತಿಹ್ಯಗಳನ್ನು ಸಮಾಜದಲ್ಲಿ ಕಾಣಬಹುದಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ದಿವಾಕರ ಅವರು ಮಾತನಾಡಿ ಪ್ರತಿಯೊಬ್ಬರಿಗೂ ಶಿಕ್ಷಣವೇ ಆಸ್ತಿಯಾಗಿದ್ದು, ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ನಾಗರಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಯಶಸ್ಸು ಗಳಿಸುವಂತಾಗಬೇಕು ಎಂದರು.ಐಟಿಡಿಪಿ ಇಲಾಖೆ ಅಧಿಕಾರಿ ಎಸ್.ಹೊನ್ನೆಗೌಡ, ಭಾಗಮಂಡಲ ಲ್ಯಾಂಪ್ ಸೊಸೈಟಿಯ ಮಿಟ್ಟು ರಂಜಿತ್, ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷರಾದ ಗಂಗಾಧರ, ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರಾದ ಮೇವಾಲಾಲ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶಿವಕುಮಾರ, ಸಮಾಜದ ಮುಖಂಡರಾದ ಪರಮೇಶ್, ಚಂದ್ರು, ದೇವರಾಜು ಇತರರು ಇದ್ದರು.
2024-25 ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ನೀಡಲಾಯಿತು. ಹಾಗೆಯೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರನ್ನು ಗೌರವಿಸಲಾಯಿತು.ಸಮಗ್ರ ಗಿರಿಜನ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕ ಕಾರ್ಯಕ್ರಮ ನೀಡಿ ಗಮನ ಸೆಳೆದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ ಸ್ವಾಗತಿಸಿದರು, ಪವನ್ ಕುಮಾರ್ ನಿರೂಪಿಸಿದರು, ತಿತಿಮತಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.