ಕನ್ನಡಪ್ರಭ ವಾರ್ತೆ ಸುತ್ತೂರು
ಭಾರತೀಯ ಸಂಸ್ಕೃತಿಯು ಮಾನವೀಯತೆಯ ಆಗರ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀಸ್ವಾಮಿ ವೀರೇಶಾನಂದಜಿ ಸರಸ್ವತಿ ಹೇಳಿದರು.ಸುತ್ತೂರು ಶ್ರೀಕ್ಷೇತ್ರದಲ್ಲಿ ವೈದ್ಯಕೀಯ-ಸ್ನಾತಕೋತ್ತರ ಮತ್ತು ದಂತ ವೈದ್ಯ-ಹೌಸ್ ಸರ್ಜನರುಗಳ ಶಿಬಿರದಲ್ಲಿ ಮಾತನಾಡುತ್ತಾ ತಿಳಿಸಿದರು. ವಸುದೈವ ಕುಟುಂಬಕಂದಲ್ಲಿ ನಂಬಿಕೆ ಇರುವ ಭಾರತವು ಇಲ್ಲಿಯವರೆಗೆ ಯಾವುದೇ ದೇಶದ ಮೇಲೆ ಮೊದಲು ಯುದ್ಧಕ್ಕೆ ಹೋಗಿಲ್ಲ. ಭಾರತೀಯರು ಸರ್ವ-ಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಹೊಂದಿದ್ದಾರೆ. ಆಧ್ಯಾತ್ತಿಕ ಶಿಕ್ಷಣದಿಂದ ದೃಢ ಮನಸ್ಸು ಮತ್ತು ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ. ಎಲ್ಲ ಮಹಾತ್ಮರ ಸಂತರ ಜೀವನ ನಮ್ಮೆಲ್ಲರಿಗೂ ಸದಾ ಆದರ್ಶವಾದದ್ದು. ಭಾರತೀಯ ಸಂಸ್ಕೃತಿಯು ತ್ಯಾಗದ ತಳಹದಿಯ ಮೇಲೆ ನಿಂತಿದೆ. ವಿಶ್ವ ಸಂಸ್ಕೃತಿಯ ಮೇಲೆ ತನ್ನ ಪ್ರಭಾವ ಬೀರಿ ವಿಶ್ವಗುರುವಾಗಿದೆ ಎಂದರು.
ಬೆಂಗಳೂರಿನ ಯೋಗ ಸಲಹೆಗಾರರಾದ ಡಾ. ಶ್ರೀಧರ್ ದೇಶಮುಖ್ ಅವರು ವೈದ್ಯರನ್ನು ವೈದ್ಯೋ ನಾರಾಯಣೋ ಹರಿಃ ಎಂದು ನಂಬುತ್ತಾರೆ. ರೋಗಿಗಳಿಗೆ ವೈದ್ಯರೇ ದೇವರಾಗಿರುತ್ತಾರೆ. ರೋಗಗಳನ್ನು ಯೋಗ ಮತ್ತು ಪ್ರಕೃತಿದತ್ತವಾದ ಔಷಧಗಳಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ನೈಸರ್ಗಿಕವಾಗಿ ಸಿಗುವ ಆಹಾರವನ್ನು ಸೇವಿಸಬೇಕು. ದೈಹಿಕ ಚಟುವಟಿಕೆ, ಕ್ರಮಬದ್ಧ ನಿದ್ರೆ, ಉತ್ತಮ ಆಹಾರದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ಪ್ರತೀ ದಿನ ಯೋಗಾಭ್ಯಾಸದಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ ಎಂದರು.ಶಿಬಿರಾರ್ಥಿಗಳು ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ, ದೇಸಿ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಂಜೆ ಮೂಲ ಶ್ರೀಮಠ, ಶ್ರೀ ಸೋಮೇಶ್ವರ ದೇವಸ್ಥಾನ, ಶ್ರೀ ಮಹದೇಶ್ವರರು ರಾಗಿ ಬೀಸಿದ ಕಲ್ಲು ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನಗಳ ದರ್ಶನ ಪಡೆದು ಧನ್ಯತಾ ಭಾವ ಹೊಂದಿದರು. ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಳೆಗಳ ಮಾಹಿತಿಗಳನ್ನು ಆಸಕ್ತಿಯಿಂದ ತಿಳಿದುಕೊಂಡರು. ಅತ್ಯಂತ ಕುತೂಹಲದಿಂದ ಗೋ-ಶಾಲೆಗೆ ಭೇಟಿ ನೀಡಿದರು.
ಕಪಿಲಾ ನದಿ ತೀರದಲ್ಲಿ ಪ್ರಾರ್ಥನೆ ಹಾಗೂ ಕಪಿಲಾರತಿ ಕಾರ್ಯಕ್ರಮವು ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಶಿಬಿರದಲ್ಲಿ ಒಟ್ಟು 137 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.