ಕಾರವಾರ: ಭಾರತೀಯ ಚಿತ್ರರಂಗಕ್ಕೆ ಡಾ. ರಾಜಕುಮಾರ ಕೊಡುಗೆ ಅಪಾರವಾಗಿದ್ದು, ಅವರು ಭಾರತೀಯ ಚಿತ್ರರಂಗದ ಮೇರು ನಟ ಎಂದು ವರನಟ ಡಾ. ರಾಜಕುಮಾರ್ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಟಿ.ಬಿ. ಹರಿಕಾಂತ ಹೇಳಿದರು.
ಕನ್ನಡ ಚಿತ್ರರಂಗಕ್ಕೆ 1954ರಲ್ಲಿ ಪದಾರ್ಪಣೆ ಮಾಡಿ 2006ರ ವರೆಗೆ 200ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದ ಹೆಸರನ್ನು ದೇಶಾದ್ಯಂತ ಪರಿಚಯಿಸಿದ ಡಾ. ರಾಜಕುಮಾರ್, ನಟನೆ ಮತ್ತು ಗಾಯನದಲ್ಲಿ ಪ್ರೌಢತೆಯನ್ನು ಸಾಧಿಸಿದ ಭಾರತೀಯ ಚಿತ್ರರಂಗದ ಏಕೈಕ ನಟ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ, ಮೇರು ನಟ, ಎಂದೆಂದಿಗೂ ಅಚ್ಚಳಿಯದೇ ಮನದಲ್ಲಿ ಉಳಿದಿರುವ ನಟ, ಡಾ. ರಾಜ್‌ಕುಮಾರ್ ತಮ್ಮ ಜೀವನದ್ದೂಕ್ಕೂ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಜೀವನ ನಡೆಸಿದ ಮಹಾನ್ ವ್ಯಕ್ತಿ ಎಂದರು.ಹಿರಿಯ ಪರ್ತಕರ್ತ ಪ್ರಮೋದ ಹರಿಕಾಂತ ಡಾ. ರಾಜ್ ಕುಮಾರ್ ಕುರಿತು ವಿಶೇಷ ಉಪನ್ಯಾಸ ನೀಡಿ, ರಾಜಕುಮಾರ ಕರ್ನಾಟಕದ ಜನತೆಯ ಮೆಚ್ಚುಗೆ ಪಡೆದ ಮೇರು ನಟ. ಅವರ ಸೌಮ್ಯ ಸ್ವಭಾವ, ಅಭಿನಯ ಗಾಂಭೀರ್ಯತೆ, ಕನ್ನಡ ಚಿತ್ರರಂಗದ ಅಭಿಮಾನಿಗಳ ಮನಸೂರೆಗೊಂಡಿತು. ನಟನೆ ಮತ್ತು ಸಂಗೀತದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಹಾಗೂ ಅಮೆರಿಕದಲ್ಲಿ ಸಂಗೀತ ರಸಮಂಜರಿ ನೀಡಿದ ಏಕೈಕ ನಟ ಡಾ. ರಾಜ್‌ಮಾರ್ ಎಂದರು.
ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯ ತಹಸೀಲ್ದಾರ್ ಪ್ರಮೋದ ನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶಿವಕುಮಾರ, ಕನ್ನಡಪ್ರಭ ಪತ್ರಿಕೆಯ ಹಿರಿಯ ಪತ್ರಕರ್ತ ವಸಂತಕುಮಾರ ಕತಗಾಲ ಇದ್ದರು. ವನಿತಾ ಶೇಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.