ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾಹ್ಯಾಕಾಶದಲ್ಲಿ ‘ಭಾರತೀಯ ಬಾಹ್ಯಾಕಾಶ ಕೇಂದ್ರ’ವನ್ನು 2035ರ ವೇಳೆಗೆ ಸ್ಥಾಪಿಸುವ ಗುರಿಯೊಂದಿಗೆ ‘ಗಗನಯಾನ’ ಯೋಜನೆ ಸೇರಿ ಅನೇಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ವಿ.ನಾರಾಯಣನ್ ತಿಳಿಸಿದರು.ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವಲಯದಿಂದ ನಗರದ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಗುರುವಾರ ನಡೆದ ‘166ನೇ ಆದಾಯ ತೆರಿಗೆ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, 1969ರಲ್ಲಿ ನಾಸಾ ಚಂದ್ರನ ಮೇಲೆ ಕಾಲಿಟ್ಟಿತ್ತು. ಅದೇ ವರ್ಷ ನಮ್ಮ ಇಸ್ರೋ ಸ್ಥಾಪನೆಯಾಯಿತು. ಕೇವಲ 55 ವರ್ಷಗಳಲ್ಲೇ ಯಶಸ್ವಿ ಚಂದ್ರಯಾನ ಯೋಜನೆ ಸೇರಿ ಅನೇಕ ಅಪೂರ್ವ ಸಾಧನೆಗಳನ್ನು ಮಾಡಿರುವ ಇಸ್ರೋ, 2035ರ ವೇಳೆಗೆ ಸ್ವಂತ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್) ಹೊಂದುವುದು ಸಾಮಾನ್ಯ ಸಾಧನೆ ಅಲ್ಲ ಎಂದರು.
ಇತಿಹಾಸಕಾರ, ಲೇಖಕ ವಿಕ್ರಂ ಸಂಪತ್ ಮಾತನಾಡಿ, ಹೂವಿಗೆ ಹಾನಿಯಾಗದಂತೆ ಜೇನು ಹುಳು ಮಕರಂದ ಹೀರುತ್ತದೆ. ಅದರಂತೆ ಜನರಿಗೆ ಹೊರೆಯಾಗದಂತೆ ರಾಜ ತೆರಿಗೆ ಸಂಗ್ರಹಿಸಬೇಕು ಎಂದು ಭಾರತೀಯ ಅರ್ಥಶಾಸ್ತ್ರಜ್ಞ ಕೌಟಿಲ್ಯ ಹೇಳಿದ್ದರು. ಆದರೆ, ನಮ್ಮ ಅಧಿಕಾರಿ ವರ್ಗ ಜನರಿಂದ ತೆರಿಗೆ ಸಂಗ್ರಹಿಸುವ ಬದಲು ಕಿತ್ತುಕೊಳ್ಳುವಂತೆ ವರ್ತಿಸುತ್ತಿದೆ. ಇನ್ನು ತೆರಿಗೆ ವಂಚನೆ ಕೂಡ ನಮ್ಮ ದೇಶದಲ್ಲಿ ರಾಷ್ಟ್ರೀಯ ಕ್ರೀಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಐಟಿ ಇಲಾಖೆ ಎಂದರೆ ಇನ್‌ಕಂ ಟ್ಯಾಕ್ಯ್ ಟೆರರಿಸಂ ಎನ್ನುವ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ. ತೆರಿಗೆ ವಿಚಾರ ಅತ್ಯಂತ ಸಂಕೀರ್ಣ ವಿಷಯವಾಗಿ ಉಳಿದುಕೊಂಡಿದೆ. ಅದಕ್ಕಾಗಿಯೇ ಜನ ಬೇಸರ, ಭಯ ಪಡುತ್ತಾರೆ. ಅದು ಸರಳೀಕರಣವಾಗಬೇಕು. ಗೊಂದಲದ ನಡುವೆಯೂ ಇತ್ತೀಚಿನ ವರ್ಷಗಳಲ್ಲಿ ಇಲಾಖೆ ಅನೇಕ ಡಿಜಿಟಲ್ ಉಪಕ್ರಮಗಳನ್ನು ಕೈಗೊಂಡು ಜನ ಸಾಮಾನ್ಯರಿಗೆ ಹತ್ತಿರವಾಗುತ್ತಿದೆ. ಅದರಲ್ಲೂ ತೆರಿಗೆದಾರರನ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ (ಎಐಎಸ್) ಒದಗಿಸುವುದು ಅತ್ಯುತ್ತಮ ಜನಸ್ನೇಹಿಯಾಗಿ ಉಪಕ್ರಮವಾಗಿದೆ. ಇಂತಹ ಸಾಫ್ಟ್‌ವೇರ್ ಬೆಂಗಳೂರಿನ ಅಧಿಕಾರಿಯೇ ಅಭಿವೃದ್ಧಿಪಡಿಸಿದ್ದಾರೆ. ಅಮೆರಿಕದಂತಹ ದೇಶದಲ್ಲೂ ಇಲ್ಲದ ಈ ವ್ಯವಸ್ಥೆ ನಮ್ಮಲ್ಲಿದೆ ಎಂದು ರವಿ ಹೆಗಡೆ ಹೇಳಿದರು.
ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಪ್ರಧಾನ ಆಯುಕ್ತ ಗಣಪತಿ ಭಟ್ ಮಾತನಾಡಿ, ಐಟಿ ಇಲಾಖೆಯಿಂದ ಶೋಧನೆಗೆ ಹೋದಾಗ ನಮ್ಮ ಪಕ್ಕದ ಮನೆಗೆ ಏಕೆ ಹೋಗಿಲ್ಲ? ಅವರ ಬಳಿ ನಮಗಿಂತ ಹೆಚ್ಚು ಆಸ್ತಿ, ಸಂಪತ್ತು ಇದೆ. ಇಷ್ಟೆಲ್ಲಾ ತೆರಿಗೆ ಸಂಗ್ರಹಿಸಿದರೂ ರಸ್ತೆ, ಶಾಲೆ, ಆಸ್ಪತ್ರೆ ಸೇರಿ ಇನ್ನಿತರ ಮೂಲಸೌಕರ್ಯ ಸರಿಯಿಲ್ಲ ಎಂದು ಜನ ದೂರುಗಳನ್ನು ಇಡುತ್ತಾರೆ. ಆದರೇನು ಮಾಡುವುದು, ನಮ್ಮ ಕೆಲಸವೇ ತೆರಿಗೆ ಸಂಗ್ರಹಿಸುವುದು. ಹಣ, ಆಸ್ತಿ ಹೊಂದಿರುವವರಿಗೆ ಕಳ್ಳ ಮತ್ತು ರಾಜನ ಭಯ ಇರುತ್ತದೆ. ರಾಜ ಎಂದರೆ ಸರ್ಕಾರ, ಅದು ತೆರಿಗೆ ಸಂಗ್ರಹಿಸುತ್ತದೆ. ಕಳ್ಳ ಕದ್ದರೆ ಹೋಯಿತು. ಆದರೆ, ವಿದ್ಯೆ ಹಾಗಲ್ಲ. ಅದನ್ನು ಯಾರೂ ಕದಿಯಲು, ಸಂಗ್ರಹಿಸಲು ಆಗುವುದಿಲ್ಲ ಎಂದರು.ಇದೇ ವೇಳೆ ತೆರಿಗೆ ಇಲಾಖೆಯ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವಿಜಯವಾಣಿ ಸಂಪಾದಕ ಚನ್ನೇಗೌಡ, ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಹಾಗೂ ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ಟ ಅವರನ್ನೂ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.