ಕನ್ನಡಪ್ರಭ ವಾರ್ತೆ ದಾವಣಗೆರೆ
ತೀವ್ರ ಬರದ ಪರಿಸ್ಥಿತಿಯಲ್ಲೂ ಜಿಲ್ಲೆಯ ಅಧಿಕಾರಸ್ಥ ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿಯವರ ದೂರದೃಷ್ಟಿ ಕೊರತೆಯಿಂದ ನೀರಿನ ಹಾಹಾಕಾರ ಉಂಟಾಗಿದ್ದು, ದಿನದಿನಕ್ಕೂ ಅಚ್ಚುಕಟ್ಟು ರೈತರಷ್ಟೇ ಅಲ್ಲ, ಜನ ಸಾಮಾನ್ಯರು, ಜಾನುವಾರುಗಳು ಕೂಡ ನೀರಿಗಾಗಿ ಹಾಹಾಕಾರ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಆರೋಪಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಉಂಟಾಗಿದ್ದು, ಪರಿಸ್ಥಿತಿಯು ದಿನದಿನಕ್ಕೂ ತೀವ್ರವಾಗಿ ಬಿಗಡಾಯಿ
ಸುತ್ತಿದ್ದು, ಭದ್ರಾ ಅಣೆಕಟ್ಟೆಯಿಂದ ಭದ್ರಾ ನಾಲೆಗಳಿಗೆ ನೀರು ಬಿಡುವ ವಿಚಾರವಾಗಿ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಗೆ ಜಿಲ್ಲೆಯ ಶಾಸಕರು, ಸಚಿವರು ಗೈರು ಹಾಜರಾದ್ದರಿಂದಲೇ ನೀರಿನ ಹಾಹಾಕಾರ ತಲೆದೋರುತ್ತಿದೆ ಎಂದರು.ಜನ ಸಾಮಾನ್ಯರು, ರೈತರ ಹಿತಾಸಕ್ತಿ ಕಾಪಾಡುವ ಇಚ್ಛಾಶಕ್ತಿಯನ್ನು ಜನ ಪ್ರತಿನಿಧಿಗಳು ತೋರುತ್ತಿಲ್ಲ. ಇಲ್ಲಿನ ಜನ ಪ್ರತಿನಿಧಿಗಳಿಗೆ ನೀರು ಅಮೂಲ್ಯ ಅನಿಸಲಿಲ್ಲವೇನೋ? ಹಾಗಾಗಿ ಜಿಲ್ಲೆಯ ರೈತರು ಮತ್ತು ಜನರು ಸಂಕಷ್ಟಪಡುವಂತಾಗಿದೆ. ಭದ್ರಾ ಕಾಡಾ ಸಭೆಗೆ ಜಿಲ್ಲಾಧಿಕಾರಿ, ಕೃಷಿ, ತೋಟಗಾರಿಕೆ, ನೀರಾವರಿ ಅಧಿಕಾರಿಗಳು ಭಾಗವಹಿಸಿದ್ದರೂ. ಜಿಲ್ಲೆಯ ನೀರಿನ ಅವಶ್ಯಕತೆ, ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಬಗ್ಗೆ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳದೇ ಹೋಗಿ, ಕೇವಲ ನೀರಿನ ಗಣಿತ ಲೆಕ್ಕಾಚಾರಕ್ಕೆ ತಲೆದೂಗಿ ಬರಿಗೈನಲ್ಲಿ ವಾಪಾಸ್ ಬಂದಿದ್ದಾರೆ ಎಂದು ದೂರಿದರು.
ಕನಿಷ್ಟ 20 ದಿನಗಳ ಕಾಲ ಭದ್ರಾ ನಾಲೆಯಲ್ಲಿ ನೀರು ಹರಿಸಿದರೆ, ಜಿಲ್ಲೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ತಲುಪುತ್ತದೆಂದು ಸಭೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಸೂಚನೆಯ ಮೇರೆಗೆ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಆರ್.ಮಂಜುನಾಥ ಕರೆದಿದ್ದ ಸಭೆಯಲ್ಲಿ ರೈತರು ನಿರ್ಣಯ ಕೈಗೊಂಡಿದ್ದರು. ಆದರೆ, ಅದೇ ರೈತರ ನಿರ್ಣಯವನ್ನು ಜಿಲ್ಲಾಧಿಕಾರಿ ನೇತೃತ್ವದ ತಂಡವು ಐಸಿಸಿ ಸಭೆಯಲ್ಲಿ ಈ ವಿಚಾರವನ್ನಾಗಲೀ, ನಿರ್ಣಯವನ್ನಾಗಲೀ ಮಂಡಿಸಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಟ್ಯಾಂಕರ್ ನೀರೇ ಗತಿ:
ಜಿಲ್ಲೆಯ ಜನ ಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ, ಭದ್ರಾ ಕಾಡಾ ಸಮಿತಿ ಸಭೆಯ ಅವೈಜ್ಞಾನಿಕ ತೀರ್ಮಾನದಿಂದಾಗಿ ಜಿಲ್ಲೆಯ ನಾಲೆಗಳಲ್ಲಿ ನೀರು ಬಂದಿಲ್ಲ. ಜಿಲ್ಲೆಗೆ ಭದ್ರಾ ನೀರು ತಲುಪದ ಕಾರಣ ರೈತರು ಹತ್ತಾರು ವರ್ಷದಿಂದ ಬೆಳೆಸಿದ್ದ ತೋಟಗಳನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಇದೆ. ಅಂತರ್ಜಲ ಸಾಕಷ್ಟು ಬತ್ತಿ ಹೋಗಿದೆ. ಕೆರೆ ಕಟ್ಟೆಗಳು ದಿನದಿನಕ್ಕೂ ಖಾಲಿಯಾಗುತ್ತಿವೆ. ಭೀಕರ ಬರದ ಮಧ್ಯೆ ಭದ್ರಾ ಅಣೆಕಟ್ಟೆಯ ನೀರು ಜಿಲ್ಲೆಯ ನಾಲೆಗಳಿಗೆ ಹರಿಯದಿರುವುದರಿಂದ ಸಮಸ್ಯೆ ಉಲ್ಭಣಗೊಳ್ಳುತ್ತಿದೆ. ಹಲವಾರು ಗ್ರಾಮಗಳಲ್ಲಿ ಈಗ ಕುಡಿಯಲು ಟ್ಯಾಂಕರ್ ನೀರೇ ಗತಿ ಎನ್ನುವಂತಾಗಿದೆ ಎಂದು ತಿಳಿಸಿದರು.ಒಂದು ಕಡೆ ತೋಟ, ಬೆಳೆಗಳ ಉಳಿಸಿಕೊಳ್ಳಲು ಟ್ಯಾಂಕರ್‌ಗಳಿಗೆ ರೈತರು ಮೊರೆ ಹೋಗಿದ್ದಾರೆ. ಮತ್ತೊಂದು ಕಡೆ ಅದೇ ಟ್ಯಾಂಕರ್ ನೀರೇ ಗ್ರಾಮೀಣ ಜನರಿಗೆ ಕುಡಿಯುವ ನೀರಿಗೂ ಆಸರೆಯಾಗಿದೆ. ಜಾನುವಾರುಗಳಿಗೂ ನೀರು ಸಿಗದ ಸ್ಥಿತಿ ಬಂದೊದಗುತ್ತಿದೆ. 800 ಅಡಿಯಿಂದ 1400 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ನೀರಿಲ್ಲದ ಕಾರಣಕ್ಕೆ ಸಾಕಿದ ಜಾನುವಾರುಗಳ ರೈತರು ಸಿಕ್ಕ ಸಿಕ್ಕ ಬೆಲೆಗೆ ಮಾರುತ್ತಿದ್ದಾರೆ ಎಂದು ಬಿ.ಎಂ.ಸತೀಶ ವಿವರಿಸಿದರು.
ಬಿಜೆಪಿ ಮುಖಂಡರಾದ ಕೆ.ಬಿ.ಕೊಟ್ರೇಶ, ಮಂಜುನಾಥ, ಮಂಜಾ ನಾಯ್ಕ, ವಿಜಯಕುಮಾರ, ಎಚ್.ಪಿ.ವಿಶ್ವಾಸ್, ಬಸವರಾಜ, ಅನಿಲಕುಮಾರ ನಾಯ್ಕ, ಕೃಷ್ಣಮೂರ್ತಿ ಇತರರಿದ್ದರು.ಕುಡಿವ ನೀರಿಗೂ ಸಮಸ್ಯೆ ಸಾಧ್ಯತೆಮಾರ್ಚ್ ಅಥವಾ ಏಪ್ರಿಲ್ ಹೊತ್ತಿಗೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುವ ಲಕ್ಷಣ ದಟ್ಟವಾಗಿ ಗೋಚರಿಸುತ್ತಿದೆ. ಒಂದು ವೇಳೆ ಭದ್ರಾ ಅಣೆಕಟ್ಟೆಯ ನೀರು ಅಚ್ಚುಕಟ್ಟು ಕೊನೆಯ ಭಾಗಕ್ಕೆ ತಲುಪಿದ್ದರೆ ಇಂತಹ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಇನ್ನಾದರೂ ಅಣೆಕಟ್ಟಿನಿಂದ ಬಿಟ್ಟ ನೀರು ಕಾಲುವೆಯಲ್ಲಿ 13 ಅಡಿ ಇರುವಂತೆ ಆಡಳಿತ ಯಂತ್ರ ನೋಡಿಕೊಳ್ಳಲಿ.
ಬಿ.ಎಂ.ಸತೀಶ, ಬಿಜೆಪಿ ರೈತ ಮೋರ್ಚಾ ಮುಖಂಡ...................
24ಕೆಡಿವಿಜಿ2-ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.