ದೇಶೀಯ ಸಂಸ್ಕೃತಿ ಪರಿಚಯಿಸುವ ಶಿಕ್ಷಣದ ಅಗತ್ಯವಿದೆ: ಗೋವಿಂದ ಚಂದ್ರ ಮಹಂತ್

KannadaprabhaNewsNetwork |  
Published : Nov 24, 2024, 01:48 AM IST
52 | Kannada Prabha

ಸಾರಾಂಶ

ಶಿಕ್ಷಕರು ಮಕ್ಕಳ ಕಲಿಕೆಯಲ್ಲಿ ಸಕಾರಾತ್ಮಕ ಚಿಂತನೆಯನ್ನು ಬಿತ್ತುವುದರಿಂದ ಉತ್ತಮ ಪ್ರಜೆಯನ್ನು ಸೃಷ್ಟಿಸಲು ಸಹಕಾರಿಯಾಗಲಿದೆ. ದೇಶಕ್ಕೆ ಮಕ್ಕಳು ಆಸ್ತಿಯಾಗಬೇಕಿದ್ದು, ಆ ದಿಕ್ಕಿನಲ್ಲಿ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಶಿಶುವಾಟಿಕೆ ಹಂತದ ಶಿಕ್ಷಕ ಮತ್ತು ಪೋಷಕರು ಮಕ್ಕಳಿಗೆ ದೇಶೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಶಿಕ್ಷಣವನ್ನು ಕಲಿಸುವ ಪ್ರಯತ್ನ ನಡೆಸಬೇಕು.

ಕನ್ನಡಪ್ರಭ ವಾರ್ತೆ ಹುಣಸೂರು

ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯನ್ನು ತೊರೆದು ದೇಶೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂಡ ಶಿಕ್ಷಣ ಪದ್ಧತಿಯ ಜಾರಿ ಇಂದಿನ ಅನಿವಾರ್ಯವಾಗಿದೆ ಎಂದು ವಿದ್ಯಾಭಾರತಿ ಅಖಿಲ ಭಾರತ ಸಂಘಟನಾ ಮಂತ್ರಿ ಗೋವಿಂದ ಚಂದ್ರ ಮಹಂತ್ ಅಭಿಪ್ರಾಯಪಟ್ಟರು.

ಪಟ್ಟಣದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಶಿಶುವಾಟಿಕಾ ಆಚಾರ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಶಿಶು ಶಿಕ್ಷಣ ಅಡಿಪಾಯವಾಗಿದ್ದು, ಈ ಶಿಕ್ಷಣ ಪದ್ಧತಿಯಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಪರಂಪರೆಯನ್ನು ತಿಳಿಸುವ ಪಠ್ಯವನ್ನು ಇರಿಸುವ ಮೂಲಕ ಸದೃಢ ಭಾರತ ನಿರ್ಮಿಸಲು ಸಹಕಾರವಾಗಲಿದೆ. ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಈವರೆಗೂ ಶಿಕ್ಷಣದಲ್ಲಿ ಬದಲಾವಣೆ ಕಾಣದೆ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ವ್ಯಾಸಂಗ ಮಾಡುವ ಪದ್ಧತಿ ಜಾರಿಯಲ್ಲಿದೆ. ನಮ್ಮ ದೇಶ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ನೀತಿ ಅಳವಡಿಸಿಕೊಂಡಿದ್ದರೂ ದೇಶದ ಅಭಿವೃದ್ಧಿಗೆ ಅಗತ್ಯ ಬೇಕಿರುವ ಶಿಕ್ಷಣದಲ್ಲಿ ಬದಲಾವಣೆ ಈವರೆಗೂ ಕಾಣದೆ ದೇಶಿಯ ಸಂಸ್ಕೃತಿ ಮತ್ತು ಸಂಪ್ರದಾಯ ಭವಿಷ್ಯದ ಕುಡಿಗಳಿಗೆ ಇಲ್ಲವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಷಾದಿಸಿದರು.

ವಿದ್ಯಾಭಾರತಿ ದೇಶದಲ್ಲಿ 1952 ರಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯದ ತಳಹದಿಯಲ್ಲಿ ಶಿಕ್ಷಣ ಕ್ಷೇತ್ರ ಕಟ್ಟಿಕೊಂಡು ಬಂದಿದೆ. ಇತ್ತೀಚಿನ ದಿನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬದಲಾವಣೆ ತರುವ ಚರ್ಚೆಗಳು ನಡೆದು ಕೇಂದ್ರದಲ್ಲಿ ಪ್ರಧಾನಿ ನೇತೃತ್ವದಲ್ಲಿ ಕೇಂದ್ರೀಯ ಪಠ್ಯ ಶಿಕ್ಷಣ ವಿಭಾಗದಲ್ಲಿ ಭಾರತೀಯ ಮೌಲ್ಯಗಳುಳ್ಳ ಪಠ್ಯವನ್ನು ಅಳವಡಿಸಿ ಭವಿಷ್ಯದ ಕುಡಿಗಳಿಗೆ ತಿಳಿಸುವ ಪ್ರಯತ್ನ ನಡೆದಿದೆ. ದೇಶದಲ್ಲಿ 16 ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದು, ವಿಶ್ವದಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಗಂಭೀರ ಚರ್ಚೆಗಳು ನಡೆದು ಯುನಿಸೆಫ್ ಆಸಕ್ತಿ ತೋರಿಸಿದೆ ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಮಕ್ಕಳ ಕಲಿಕೆಯಲ್ಲಿ ಸಕಾರಾತ್ಮಕ ಚಿಂತನೆಯನ್ನು ಬಿತ್ತುವುದರಿಂದ ಉತ್ತಮ ಪ್ರಜೆಯನ್ನು ಸೃಷ್ಟಿಸಲು ಸಹಕಾರಿಯಾಗಲಿದೆ. ದೇಶಕ್ಕೆ ಮಕ್ಕಳು ಆಸ್ತಿಯಾಗಬೇಕಿದ್ದು, ಆ ದಿಕ್ಕಿನಲ್ಲಿ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಶಿಶುವಾಟಿಕೆ ಹಂತದ ಶಿಕ್ಷಕ ಮತ್ತು ಪೋಷಕರು ಮಕ್ಕಳಿಗೆ ದೇಶೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಶಿಕ್ಷಣವನ್ನು ಕಲಿಸುವ ಪ್ರಯತ್ನ ನಡೆಸಬೇಕು ಎಂದರು.

ಅಧ್ಯಕ್ಷತೆಯನ್ನು ವಿದ್ಯಾಭಾರತಿ ಕರ್ನಾಟಕದ ಅಧ್ಯಕ್ಷ ಪರಮೇಶ್ವರ ಹೆಗ್ಗಡೆ ವಹಿಸಿದ್ದರು. ತಾರಾ ಮಾತನಾಡಿದರು, ಶಾಸ್ತ್ರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಸ್ವಾಗತಿಸಿದರು. 600ಕ್ಕೂ ಹೆಚ್ಚು ಶಿಶುವಾಟಿಕಾ ಆಚಾರ್ಯರು ಪಾಲ್ಗೊಂಡಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ