ನಾಳೆ ಸ್ವದೇಶಿ ಯುದ್ಧನೌಕೆ ‘ಮಾಲ್ವನ್’ ಸೇವೆಗೆ

KannadaprabhaNewsNetwork |  
Published : Jul 21, 2026, 02:00 AM IST
Malvan

ಸಾರಾಂಶ

ಭಾರತದ ಕಡಲ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತೊಂದು ಬಲಿಷ್ಠ ಯುದ್ಧನೌಕೆ ಸೇವೆಗೆ ಸಿದ್ಧವಾಗಿದೆ. ‘ಐಎನ್‌ಎಸ್ ಮಾಲ್ವನ್’ ಜು.22ರಂದು ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.

  ಕಾರವಾರ :  ಭಾರತದ ಕಡಲ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತೊಂದು ಬಲಿಷ್ಠ ಯುದ್ಧನೌಕೆ ಸೇವೆಗೆ ಸಿದ್ಧವಾಗಿದೆ. ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿರುವ ‘ಮಾಹೆ ಕ್ಲಾಸ್’ನ ಜಲಾಂತರ್ಗಾಮಿ ನಿರೋಧಕ ಯುದ್ಧನೌಕೆ ‘ಐಎನ್‌ಎಸ್ ಮಾಲ್ವನ್’ ಜು.22ರಂದು ಇಲ್ಲಿನ ಐಎನ್ ಎಸ್ ಕದಂಬ ನೌಕಾನೆಲೆಯಲ್ಲಿ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.

ಆಕರ್ಷಕ ಲಾಂಛ  ಸಾಮಾಜಿಕ ಜಾಲತಾಣಗಳಲ್ಲಿ ಅನಾವರಣ

ನೌಕೆಯ ಸೇರ್ಪಡೆಗೂ ಮುನ್ನ ನೌಕಾಪಡೆ ಇದರ ಆಕರ್ಷಕ ಲಾಂಛನವನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅನಾವರಣಗೊಳಿಸಿದೆ. ಈ ಲಾಂಛನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಪ್ರತಿಮ ಶೌರ್ಯದ ಸಂಕೇತವಾದ ‘ಬಾಗ್ ನಖ’ (ಹುಲಿ ಉಗುರು) ಅನ್ನು ಚಿತ್ರಿಸಲಾಗಿದ್ದು, ಇದು ಶತ್ರುಗಳಿಗೆ ಸಿಂಹಸ್ವಪ್ನವಾಗಲಿರುವ ನೌಕೆಯ ಶಕ್ತಿಯನ್ನು ಬಿಂಬಿಸುತ್ತಿದೆ. ಸಂಸ್ಕೃತದ ‘ನಿಶಬ್ದ ನಖಾ’ (ಮೌನ ಉಗುರು) ಎಂಬ ಧ್ಯೇಯವಾಕ್ಯವು ಶಬ್ದ ಮಾಡದೆ ಶತ್ರುಗಳ ಜಲಾಂತರ್ಗಾಮಿಗಳನ್ನು ಬೇಟೆಯಾಡುವ ಈ ನೌಕೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣಗೊಂಡಿರುವ ಈ ಯುದ್ಧನೌಕೆ

ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣಗೊಂಡಿರುವ ಈ ಯುದ್ಧನೌಕೆ, ‘ಮಾಹೆ ಕ್ಲಾಸ್’ ಸರಣಿಯ ಎರಡನೇ ಹಡಗಾಗಿದೆ. ಆಳವಿಲ್ಲದ ಕಡಲ ಪ್ರದೇಶಗಳಲ್ಲಿ ಅತ್ಯಂತ ವೇಗವಾಗಿ ಚಲಿಸುವ ಹಾಗೂ ಶತ್ರುಗಳ ಚಲನವಲನಗಳನ್ನು ಪತ್ತೆ ಹಚ್ಚುವ ಅತ್ಯಾಧುನಿಕ ರೇಡಾರ್ ಮತ್ತು ಶಸ್ತ್ರಾಸ್ತ್ರಗಳನ್ನು ಇದು ಹೊಂದಿದೆ. ಮೌನ, ವೇಗ ಹಾಗೂ ಘಾತಕ ಎಂಬ ಮಂತ್ರದೊಂದಿಗೆ ಈ ನೌಕೆ ಕಡಲ ಗಡಿಯನ್ನು ಕಾಯಲಿದೆ.

ಜುಲೈ 22 ರಂದು ನಡೆಯಲಿರುವ ಭವ್ಯ ಸಮಾರಂಭದಲ್ಲಿ ಐಎನ್‌ಎಸ್ ಮಾಲ್ವನ್ ಅಧಿಕೃತವಾಗಿ ನೌಕಾಪಡೆಗೆ ನಿಯೋಜನೆಗೊಳ್ಳಲಿದೆ. ಇದು ಭಾರತದ ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮನಿರ್ಭರತೆ’ಗೆ ಸಂದ ಜಯವಾಗಿದ್ದು, ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದಂತಹ ರಾಷ್ಟ್ರಗಳ ಉಪಟಳಕ್ಕೆ ಕಡಿವಾಣ ಹಾಕಲು ಭಾರತಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ. ಕಡಲ ತೀರದ ರಕ್ಷಣೆ ಮತ್ತು ಜಲಾಂತರ್ಗಾಮಿ ನಿರೋಧಕ ಕಾರ್ಯಾಚರಣೆಗಳಲ್ಲಿ ಈ ನೌಕೆ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ
ಅನುಮತಿ ಬಳಿಕ ಶರಾವತಿ ಪಂಪ್ಡ್‌ ಸ್ಟೋರೇಜ್‌ ಶುರು : ಡಿಕೆ