ಬಡವರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಆಸರೆಯಾಗಿದ್ದ ಮುಚ್ಚಿದ್ದ ಇಂದಿರಾ ಕ್ಯಾಂಟೀನ್‌ ಪುನಾರಂಭ

KannadaprabhaNewsNetwork | Updated : Mar 20 2025, 01:03 PM IST

ಸಾರಾಂಶ

ಇಲ್ಲಿನ ಗುಂಡ್ಲುಪೇಟೆ ಇಂದಿರಾ ಕ್ಯಾಂಟೀನ್‌ ಬಂದ್‌ ಎಂದು ಮಾ.11ರ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್‌ ಬುಧವಾರ ಬೆಳಗ್ಗೆಯೇ ಪುನಾರಂಭವಾಗಿದೆ.

  ಗುಂಡ್ಲುಪೇಟೆ : ಇಲ್ಲಿನ ಗುಂಡ್ಲುಪೇಟೆ ಇಂದಿರಾ ಕ್ಯಾಂಟೀನ್‌ ಬಂದ್‌ ಎಂದು ಮಾ.೧೧ರ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್‌ ಬುಧವಾರ ಬೆಳಗ್ಗೆಯೇ ಪುನಾರಂಭವಾಗಿದೆ.

ಇಂದಿರಾ ಕ್ಯಾಂಟೀನ್‌ ಟೆಂಡರ್‌ ಬದಲು ಹಿನ್ನಲೆ ಮಾ.8  ರಂದು ಮುಚ್ಚಿತ್ತು. ಬಡವರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್‌ ದಿಢೀರ್‌ ಬಂದಾಗಿದೆ ಎಂದು ಕನ್ನಡಪ್ರಭದ ವರದಿ ಗಮನ ಸೆಳೆದಿತ್ತು. ಬುಧವಾರ ಬೆಳಗ್ಗೆಯೇ ಇಂದಿರಾ ಕ್ಯಾಂಟೀನ್‌ ಆರಂಭಗೊಂಡಿದ್ದನ್ನು ಕಂಡ ಕಾರ್ಮಿಕರು, ಬಡವರು, ವಿದ್ಯಾರ್ಥಿಗಳು ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಉಪಹಾರ ಸೇವಿಸಿದ್ದು ಕಂಡು ಬಂತು.

ಕನ್ನಡಪ್ರಭ ವರದಿಯ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್‌ ಆರಂಭಗೊಂಡಿದ್ದಕ್ಕೆ ಹೆಸರೇಳಲಿಚ್ಚಿಸಿದ ಕಾರ್ಮಿಕನೊಬ್ಬ ಕನ್ನಡಪ್ರಭದೊಂದಿಗೆ ಮಾತನಾಡಿ, ಪತ್ರಿಕೆ ಜಿಲ್ಲಾಡಳಿತದ ಗಮನ ಸೆಳೆದು ಓಪನ್‌ ಆಗಿದೆ. ಬಡವರು, ವಿದ್ಯಾರ್ಥಿಗಳು, ನನ್ನ ಪರವಾಗಿ ಕನ್ನಡಪ್ರಭಕ್ಕೆ ಧನ್ಯವಾದ ಎಂದರು. 10 ರು.ನಲ್ಲಿ ತಿಂಡಿ, ಊಟ ಸಿಗುತ್ತದೆ. ಬಡವರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ದುಬಾರಿ ಹಣ ಕೊಟ್ಟು ಹೋಟೆಲ್‌ನಲ್ಲಿ ಊಟ, ತಿಂಡಿ ಮಾಡಲು ಇಂದಿರಾ ಕ್ಯಾಂಟೀನ್‌ ಇಲ್ಲದ ಕಾರಣ ಕಷ್ಟವಾಗುತ್ತಿತ್ತು. ಬುಧವಾರ ಕ್ಯಾಂಟೀನ್‌ ಓಪನ್‌ ಆದ ಕಾರಣ ತುಸು ನೆಮ್ಮದಿ ತಂದಿದೆ ಎಂದರು.

ಹಿಂದೆ ಗುತ್ತಿಗೆದಾರರ ಬದಲು ಹೊಸ ಟೆಂಡರ್‌ ಕರೆದ ಹಿನ್ನೆಲೆ ಹೊಸ ಟೆಂಡರ್‌ದಾರರು ಇಂದಿರಾ ಕ್ಯಾಂಟೀನ್‌ ಬುಧವಾರ ಬೆಳಗ್ಗೆಯೇ ಆರಂಭಿಸಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಪಿ. ವಸಂತಕುಮಾರಿ ಹೇಳಿದರು. ಕನ್ನಡಪ್ರಭದೊಂದಿಗೆ ಮಾತನಾಡಿ, ಹೊಸದಾಗಿ ಟೆಂಡರ್‌ ಕರೆದ ಬಳಿಕ ಇಂದಿರಾ ಕ್ಯಾಂಟೀನ್‌ ಬುಧವಾರ ಆರಂಭಿಸಿದ್ದಾರೆ. ಶುಚಿತ್ವ ಹಾಗೂ ಗುಣ ಮಟ್ಟದ ಆಹಾರ ನೀಡಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು. ಬಡವರ ಪಾಲಿನ ಇಂದಿರಾ ಕ್ಯಾಂಟೀನ್‌ 10 ದಿನಗಳಿಂದ ಮುಚ್ಚಿತ್ತು. ಬುಧವಾರ ಆರಂಭವಾಗಿದ್ದು, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಜನರು ಇಂದಿರಾ ಕ್ಯಾಂಟೀನ್‌ ಉಪಯೋಗಿಸಿಕೊಳ್ಳಿ ಎಂದು ಮನವಿ ಮಾಡಿದರು.

ಮುಚ್ಚಿದ್ದ ಇಂದಿರಾ ಕ್ಯಾಂಟೀನ್‌ ಬುಧವಾರ ಬೆಳಗ್ಗೆಯೇ ಓಪನ್‌ ಆಗಿದೆ. ಬೆಳಗ್ಗೆ ತಿಂಡಿ 5 ರು, ಮಧ್ಯಾಹ್ನ ಹಾಗೂ ರಾತ್ರಿ ಊಟ ೧೦ ರು. ಕಡಿಮೆ ದರದಲ್ಲಿ ಕ್ಯಾಂಟೀನ್‌ನಲ್ಲಿ ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಿಗಲಿದೆ.

-ಕೆ.ಪಿ.ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ

Share this article