ಚಿಕ್ಕಮಗಳೂರು: ದೇಶದ ಆರ್ಥಿಕತೆ ಗಟ್ಟಿಗೊಳಿಸಿ, ರೈತರ ಬೆನ್ನೆಲುಬಾಗಿನಿಂತ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ರಾಷ್ಟ್ರ ಕಂಡ ಅಪರೂಪ ಜನ ನಾಯಕಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದಿಂದ ಬುಧವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ದೇಶ ಹಾಗೂ ನಾಡಿನಲ್ಲಿ ಕಾಂಗ್ರೆಸ್ ಆಡಳಿತವು ಬಡವರು, ಶೋಷಿತರು ಹಾಗೂ ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ರಾಷ್ಟ್ರದಲ್ಲಿ ಸುಮಾರು 16 ವರ್ಷಗಳ ಕಾಲ ಆಡಳಿತ ನಡೆಸಿದ ಇಂದಿರಾಗಾಂಧಿಯವರು ಉಕ್ಕಿನ ಮಹಿಳೆಯೆಂದೇ ಪ್ರಸಿದ್ಧಿ ಪಡೆದುಕೊಂಡವರು ಎಂದರು.ಅಂದು ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಪಾಕಿಸ್ತಾನದ ವಿರುದ್ಧ ಯುದ್ಧಸಾರಿ ವಿಜಯ ಸಾಧಿಸಿದಲ್ಲದೇ, ಚೀನಾ ವಿರುದ್ಧ ಧೃಢ ನಿರ್ಧಾರ ಕೈಗೊಂಡು ಗಟ್ಟಿತನ ಮೆರೆದವರು. ಅಲ್ಲಿಂದ ಇಲ್ಲಿಯತನಕ ಕಾಂಗ್ರೆಸ್ ಸರ್ಕಾರ ಆ ನಿಲುವಿನಲ್ಲೇ ಅಧಿಕಾರ ನಡೆಸಿದೆ. ಇಂದು ನಿವೇಶನ ರಹಿತ ಗ್ರಾಮಾಂತರ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಹಿರಿಯರ ಮಾರ್ಗದಲ್ಲಿ ಆಡಳಿತ ನಡೆಸುತ್ತಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲೂ ರೈಲ್ವೆ, ಬಸ್ ನಿಲ್ದಾಣ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಜನತೆಯ ಮೂಲ ಸೌಕರ್ಯಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಿದೆ ಎಂದ ಅವರು, ದೇಶದ ಏಳಿಗೆಗೆ ಇಂದಿರಾಗಾಂಧಿಯವರು ಭವಿಷ್ಯದ ಹಾದಿ ಸುಗಮಗೊಳಿಸಲು ತಮ್ಮ ಸಂಪೂರ್ಣ ಜೀವನವನ್ನು ದೇಶಕ್ಕಾಗಿ ಮುಡಿಪಿಟ್ಟವರು ಎಂದರೆ ತಪ್ಪಾಗುವುದಿಲ್ಲ ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಬಾನ ಸುಲ್ತಾನ ಮಾತನಾಡಿ, ಚಿಕ್ಕಮಗಳೂರು ಇಂದಿರಾಗಾಂಧಿ ಅವರಿಗೆ ರಾಜಕೀಯದ ಪುನರ್‌ಜನ್ಮ ನೀಡಿದ ಕ್ಷೇತ್ರ. ಈ ಭಾಗದಲ್ಲಿ ನೆಚ್ಚಿನ ಶಾಸಕರ ನೇತೃತ್ವದಲ್ಲಿ ಬಡವರ ಮೂಲ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ನೆಮ್ಮದಿ ಬದುಕಿಗೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಸ್ಪಂದಿಸುತ್ತಿದೆ ಎಂದರು.ಇದೇ ವೇಳೆ ಇಂದಿರಾಗಾಂಧಿ ಜನ್ಮದಿನದ ಪ್ರಯುಕ್ತ ಬಡಾವಣೆಯ ನಿವಾಸಿಗಳಿಗೆ ಹಣ್ಣು, ಸಿಹಿ ವಿತರಿಸಲಾಯಿತು.