ಪರಿವಾರದ ಅನೇಕರ ಪರೋಕ್ಷ ಬೆಂಬಲ: ಕೆ.ಎಸ್‌.ಈಶ್ವರಪ್ಪ

KannadaprabhaNewsNetwork |  
Published : Apr 07, 2024, 01:47 AM IST
ಪೋಟೋ: 6ಸಾಗರ್‌01ಸಾಗರ ಪಟ್ಟಣದ ಭದ್ರಕಾಳಿ ಸಭಾಭವನದಲ್ಲಿ ಶನಿವಾರ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಕದಂತೆ ಕುತಂತ್ರ ಮಾಡಬಹುದು ಎನ್ನುವ ಕಾರಣಕ್ಕೆ ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಿದ್ದೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು

ಕನ್ನಡಪ್ರಭವಾರ್ತೆ ಸಾಗರ

ಈ ಬಾರಿ ಲೋಕಸಭಾ ಚುನಾವಣೆ ಜನಬಲವೋ, ಹಣಬಲವೋ ಎನ್ನುವುದನ್ನು ಸಾಬೀತು ಮಾಡುವ ಚುನಾವಣೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಪಟ್ಟಣದ ಭದ್ರಕಾಳಿ ಸಭಾಭವನದಲ್ಲಿ ಶನಿವಾರ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಸ್ಪರ್ಧೆ ದೇಶ ಮತ್ತು ರಾಜ್ಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಪಕ್ಷದ, ಪರಿವಾರದ ಅನೇಕ ಹಿರಿಯರು ನನಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಹಣ ಮತ್ತು ಧರ್ಮದ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಂತಿಮವಾಗಿ ಧರ್ಮಕ್ಕೆ ಜಯ ಸಿಗುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.

ಕಾಂಗ್ರೆಸ್ ನವರು ಎಲ್ಲಾ ಈಡಿಗರು ನಮ್ಮ ಜೊತೆ ಇದ್ದಾರೆ ಎನ್ನುತ್ತಾರೆ. ಬಿಜೆಪಿಯವರು ಎಲ್ಲಾ ಲಿಂಗಾಯತರು ನಮ್ಮ ಕಡೆ ಇದ್ದಾರೆ ಎನ್ನುತ್ತಾರೆ. ಆದರೆ, ನಾನು ರಾಷ್ಟ್ರೀಯವಾದಿ ಎಂದು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಜಾತಿ ಹೆಸರು ಹೇಳಿಕೊಂಡು ಮೋಸ ಮಾಡಿದವರಿಗೆ ಈಶ್ವರಪ್ಪನ ಗೆಲ್ಲಿಸುವ ಮೂಲಕ ಉತ್ತರ ಕೊಡುತ್ತೇವೆ ಎಂದು ಭದ್ರಾವತಿಯ ಒಕ್ಕಲಿಗ ಸಮಾಜದವರು ಹೇಳಿದ್ದಾರೆ ಎಂದು ತಿಳಿಸಿದರು.

ಬೈಂದೂರಿನಲ್ಲಿಯೂ ಸಹ ಹಿಂದೂ ಸಂಘಟನೆಯ ಅನೇಕ ಪ್ರಮುಖರು ನಾವೆಲ್ಲರೂ ನಿಮಗೆ ಬೆಂಬಲವಾಗಿದ್ದೇವೆ. ಚುನಾವಣೆಯಲ್ಲಿ ನೀವು ನೂರಕ್ಕೆ ನೂರು ಗೆಲ್ಲುತ್ತೀರಾ ಎಂದು ಆಶೀರ್ವಾದ ಮಾಡಿದ್ದಾರೆ. ಚುನಾವಣೆ ಎಂದರೆ ಜಾತಿ ಹಣ ತೋಳ್ಬಲದಿಂದ ನಡೆಯುತ್ತೆ ಎಂದು ತಿಳಿದಿದ್ದೆ. ಆದರೆ, ಜಾತಿ ಹಣ ಎಲ್ಲಾ ಪಕ್ಕಕ್ಕೆ ಇಟ್ಟು ಬಡವರು ಧರ್ಮದ ಪರವಾಗಿ ನಿಂತು ಧರ್ಮ ಗೆಲ್ಲಿಸಲು ನೀವೆಲ್ಲ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು ನೋಡಿದರೆ ನನ್ನ ಗೆಲ್ಲುವು ನಿಶ್ಚಯವಾಗಿದೆ ಎಂದರು.

ಚುನಾವಣೆಗೆ ನಿಂತ ಮೇಲೆ ಎಲ್ಲಾ ಜಾತಿಯ ಸಮಾಜದವರಿಂದ ನನಗೆ ಬೆಂಬಲ ಸಿಕ್ಕಿದೆ. ಸ್ತ್ರೀ ಶಕ್ತಿ ಸಂಘಗಳಿಂದ ಬೆಂಬಲ ಸಿಕ್ಕಿದೆ. ಚುನಾವಣೆಗೆ ಸ್ಪರ್ಧೆ ಮಾಡುವ ತೀರ್ಮಾನ ಮಾಡಿದ ಬಳಿಕ ಶ್ರೀಧರ ಸ್ವಾಮಿಗಳ ಆಶ್ರಮದ ನಂತರ ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡಿದೆ. ತಾಯಿಯ ತಲೆ ಮೇಲಿಂದ ಹೂವಿನ ಪ್ರಸಾದ ಸಿಕ್ಕಿತು. ಒಂದು ಕಡೆ ದೇವರ ಆಶೀರ್ವಾದ, ಇನ್ನೊಂದು ಕಡೆ ಶ್ರೀಸಾಮಾನ್ಯನ ಆಶೀರ್ವಾದ. ಇವೆರಡೂ ನನಗೆ ಸಿಕ್ಕಿರುವಾಗ ಯಾವುದೇ ಕಾರಣಕ್ಕೂ ಕೆಲವು ವ್ಯಕ್ತಿಗಳಿಂದ ರಾಜ್ಯದ ಭಾರತೀಯ ಜನತಾ ಪಾರ್ಟಿಯನ್ನು ಅಪಹರಿಸಲು ಬಿಡುವುದಿಲ್ಲ ಎಂದು ತಿಳಿಸಿದರು.

ಸಮಾವೇಶದಲ್ಲಿ ರಾಷ್ಟ್ರಭಕ್ತ ಬಳಗದ ಅಧ್ಯಕ್ಷ ಪ್ರಕಾಶ್ ಕುಂಠೆ, ಪ್ರಮುಖರಾದ ಎಸ್.ಎಲ್.ಮಂಜುನಾಥ್, ಸತೀಶ್ ಗೌಡ ಅದರಂತೆ, ಕಸ್ತೂರಿ ಸಾಗರ್, ರಜನೀಶ್ ಹಕ್ರೆ, ಸುರೇಶ್ ವಾಟಗೋಡು, ಉಮೇಶ್ ಚೌಟಗಿ, ಅಣ್ಣಪ್ಪ, ಸವಿತಾ ಗೋಪಾಲ್, ನಾಗರಾಜ್ ಮತ್ತಿತರರು ಇದ್ದರು.

ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಕದಂತೆ ಕುತಂತ್ರ ಮಾಡಬಹುದು ಎನ್ನುವ ಕಾರಣಕ್ಕೆ ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಿದ್ದೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಕೆಲವರು ನಾನು ಮೋದಿ ಅವರ ಭಾವಚಿತ್ರ ಹಾಕದಂತೆ ತಡೆಯಾಜ್ಞೆ ತರಬಹುದು ಎನ್ನುವ ಕಾರಣಕ್ಕೆ ನ್ಯಾಯಾಲಯಕ್ಕೆ ಕೇವಿಯಟ್ ಹಾಕಿಕೊಂಡಿದ್ದೇನೆ. ನಾನು ಲೋಕಸಭೆ ಚುನಾವಣೆ ಗೆದ್ದ ನಂತರ ಮತ್ತೆ ಮೋದಿಯವರ ಜೊತೆಗೆ ಹೋಗುತ್ತೇನೆ. ನರೇಂದ್ರ ಮೋದಿ ವಿಶ್ವನಾಯಕ. ದೇಶದ ಪ್ರತಿಯೊಬ್ಬ ಜನಸಾಮಾನ್ಯರೂ ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಕೋಟ್ಯಾಂತರ ಜನರು ಕನಸು ಕಾಣುತ್ತಿದ್ದಾರೆ. ಅಂಥವರ ಫೋಟೋವನ್ನು ನಾನು ಬಳಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ