ಇಂಡೋ-ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

KannadaprabhaNewsNetwork | Published : May 22, 2024 12:46 AM

ಸಾರಾಂಶ

ದಾವಣಗೆರೆ ನಗರದ ಬಿಐಇಟಿ ಕಾಲೇಜಿನ ಎಸ್‌.ಎಸ್‌. ಮಲ್ಲಿಕಾರ್ಜುನ ಸಾಂಸ್ಕೃತಿಕ ಸಭಾಂಗಣದಲ್ಲಿ ಮೇ 24ರಂದು ನಮನ ಅಕಾಡೆಮಿ, ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಜರ್ ಅಕಾಡೆಮಿ ಜಂಟಿಯಾಗಿ ಇಂಡೋ- ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ ಎಂದು ಅಕಾಡೆಮಿ ಉಪಾಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದ್ದಾರೆ.

- ಶಾಸಕ ಡಾ.ಶಿವಶಂಕರಪ್ಪ ಅವರಿಂದ ಉದ್ಘಾಟನೆ: ಉಪಾಧ್ಯಕ್ಷ ದಿನೇಶ್‌ ಶೆಟ್ಟಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನಗರದ ಬಿಐಇಟಿ ಕಾಲೇಜಿನ ಎಸ್‌.ಎಸ್‌. ಮಲ್ಲಿಕಾರ್ಜುನ ಸಾಂಸ್ಕೃತಿಕ ಸಭಾಂಗಣದಲ್ಲಿ ಮೇ 24ರಂದು ನಮನ ಅಕಾಡೆಮಿ, ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಜರ್ ಅಕಾಡೆಮಿ ಜಂಟಿಯಾಗಿ ಇಂಡೋ- ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ ಎಂದು ಅಕಾಡೆಮಿ ಉಪಾಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6 ಗಂಟೆಗೆ ಅಕಾಡೆಮಿ ಅಧ್ಯಕ್ಷ ಕೆ.ಎನ್. ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಲಿದ್ದಾರೆ ಎಂದರು.

ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ, ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಅಂಡ್ ಲೀಜರ್ ಅಕಾಡೆಮಿ ಅಧ್ಯಕ್ಷ ರೋಷನ್ ಸಿಲ್ವಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ದಾವಣಗೆರೆ ವಿವಿ ಗೌರವ ಡಾಕ್ಟರೇಟ್‌ಗೆ ಪಾತ್ರರಾದ ಹಿರಿಯ ವ್ಯಂಗ್ಯಚಿತ್ರಕಾರ ಡಾ. ಎಚ್.ಬಿ. ಮಂಜುನಾಥ್‌ ಅವರಿಗೆ ನಮನ ಶ್ರೀ ಪ್ರಶಸ್ತಿ ನೀಡಿ, ಗೌರವಿಸಲಾಗುವುದು ಎಂದು ಹೇಳಿದರು.

20 ಕಲಾವಿದರಿಂದ ನೃತ್ಯ:

ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಶ್ರೀಲಂಕಾದ ಶ್ರೀ ಮಾಲಿ ಡ್ಯಾನ್ಸಿಂಗ್ ಅಕಾಡೆಮಿಯ 20 ನೃತ್ಯ ಕಲಾವಿದರು ತಮ್ಮ ಗುರುಗಳಾದ ಮರಿನಿ ಪೆರೇರಾ ಹಾಗೂ ಹಿಮಾಲಿ ಉಪೇಕ್ಷ ಜಯತಿಲಕ ಮಾರ್ಗದರ್ಶನದಲ್ಲಿ ತಮ್ಮ ದೇಶದ ವಿವಿಧ ನೃತ್ಯ ಪ್ರಾಕಾರಗಳನ್ನು ಪ್ರಸ್ತುತಪಡಿಸಲಿದ್ದಾರೆ. ಶ್ರೀಲಂಕಾ ತಂಡದೊಡನೆ ನಮನ ಅಕಾಡೆಮಿ, ಹರಿಹರದ ಸಂಕರ್ಷಣಾ ಭರತನಾಟ್ಯ ಶಾಲೆ, ರಾಣೇಬೆನ್ನೂರಿನ ಶ್ರೀ ಶಾರದಾ ನೃತ್ಯಾಲಯ, ಶ್ರೀ ಮಾರ್ತಾಂಡ ನೃತ್ಯ ಮತ್ತು ಸಂಗೀತ ಕಲಾ ಸಂಸ್ಥೆಯ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ದಾವಣಗೆರೆ ಗಾನ ಲಹರಿ ತಂಡದ ಕಲಾವಿದರು ಹಾಡು ಹಾಡಲಿದ್ದಾರೆ ಎಂದು ತಿಳಿಸಿದರು.

ಅಕಾಡೆಮಿ ಗೌರವ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ್ ಮಾತನಾಡಿ, ಇಡೀ ಕಾರ್ಯಕ್ರಮದ ಪೂರ್ಣ ಉಸ್ತುವಾರಿಯನ್ನು ನಮನ ಅಕಾಡೆಮಿಯ ಕಾರ್ಯದರ್ಶಿ, ನೃತ್ಯ ಗುರುಗಳಾದ ವಿದುಷಿ ಡಿ.ಕೆ. ಮಾಧವಿ ನಿರ್ವಹಿಸುವರು. ಅಕಾಡೆಮಿ ಆಯೋಜಿಸುತ್ತಿರುವ 2ನೇ ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ. 2023ರಲ್ಲಿ ವಿಯೆಟ್ನಾಂ ದೇಶದಲ್ಲಿ ವಿಯೆಟ್ನಾಂನ ವಿ ಯೋಗ ಒಕ್ಕೂಟ, ದಾವಣಗೆರೆ ಅವಿಯ ಯೋಗ ಅಕಾಡೆಮಿ, ನಮನ ಅಕಾಡೆಮಿ ಜಂಟಿಯಾಗಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗಾಸನ ಸ್ಪರ್ಧೆ, ಪ್ರತಿಭಾ ಪ್ರದರ್ಶನ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಜಂಟಿಯಾಗಿ ಸಂಘಟಿಸಿದ್ದವು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಕೆ.ಎನ್. ಗೋಪಾಲಕೃಷ್ಣ, ಗುರುಗಳಾದ ಡಿ.ಕೆ.ಮಾಧವಿ ಪಿ.ಸಿ.ರಾಮನಾಥ, ಕಿರಣ ರವಿನಾರಾಯಣ ಇತರರು ಇದ್ದರು.

- - - -21ಕೆಡಿವಿಜಿ36ಃ:

ದಾವಣಗೆರೆಯಲ್ಲಿ ಮಂಗಳವಾರ ನಮನ ಅಕಾಡೆಮಿ ಉಪಾಧ್ಯಕ್ಷ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article