ಕೈಗಾರಿಕಾ ಭೂಸ್ವಾಧೀನ: ಆಮರಣಾಂತ ಉಪವಾಸ ಎಚ್ಚರಿಕೆ

KannadaprabhaNewsNetwork |  
Published : Jan 05, 2024, 01:45 AM IST
ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಭೂಸ್ವಾದೀನ ವಿಚಾರದಲ್ಲಿ ಅವೈಜ್ಞಾನಿಕ ಬೆಲೆ ನಿಗಧಿ ಖಂಡಿಸಿ ಬುಧವಾರ ಸುದ್ದಿಗೋಷ್ಠಿ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಕೈಗಾರಿಕೆ ಸೇರಿದಂತೆ ಇತರೆ ಉದ್ದೇಶಗಳಿಗೆ ಸರ್ಕಾರ ರೈತರ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ರ ಭೂಸ್ವಾಧೀನ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಆಗ್ರಹಿಸಿದರು.

ದೊಡ್ಡಬಳ್ಳಾಪುರ: ಕೈಗಾರಿಕೆ ಸೇರಿದಂತೆ ಇತರೆ ಉದ್ದೇಶಗಳಿಗೆ ಸರ್ಕಾರ ರೈತರ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ರ ಭೂಸ್ವಾಧೀನ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಾಡಿರುವ ಕಾನೂನುಗಳನ್ನು ಬದಿಗೊತ್ತಿರುವ ಅಧಿಕಾರಿಗಳು ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ, ಕೊನಘಟ್ಟ, ಕೋಡಿಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳಿಗೆ ಸೇರಿರುವ 970 ಎಕರೆ, ಲಿಂಗನಹಳ್ಳಿ ಗ್ರಾಮದ ಸುತ್ತ 570 ಎಕರೆ ರೈತರ ಫಲವತ್ತಾದ ಭೂಮಿಗೆ ಅವರದೇ ಆದ ಮಾನದಂಡಗಳ ಆಧಾರದ ಮೇಲೆ ಬೆಲೆ ನಿಗದಿ ಮಾಡಿಕೊಂಡು ಬಲವಂತದ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದರು.

ತಾಲೂಕಿನ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆ ಮುಖ್ಯ. ಆದರೆ ರೈತರ ಭೂಮಿಗೆ ಸರ್ಕಾರ ರೂಪಿಸಿರುವ ಕಾನೂನುಗಳನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ವೈಜ್ಞಾನಿಕ ಬೆಲೆ ನೀಡದೆ ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ರೈತರ ಕೃಷಿ ಭೂಮಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಜ.9ರಂದು ನಾಗದೇನಹಳ್ಳಿ ಸಮೀಪ ರಸ್ತೆ ತಡೆ ನಡೆಸುವ ಮೂಲಕ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.

ವಿರೋಧವಿದ್ದರೂ ಅವೈಜ್ಞಾನಿಕ ಬೆಲೆ ನಿಗದಿ!:

ಟಿಎಪಿಎಂಸಿಎಸ್ ನಿರ್ದೇಶಕ ಆನಂದ್ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಭೂಮಿಯ ದರ ನಿಗದಿ ಸಭೆಯಲ್ಲಿ ಅಧಿಕಾರಿಗಳು ನಿಗದಿಪಡಿಸಿದ್ದ ಬೆಲೆಗೆ ಎಲ್ಲಾ ರೈತರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿ ಸಹಿ ಹಾಕದೇ ಸಭೆಯಿಂದ ಹೊರಬಂದಿದ್ದೇವೆ. ಆದರೂ ಸಹ ಏಕಪಕ್ಷೀಯವಾಗಿ ಕೆಐಡಿಬಿ ಅಧಿಕಾರಿಗಳೇ ತರಿ,ಖುಷ್ಕ,ಭಾಗಾಯ್ತು ಭೂಮಿಗೆ ಇಂತಿಷ್ಟು ಎಂದು ಬೆಲೆ ನಿಗದಿಪಡಿಸಿಕೊಂಡು ರೈತರಿಗೆ ಅಂತಿಮ ಭೂಸ್ವಾಧೀನದ ನೋಟಿಸ್ ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಮಧ್ಯವರ್ತಿಗಳಿಗೆ ಮಣೆ: ಆಕ್ರೋಶ

ಕೆಐಡಿಬಿ ಅಧಿಕಾರಿಗಳು ರೈತರಿಗೆ ಹತ್ತಾರು ಭೂ ದಾಖಲೆಗಳನ್ನು ನೀಡುವಂತೆ ಸೂಚಿಸುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ತಾಲೂಕು ಕಚೇರಿಯಲ್ಲಿಯೇ ಇರುವಾಗ ದಾಖಲೆ ನೀಡುವಂತೆ ರೈತರಿಗೆ ನೋಟಿಸ್ ನೀಡುವ ಅಗತ್ಯವಾದರೂ ಏನಿದೆ ಎಂದು ಪ್ರಶ್ನಿಸಿದ ಅವರು, ಬೆಂಗಳೂರಿನಲ್ಲಿರುವ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ದೇವನಹಳ್ಳಿ ತಾಲೂಕಿನ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಬೇಕು. ಒಂದಕ್ಕೆ ನಾಲ್ಕು ಪಟ್ಟು ಹೆಚ್ಚಿನ ಬೆಲೆ ನೀಡಬೇಕು ಎನ್ನುವ ಬೇಡಿಕೆಗಳು ಈಡೇರದ ಹೊರತು ಜ.9 ರಿಂದ ಪ್ರಾರಂಭವಾಗುವ ನಮ್ಮ ಹೋರಾಟವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರೈತರಾದ ನಾರಾಯಣಗೌಡ, ನರಸಿಂಹಮೂರ್ತಿ, ನಿವೃತ್ತ ಶಿಕ್ಷಕ ಕೃಷ್ಣಪ್ಪ, ನಾರಾಯಣಸ್ವಾಮಿ, ಬಾಬು ಇತರರಿದ್ದರು.(ಫೋಟೊ ಕ್ಯಾಪ್ಷನ್‌)ದೊಡ್ಡಬಳ್ಳಾಪುರದಲ್ಲಿ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರೈತರಾದ ನಾರಾಯಣಗೌಡ, ನರಸಿಂಹಮೂರ್ತಿ, ನಿವೃತ್ತ ಶಿಕ್ಷಕ ಕೃಷ್ಣಪ್ಪ, ನಾರಾಯಣಸ್ವಾಮಿ, ಬಾಬು ಇತರರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌