ಕೈಗಾರಿಕೆಗಳಿಂದ ದೇಶದ ಆರ್ಥಿಕ ಪ್ರಗತಿ

KannadaprabhaNewsNetwork |  
Published : Sep 19, 2025, 01:01 AM IST
18ಕೆಪಿಎಲ್21 ಕೊಪ್ಪಳ ನಗರದ ಮಧುಶ್ರೀ ಗಾರ್ಡನ್ ನಲ್ಲಿ ಕಿರ್ಲೋಸ್ಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರವನ್ನು  ಸಂಸದ ರಾಜಶೇಖರ ಹಿಟ್ನಾಳ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕೊಪ್ಪಳ ಬಳಿ ಕಿರ್ಲೋಸ್ಕರ್ ಕಂಪನಿ 30-35 ವರ್ಷಗಳ ಹಿಂದೆಯೇ ಬಂದಿದೆ. ಆಗ ತೀವ್ರ ಸಮಸ್ಯೆಯಿದ್ದ ಕಾಲದಲ್ಲಿ ಹಾಕಲಾದ ಕಾರ್ಖಾನೆಯಿಂದ ಈ ಭಾಗದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿದೆ.

ಕೊಪ್ಪಳ:

ಕೈಗಾರಿಕೆಗಳಿಂದ ದೇಶದ ಆರ್ಥಿಕ ಪ್ರಗತಿಯಾಗಲಿದೆ. ಆದರೆ, ಅವುಗಳು ಜನವಸತಿ ಪ್ರದೇಶದಿಂದ ದೂರವಿರಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ಮಧುಶ್ರೀ ಗಾರ್ಡ್‌ನಲ್ಲಿ ಕಿರ್ಲೋಸ್ಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಚಿಕಿತ್ಸಾ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕೊಪ್ಪಳ ಬಳಿ ಕಿರ್ಲೋಸ್ಕರ್ ಕಂಪನಿ 30-35 ವರ್ಷಗಳ ಹಿಂದೆಯೇ ಬಂದಿದೆ. ಆಗ ತೀವ್ರ ಸಮಸ್ಯೆಯಿದ್ದ ಕಾಲದಲ್ಲಿ ಹಾಕಲಾದ ಕಾರ್ಖಾನೆಯಿಂದ ಈ ಭಾಗದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿದೆ. ಸುತ್ತಮುತ್ತಲ ಜನರ ಆರ್ಥಿಕ ಸ್ಥಿತಿಗತಿ ಸುಧಾರಿಸಿದೆ ಎಂದರು.

ಇಂಥ ಕೈಗಾರಿಕೆಗಳು ಹೆಚ್ಚು ಹೆಚ್ಚು ಬರಬೇಕು ಎಂದ ಅವರು, ಕಿರ್ಲೋಸ್ಕರ್ ಕಾರ್ಖಾನೆಯಿಂದ ಪರಿಸರ ಹಾನಿಯಾಗದಂತೆ ಆಡಳಿತ ಮಂಡಳಿ ಸಾಕಷ್ಟು ಮುನ್ನಚ್ಚರಿಕೆ ವಹಿಸಿದೆ. ಈ ರೀತಿ ಮುನ್ನಚ್ಚರಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಪರಿಸರ ಹಾನಿ ತಡೆಯಬೇಕೆಂದು ಹೇಳಿದರು.

ಕೊಪ್ಪಳ ಬಳಿ ಹೆಚ್ಚು ಹೆಚ್ಚು ಕಾರ್ಖಾನೆಗಳು ಬರುತ್ತಿವೆ. ಆದರೆ, ಅವುಗಳು ಜನವಸತಿ ಪ್ರದೇಶದಿಂದ ದೂರವಿರಬೇಕು. ನಮಗೆ ಜನರ ಆರೋಗ್ಯವೂ ಸಹ ಮುಖ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ, ಆರೋಗ್ಯ ಶಿಬಿರ ಮತ್ತು ರಕ್ತದಾನ ಏರ್ಪಡಿಸಿರುವುದು ಶ್ಲಾಘನೀಯ. ಸಿಎಸ್‌ಆರ್ ಫಂಡ್ ಈಗ 25 ವರ್ಷಗಳಿಂದಿಚೆ ಬಂದಿದೆ. ಆದರೆ, ನಮ್ಮ ಕಂಪನಿಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಸಾಕಷ್ಟು ಹಿಂದೆಯೇ ಪ್ರಾರಂಭಿಸಿದ್ದೇವೆ. ಕಂಪನಿಯ ಲಾಭಾಂಶದಲ್ಲಿ ಸುತ್ತಮುತ್ತಲ ಜನರ ಮತ್ತು ಪರಿಸರಕ್ಕಾಗಿ ಕೆಲಸ ಮಾಡಿದ್ದೇವೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ, ಶಿಕ್ಷಣ, ಪರಿಸರ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಆದರೂ ನಾವು ಸುತ್ತಮುತ್ತಲ ಗ್ರಾಮಸ್ಥರಿಗೆ ಋಣಿಯಾಗಿದ್ದೇವೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ಮಾತನಾಡಿ, ರಕ್ತದಾನ ಮಹತ್ವದ್ದಾಗಿದ್ದು, ಆರೋಗ್ಯ ಸಮಸ್ಯೆ ಇರುವವರು ಸೇರಿದಂತೆ ಅನೇಕರಿಗೆ ಇದರಿಂದ ಉಪಯೋಗವಾಗಲಿದೆ. ತುರ್ತಾಗಿ ಬೇಕಾದ ವೇಳೆ ರಕ್ತದ ಮಹತ್ವ ತಿಳಿಯಲಿದೆ ಎಂದರು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿ, ಕಿರ್ಲೋಸ್ಕರ್ ಸಾಕಷ್ಟು ಜನಪರ ಕಾರ್ಯಕ್ರಮ ಮಾಡುತ್ತಿದೆ. ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಪ್ರತಿಯೊಬ್ಬರು ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮುಂದಾಗುವ ವಿಪತ್ತಿನಿಂದ ಪಾರಾಗಬೇಕು ಎಂದು ಮನವಿ ಮಾಡಿದರು.

ಕಿರ್ಲೋಸ್ಕರ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪಿ. ನಾರಾಯಣ ಪ್ರಾಸ್ತಾವಿಕ ಮಾತನಾಡಿ, ಯರಕ ಮತ್ತು ಸ್ಟೀಲ್ ಕಾರ್ಖಾನೆ ಪ್ರಾರಂಭಿಸುವ ಮೂಲಕ ಕಿರ್ಲೊಸ್ಕರ್‌ ಕಂಪನಿ ಮಾಲಿಕರು ದೇಶದ ಪ್ರಗತಿಯಲ್ಲಿ ದೊಡ್ಡು ಕೊಡುಗೆ ನೀಡಿದ್ದಾರೆ. ಕೊಪ್ಪಳ ಬಳಿ ೧೯೯೪ರಲ್ಲಿ ಪ್ರಾರಂಭವಾದ ಕಂಪನಿ, ವಿವಿಧೆಡೆ ನಾನಾ ರೀತಿಯ ಕಂಪನಿ ಸ್ಥಾಪಿಸಿದೆ‌. ₹ ೨೦೦ ಕೋಟಿಯಿಂದ ಪ್ರಾರಂಭವಾದ ಕಂಪನಿ ಇಂದು ₹ 7000 ಕೋಟಿಗೆ ಬೆಳೆಸಿದ್ದೇವೆ. ಮುಂದೆ ₹ 250000 ಕೋಟಿ ಬಂಡವಾಳವಾಗುವ ದಿಸೆಯಲ್ಲಿ ಯೋಜನೆ ರೂಪಿಸಿಕೊಂಡು, ಪ್ರಯತ್ನಿಸಲಾಗುವುದು ಎಂದರು.

ಉತ್ಪಾದನೆ ಜತೆಗೆ ಉದ್ಯೋಗ ನೀಡುತ್ತಿದ್ದೇವೆ. ದೇಶದ ಆದಾಯ ಹೆಚ್ಚಳಕ್ಕೆ ಶ್ರಮಿಸಿದ್ದೇವೆ. ಅತುಲ್ ಕಿರ್ಲೋಸ್ಕರ್ ಅವರ ಅವಿರತ ಪರಿಶ್ರಮದಿಂದ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಕಂಪನಿ ಬೆಳೆಯುತ್ತಿದೆ ಎಂದ ಅವರು, ಸಿಎಸ್‌ಆರ್ ಫಂಡ್ ಮೂಲಕ ಪರಿಸರ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದೇವೆ. ೧೭೦ ಶಾಲೆಗೆ ಡೆಸ್ಕ್ ನೀಡಿದ್ದು ಅನೇಕ ಶಾಲೆಗಳಿಗೆ ವಿವಿಧ ರೀತಿಯ ಮೂಲಭೂತ ಸೌಕರ್ಯ ಒದಗಿಸಿದ್ದೇವೆ. ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಧನ ಸಹಾಯ, ಶಾಶ್ವತ ಕುಡಿಯುವ ನೀರು ಪೂರೈಕೆ, ಪರಿಸರ ಸಂರಕ್ಷಣೆಗಾಗಿ ವಸುಂಧರೆ ಚಿತ್ರೋತ್ಸವ, ಕೊಪ್ಪಳದಲ್ಲಿ ಕಾಳಿದಾಸ ಶಾಲೆ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ, ಅಂಚೆ ಕಚೇರಿ ಕಟ್ಟಡ ನಿರ್ಮಾಣ, ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್, ವೈದ್ಯಕೀಯ ಸೇವೆ, ₹ 3 ಕೋಟಿ ವೆಚ್ಚದಲ್ಲಿ ಪಬ್ಲಿಕ್ ಶಾಲೆ ನಿರ್ಮಾಣ, ವಿದ್ಯಾರ್ಥಿಗಳಿಗೆ ವಿಮಾನಯಾನ ಮೂಲಕ ಪ್ರವಾಸ, ಒಂದೂವರೆ ಲಕ್ಷ ಗಿಡ ನೆಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ರಮೇಶ ದಿಕ್ಷೀತ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಶಿವಯ್ಯಸ್ವಾಮಿ ಸ್ವಾಗತಿಸಿದರು. ವ್ಯವಸ್ಥಾಪಕ ಉದ್ದವ ಕುಲಕರ್ಣಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ
ಹಸೆಮಣೆ ಏರಬೇಕಿದ್ದ ಬಾಲ್ಯದ ಗೆಳತಿಯರು ಬೆಂಕಿಯಲ್ಲಿ ಭಸ್ಮ!