ಭತ್ತದ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ರೈತರಿಗೆ ಮಾಹಿತಿ: ಉಪ ಕೃಷಿ ನಿರ್ದೇಶಕಿ ಕೆ.ಮಾಲತಿ

KannadaprabhaNewsNetwork | Published : Aug 12, 2024 1:02 AM

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ನಾಲೆಗಳಿಗೆ ನೀರು ಬಿಡಲಾಗಿದೆ. ರೈತರು ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ಅವಶ್ಯಕತೆ ಇರುವ ಬಿತ್ತನೆ ಬೀಜಗಳನ್ನು (ಭತ್ತ, ರಾಗಿ. ದ್ವಿದಳ ಧಾನ್ಯ ಹಾಗೂ ಇತರೆ) ರೈತ ಸಂಪರ್ಕ ಕೇಂದ್ರ, ಸಹಕಾರ ಸಂಘ ಹಾಗೂ ಎಫ್.ಪಿ.ಒಗಳ ಮುಖಾಂತರ ಸಹಾಯಧನದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿನ ಎಲ್ಲಾ ಭತ್ತ ಬೆಳೆಗಾರರಿಗೆ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಬೇಸಾಯ ಕ್ರಮಗಳು ಹಾಗೂ ಜೈವಿಕ ಗೊಬ್ಬರ, ಲಘು ಪೋಷಕಾಂಶ ಬಳಕೆಯ ಬಗ್ಗೆ ಗುಂಪು ಕರೆ (Group Call) ಮೂಲಕ ಕೃಷಿ ಇಲಾಖೆ ಮಂಡ್ಯ ಉಪವಿಭಾಗದ ಉಪ ಕೃಷಿ ನಿರ್ದೇಶಕಿ ಕೆ.ಮಾಲತಿ ಮಾಹಿತಿ ನೀಡಿದರು.

ನಗರದ ಕೃಷಿ ಇಲಾಖೆಯಿಂದ ಎಲ್ಲಾ ಭತ್ತ ಬೆಳೆಗಾರರಿಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಹಯೋಗದೊಂದಿಗೆ ಭತ್ತದ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಬೇಸಾಯ ಕ್ರಮಗಳು ಹಾಗೂ ಜೈವಿಕ ಗೊಬ್ಬರ, ಲಘು ಪೋಷಕಾಂಶ ಬಳಕೆ ಬಗ್ಗೆ ಭತ್ತ ಬೆಳೆಯುವ ರೈತರಿಗೆ ಗುಂಪು ಕರೆ ಮಾಡಿ ಸಂವಾದ ನಡೆಸಿದರು.

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ನಾಲೆಗಳಿಗೆ ನೀರು ಬಿಡಲಾಗಿದೆ. ರೈತರು ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ಅವಶ್ಯಕತೆ ಇರುವ ಬಿತ್ತನೆ ಬೀಜಗಳನ್ನು (ಭತ್ತ, ರಾಗಿ. ದ್ವಿದಳ ಧಾನ್ಯ ಹಾಗೂ ಇತರೆ) ರೈತ ಸಂಪರ್ಕ ಕೇಂದ್ರ, ಸಹಕಾರ ಸಂಘ ಹಾಗೂ ಎಫ್.ಪಿ.ಒಗಳ ಮುಖಾಂತರ ಸಹಾಯಧನದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದರು.

ಖಾಸಗಿ ಬಿತ್ತನೆ ಬೀಜ ಮಾರಾಟಗಾರರಿಂದ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತರು ಜಿಲ್ಲೆಗೆ ಶಿಫಾರಸ್ಸು ಮಾಡಲಾದ ತಳಿಗಳನ್ನು ಮಾತ್ರ ಬಳಕೆ ಮಾಡಬೇಕು. ಮಂಡ್ಯ, ಮದ್ದೂರು, ಮಳವಳ್ಳಿ ತಾಲೂಕಿನ ಸರಿಸುಮಾರು 45,000 ಭತ್ತ ಬೆಳೆಯುವ ರೈತರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ಭತ್ತದ ತಳಿ ಕುರಿತು ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆಯ ಭತ್ತದ ಇಳುವರಿ ಈಗಾಗಲೇ ರಾಜ್ಯದ ಸರಾಸರಿಗೆ ಹೋಲಿಸಿದರೆ ಜಿಲ್ಲೆ ಮತ್ತು ತಾಲೂಕುಗಳ ಇಳುವರಿ ಕಡಿಮೆ ಇರುವುದು ಕಂಡಬಂದಿದೆ. ಇದಕ್ಕೆ ಅತಿಯಾದ ಯೂರಿಯಾ ಬಳಕೆ. ಸಮತೋಲನ ಪೋಷಕಾಂಶಗಳನ್ನು ಬಳಕೆ ಮಾಡದೆ ಇರುವುದು ಹಾಗೂ ಯತ್ತೇಚ್ಚವಾಗಿ ನೀರನ್ನು ಹರಿಸುವುದರಿಂದ, ಮಣ್ಣಿನ ಸತ್ವ ಕಳೆದುಕೊಂಡಿದೆ ಎಂದರು.

ನೀರನ್ನು ಎತ್ತೇಚ್ಚವಾಗಿ ಯಾವಾಗಲೂ ನಿಲ್ಲಿಸುವುದರಿಂದ ತೆಂಡ ಹೊಡೆಯುವ ಸಂಖ್ಯೆ ಕಡಿಮೆಯಾಗಿ ಇಳುವರಿ ಕುಂಠಿತವಾಗುತ್ತಿದೆ. ಜೊತೆಗೆ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯಿಲ್ಲದೆ ಮಣ್ಣಿನಲ್ಲಿ ಸಾವಯವ ಅಂಶ, ಜಿಂಕ್, ಬೋರನ್ ಪೊಟ್ಯಾಷ್ ಕೊರತೆ ಕಂಡುಬಂದಿರುತ್ತದೆ. ಆದ್ದರಿಂದ ಇಳುವರಿ ಹೆಚ್ಚಿಸಲು ಜೈವಿಕ ಗೊಬ್ಬರಗಳು ಮತ್ತು ಲಘು ಪೋಷಕಾಂಶಗಳ ಬಳಕೆ ಮಾಡಬೇಕು ಎಂದು ಹೇಳಿದರು.

ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಕೃಷಿ ಸೂಕ್ಷ್ಮಾಣು ಜೀವಿ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಎನ್.ಆಶಾ ಮಾತನಾಡಿ, ಮಣ್ಣಿನ ಆರೋಗ್ಯ ರಕ್ಷಣೆ, ರೈತರಿಗೆ ಉತ್ಪಾದನೆ ಹೆಚ್ಚಳಕ್ಕೆ ಬೇಕಾಗಿರುವ ಜೀವಾಣು ಗೊಬ್ಬರಗಳ ಉಪಯೋಗಗಳ ಅರಿವು ಮೂಡಿಸುವುದು ಅಗತ್ಯ ಎಂದರು.

ಮಂಡ್ಯ ವಲಯ ಸಂಶೋಧನಾ ಕೇಂದ್ರ ಬೇಸಾಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ.ತಿಮ್ಮೇಗೌಡ ಭತ್ತದ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಈಗಾಗಲೇ ಮುಂಗಾರು ತಡವಾಗಿದೆ. ಯಾವುದೇ ಕಾರಣಕ್ಕು ದೀರ್ಘಾವಧಿ ತಳಿಗಳನ್ನು ಬೆಳೆಯಬಾರದು. ಮಧ್ಯಮಾವಧಿ ತಳಿಗಳನ್ನು ಆಗಸ್ಟ್ ಕೊನೆಯವರೆಗೂ ನಾಟಿ ಮಾಡಬಹುದು ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ನಾಟಿ ಮಾಡುವುದಾದರೆ 110-115 ದಿನಗಳಲ್ಲಿ ಕಟಾವಿಗೆ ಬರುವ ಅಲ್ಪಾವಧಿ ತಳಿಗಳನ್ನು ಬೆಳೆಯುವುದು ಎಂದರು.

ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸುನೀತ, ದೀಪಕ್, ಪ್ರತಿಭಾ ಉಪಸ್ಥಿತರಿದ್ದರು.

Share this article