ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಜಿಲ್ಲೆಯ ವೇಮಗಲ್ ಮತ್ತು ಕೂರಗಲ್ ಪಟ್ಟಣ ಪಂಚಾಯತಿಯ ಚುನಾವಣೆಯ ದಿನಾಂಕ ನಿಗದಿಯಾಗಿದ್ದು ಜು.೨೯ ರಿಂದ ಚುನಾವಣೆ ಪ್ರದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ, ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ನಗರದ ಡಿಸಿ ಸಭಾಂಗಣದಲ್ಲಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಚುನಾವಣೆ ವೇಳಾಪಟ್ಟಿ:ಜು.೨೯ ಮಂಗಳವಾರ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ, ನಾಮಪತ್ರ ಸಲ್ಲಿಸಲು ಆ.೫ ಮಂಗಳವಾರ ಕೊನೆಯ ದಿನವಾಗಿದೆ, ಆ.೬ ಬುಧವಾರ ನಾಮಪತ್ರಗಳನ್ನು ಪರಿಶೀಲಿಸಲಾಗುವುದು, ಆ.೮ ಶುಕ್ರವಾರ ಉಮೇದುವರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮತದಾನ ಆ.೧೭ಭಾನುವಾರ ಬೆಳಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿದೆ, ಮತದಾನ ಎಣಿಕೆ ಆ.೨೦ಬುಧವಾರ ಬೆಳಗ್ಗೆ ೮ ಗಂಟೆಯಿಂದ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ನಡೆಸಲಾಗುವುದು ಎಂದು ವಿವರಿಸಿದರು.
ಈ ಅವಧಿಯಲ್ಲಿ ಸದಾಚಾರ ಸಂಹಿತೆ ಎಲ್ಲಾ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು, ಉಲ್ಲಂಘನೆ ಆಗದಂತೆ ಪಾಲಿಸಬೇಕು. ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೧೭ ವಾರ್ಡುಗಳಿದ್ದು ೨ ಚುನಾವಣಾಧಿಕಾರಿಗಳನ್ನು ಮತ್ತು ೨ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿದೆ. ಒಟ್ಟು ೨೨ ಮತಗಟ್ಟೆಗಳಿದ್ದು, ಅದರಲ್ಲಿ ೬೫೫೫ ಪುರುಷ, ೬೯೩೯ ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೩೪೯೪ ಮತದಾರರಿರುವುದಾಗಿ ತಿಳಿಸಿದರು.ಸ್ಪರ್ಧಿಗಳ ಆಸ್ತಿ ಘೋಷಣೆ
ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರ ತಿಳಿದುಕೊಳ್ಳಲು ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ ತನ್ನ ಹಿನ್ನೆಲೆ, ಚರಾಸ್ತಿ ಮತ್ತು ಸ್ತಿರಸ್ತಿಗಳ ವಿವರಗಳ ತನ್ನ ಸ್ವವಿವರ, ವಿದ್ಯಾರ್ಹತೆ ಆದಾಯದ ಮೂಲಗಳನ್ನು ಪರಿಷ್ಕೃತ ನಮೂನೆಯಲ್ಲಿ ಘೋಷಣಾ ಪತ್ರ ಸಲ್ಲಿಸಬೇಕಾಗಿದೆ ಎಂದು ಹೇಳಿದರು.ಪಟ್ಟಣ ಪಂಚಾಯತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಗರಿಷ್ಟ ಮಿತಿಯೂ ಸರ್ಕಾರದ ಅಧಿಸೂಚನೆಯಂತೆ ಒಂದು ಲಕ್ಷಗಳಾಗಿದ್ದು, ಈ ಸಂಬಂಧ ಅಭ್ಯರ್ಥಿಗಳು ಸಲ್ಲಿಸುವ ವೆಚ್ಚ ವಿವರಗಳನ್ನು ಪರಿಶೀಲಿಸಲು ಲೆಕ್ಕಪತ್ರ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿದೆ ಎಂದು ತಿಳಿಸಿದರು.ವಿದ್ಯುನ್ಮಾನ ಮತಯಂತ್ರ ಬಳಕೆಮತದಾನಕ್ಕಾಗಿ ರಾಜ್ಯ ಚುನಾವಣಾ ಆಯೋಗದ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತದೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಚುನಾವಣೆಗೂ ಸಹ ಮತಪತ್ರದಲ್ಲಿ ನೋಟ ಎಂದು ಮುದ್ರಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ ಮುದ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗಳಲ್ಲಿ ಬಂದೋಬಸ್ತ್ ಮತ್ತು ಕಾನೂನು ವ್ಯವಸ್ಥೆ ಕೈಗೊಳ್ಳಲು ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಸಹಕಾರ ಪಡೆಯಲಾಗುತ್ತದೆ. ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ೨೦೨೫ಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಈ ಕಚೇರಿಯ ಕಂಟ್ರೋಲ್ ರೂಂ ದೂ. ಸಂಖ್ಯೆ ೦೮೧೫೨-೨೪೩೫೦೬ ಹಾಗೂ ತಾಲೂಕು ಕಚೇರಿಯ ಕಂಟ್ರೋಲ್ ರೂಂ ದೂ. ಸಂಖ್ಯೆ ೦೮೧೫೨-೨೨೨೦೫೬ ಗಳು ಚಾಲನೆಯಲ್ಲಿರುತ್ತದೆ ಎಂದು ತಿಳಿಸಿದರು.
ಪಕ್ಷಗಳ ಸಹಕಾರಕ್ಕೆ ಮನವಿರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ವೇಳಾಪಟ್ಟಿಯಂತೆ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಸಾರ್ವಜನಿಕರು ಸೂಕ್ತ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಎಡಿಸಿ ಮಂಗಳ, ತಹಸೀಲ್ದಾರ್ ಡಾ.ನಯನ, ಮೀನುಗಾರಿಕೆ ಉಪ ನಿರ್ದೇಶಕ ರಾಜಣ್ಣ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೈರೇಗೌಡ, ಸಹಾಯಕ ಕೃಷಿ ನಿರ್ದೇಶಕ ಮುರಳಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ಶಿವಾರೆಡ್ಡಿ ಇದ್ದರು.