ಹೇರೂರು ಗ್ರಾಮದಲ್ಲಿ ನಡೆದ ಬ್ಯಾಂಕ್‌ನ ಮಾಹಿತಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬ ಶ್ರೀಸಾಮಾನ್ಯರು ಆರೋಗ್ಯ ವಿಮೆ, ಅಪಘಾತ ವಿಮೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ, ಅಟಲ್ ಪಿಂಚಣಿ ಯೋಜನೆಗಳನ್ನು ಮಾಡಿಸಿಕೊಂಡು ಅದರ ಸದುಪಯೋಗ ಪಡೆಯುವಂತೆ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ ಸಹಯೋಗದೊಂದಿಗೆ ಹೇರೂರು ಗ್ರಾಮದಲ್ಲಿ ನಡೆದ ಬ್ಯಾಂಕ್‌ನ ಯೋಜನೆಗಳ ಮಾಹಿತಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು. ಹೇರೂರು ಸಮುದಾಯ ಭವನದಲ್ಲಿ ಆಯೋಜಿಸಲಾದ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್ಥಿಕ ಸಮಾಲೋಚಕರಾದ ನಬಿ ಅವರು, ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಾಗಬೇಕು. ಆ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯು ಒಂದು ಅಪಘಾತ ವಿಮೆಯಾಗಿದ್ದು, ವಾರ್ಷಿಕ ರು. 20 ಗಳನ್ನು ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ ರು. 2ಲಕ್ಷಗಳವರೆಗಿನ ವಿಮಾಮೊತ್ತವು ಗ್ರಾಹಕರ ನಾಮಿನಿಗೆ ಸಿಗುವುದಾಗಿ ಮಾಹಿತಿ ನೀಡಿದರು.ವಾರ್ಷಿಕವಾಗಿ ರು. 436ಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣಹೊಂದಿದರೆ ಅಂತವರ ನಾಮಿನಿಗೂ ಕೂಡ 2 ಲಕ್ಷ ರು. ಗಳ ವಿಮಾಮೊತ್ತ ಸಿಗಲಿದೆ. ಎರಡನ್ನೂ ಮಾಡಿಸಿಕೊಂಡಲ್ಲಿ ರು. ಲಕ್ಷಗಳ ವರೆಗಿನ ವಿಮಾಮೊತ್ತ ಸಿಗಲಿದೆ. ಅಲ್ಲದೆ 60ವಯಸ್ಸು ಆದ ನಂತರದಲ್ಲಿ ಪಿಂಚಣಿ ರೂಪದಲ್ಲಿ 1000 ರು. ಗಳಿಂದ ರು. 5000 ಗಳವರೆಗಿನ ಪಿಂಚಣಿ ಹಣ ಸಿಗಬೇಕಾದರೆ ಈವಾಗಲೇ ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸಬೇಕು ಎಂದು ಮಾಹಿತಿ ನೀಡಿದರು.ಆರ್ಥಿಕ ಸಮಾಲೋಚಕರಾದ ಸಿ.ಜಿ.ಹರೀಶ್ ಅವರು ಮಾತನಾಡಿ, ಪ್ರತಿಯೊಬ್ಬರು ಮರು ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕಾಗಿದೆ. ಎಲ್ಲರೂ ನಿಮ್ಮ ಖಾತೆ ಇರುವ ಬ್ಯಾಂಕ್ ಗಳಿಗೆ ತೆರಳಿ ತಮ್ಮ ಗುರುತಿನ ಚೀಟಿ ಆಧಾರ್ ಕಾರ್ಡನ್ನು ನೀಡಿ ಮರು ಕೆವೈಸಿ ಮಾಡಿಸಬೇಕು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ನಬಾರ್ಡ್ ನ ಆರ್ಥಿಕ ನೆರವಿನೊಂದಿಗೆ ಕೊಡಗು ಜಿಲ್ಲೆಯಲ್ಲಿ ಅವಾರ್ಡ್ ಸಂಸ್ಥೆಯು ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪ್ರತೀ ತಾಲೂಕುಗಳಲ್ಲಿ ಮಾಡುತ್ತಿದ್ದು ಇದರ ಮುಖ್ಯ ಉದ್ದೇಶವೂ ಕೂಡ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದು ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಡಿಜಿಟಲ್ ಪೇಮೆಂಟ್ ಗಳ ಬಗ್ಗೆ ಮಾಹಿತಿ ನೀಡುವುದೇ ಆಗಿದೆ ಎಂದು ತಿಳಿಸಿದರು. ಕೃಷಿ ಇಲಾಖೆ ಅಧಿಕಾರಿ ಸುಪರ್ಣ ಅವರು, ಈ ಒಂದು ಕಾರ್ಯಕ್ರಮವು ಅತ್ಯಂತ ಉಪಯುಕ್ತ ವಾದ ಕಾರ್ಯಕ್ರಮವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ವೇದಿಕೆಯಲ್ಲಿ ಕೃಷಿ ಇಲಾಖೆಯ ಬ್ರಿಜೀತ, ಮೈಮುನ, ಅಂಗನವಾಡಿ ಶಿಕ್ಷಕಿ ಧನಲಕ್ಷಿ, ಹರೀಶ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.