ಬಳ್ಳಾರಿ: ರಾಜ್ಯದ ತೆರಿಗೆ ಹಣ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ಯುಐ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಸಂಸದರ ಕಚೇರಿಯನ್ನು ಮುತ್ತಿಗೆ ಹಾಕಲು ಯತ್ನಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸಂಸದರ ಕಚೇರಿಯನ್ನು ಮುತ್ತಿಗೆ ಹಾಕಲು ಯತ್ನಿಸಿದ ಎನ್‌ಎಸ್‌ಯುಐ ಕಾರ್ಯಕರ್ತರನ್ನು ಪೊಲೀಸರು ತಡೆದರು.
ಇದೇ ವೇಳೆ ಪೊಲೀಸರು ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು.ಬಳ್ಳಾರಿ ಸಂಸದರು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ. ಸಂಸದರಾದ ಬಳಿಕ ಅವರು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಸಂಸದರು ಇಲ್ಲದೆ ಕಚೇರಿ ಧೂಳು ಹಿಡಿದಿದೆ. ಈಗಲಾದರೂ ಸಂಸದರು ಬಳ್ಳಾರಿ ಕಡೆ ಮುಖ ಮಾಡಿ ಎಂದು ಘೋಷಣೆಗಳನ್ನು ಕೂಗಿದ ಎನ್‌ಎಸ್‌ಯುಐ ಕಾರ್ಯಕರ್ತರು, ಸಂಸದರ ಕಚೇರಿಯ ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿದರು. ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಜಿ. ತಿಪ್ಪೇಸ್ವಾಮಿ ಗಚ್ಚಿನಮನೆ, ಜಿಲ್ಲಾ ಮುಖಂಡರಾದ ಮಂಜುನಾಥ್ ಅಮರಾಪುರ, ನಂದೀಶ್, ಶ್ರೀಕಾಂತ್, ಅಖಿಲ್, ಜುಬೇರ್ ಬಾಷಾ, ಕೆಪಿಸಿಸಿ ವಕ್ತಾರ ವೆಂಕಟೇಶ್ ಹೆಗಡೆ, ಪಾಲಿಕೆ ಸದಸ್ಯ ಪಿ. ಗಾದೆಪ್ಪ, ಟಿ. ಪದ್ಮಾ, ಬಿ.ಎಂ. ಪಾಟೀಲ್ ಸೇರಿದಂತೆ ಸಂಘಟನೆಯ ಜಿಲ್ಲಾ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.