ಅನ್ಯಾಯದ ವಿರುದ್ಧ ಹೋರಾಡಿ ರಕ್ಷಿಸಿಕೊಳ್ಳಬೇಕು

KannadaprabhaNewsNetwork | Published : Oct 12, 2024 12:00 AM

ಸಾರಾಂಶ

ಪ್ರತಿಯೊಬ್ಬ ಮಹಿಳೆ ಕಾನೂನು ಅರಿತು ತಮಗಾಗುವ ಅನ್ಯಾಯದ ವಿರುದ್ಧ ಹೋರಾಡಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ನೇರಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರತಿಯೊಬ್ಬ ಮಹಿಳೆ ಕಾನೂನು ಅರಿತು ತಮಗಾಗುವ ಅನ್ಯಾಯದ ವಿರುದ್ಧ ಹೋರಾಡಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ನೇರಳೆ ಹೇಳಿದರು.

ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ವಿಧಾನ ಸೇ ಸಮಾಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ಸಿಗಬೇಕು. ಕೆಲವು ಭಾಗದಲ್ಲಿ ಪುರುಷರಿಗೆ ಮಹಿಳೆಯರಿಗೆ ಅಂತರ ಕಲ್ಪಿಸಿ ವೇತನದಲ್ಲಿ ತಡೆಹಿಡಿಯಲಾದ ಪ್ರಕರಣಗಳು ಕಂಡುಬಂದಿವೆ ಎಂದರು.ಕಾರ್ಮಿಕ ಮಹಿಳೆ ಮದುವೆ, ಗರ್ಭಿಣಿಯಾದ ಸಂದರ್ಭದಲ್ಲಿ ಅವಳು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯವರು ವೇತನ ಸಹಿತ ರಜೆ ನೀಡಬೇಕು. ದೌರ್ಜನ್ಯಕ್ಕೊಳಗಾದ ಮಹಿಳೆಯರ ರಕ್ಷಣೆಗೆ ಮುಂದಾಗಬೇಕು. ದೌರ್ಜನ್ಯ ಎಂಬುವುದು ಕೇವಲ ಸಮಾಜದಲ್ಲಿ ಅಷ್ಟೇ ಅಲ್ಲ ಮನೆಗಳಲ್ಲಿ ಕೂಡಾ ದೌರ್ಜನ್ಯಗಳಾದಲ್ಲಿ ಕಾನೂನು ನೆರವು ಪಡೆದುಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದರು. ಜಿ.ಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಸರ್ಕಾರದ ಯೋಜನೆಗಳಲ್ಲಿ ಒಂದಾದ ನರೇಗಾ ಯೋಜನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಅಲ್ಲಲ್ಲಿ ಮಹಿಳಾ ಸಂಘಟನೆಗಳು ಜಾಗೃತಿಗೊಂಡಿವೆ. ಮಹಿಳೆಯರು ಕೌಶಲ್ಯಾಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿವಿಧ ಉತ್ಪನ್ನಗಳನ್ನು ತಯಾರಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಕಾರ್ಯವಾಗಬೇಕು. ಮಹಿಳೆಯರಿಗಾಗಿ ರೂಪಿಸಲ್ಪಟ್ಟ ಯೋಜನೆಗಳನ್ನು ಸಾರ್ಥಕ ಪಡೆದುಕೊಂಡು ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ಮಹಿಳೆಯರಿಗೆ ಮನೆಯಲ್ಲಿಯೇ ಮೊದಲು ದೌರ್ಜನ್ಯಗಳು ನಿಲ್ಲುವಂತಾಗಬೇಕು. ದೌರ್ಜನ್ಯಗಳು ಇಬ್ಬರ ನಡುವೆ ನಡೆಯುವ ಕಹಿ ಘಟನೆಗಳಾಗಿದ್ದು, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಪುರುಷರಿಗೂ ಸಹ ಆತ್ಮ ಸಮಾಲೋಚನೆ ಆಗಬೇಕು. ಇತ್ತೀಚಿನ ದಿನಗಳಲ್ಲಿ ಒಂದೊಂದು ಕುಟುಂಬದಲ್ಲಿ ಮಹಿಳೆಯೇ ತನ್ನ ಗಂಡನ ಮೇಲೆ ದೌರ್ಜನ್ಯ ಎಸಗಿರುವ ಘಟನೆಗಳು ಕಂಡುಬಂದಿದ್ದು, ಇಂತಹ ಸಮಯದಲ್ಲಿ ಪುರುಷರು ಅಸಾಯಕರಾಗಿರುತ್ತಾರೆ. ಅವರಿಗೂ ಕೂಡಾ ಮಹಿಳೆಯರಿಗೆ ತರಬೇತಿ ನೀಡಿದಂತೆ ಪುರುಷರಿಗೂ ತರಬೇತಿ ನೀಡಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ ಮಾತನಾಡಿದರು. ಪ್ರಾರಂಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಪೆನೆಲ್ ವಕೀಲ ಕೃಷ್ಣಾ ಗೌಡರ, ಜೈಲ್ ಕ್ಲಿನಿಕ್ ವಕೀಲರಾದ ಗೀತಾ ಪಾಟೀಲ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಾನೂನು ಅಭಿರಕ್ಷಕ ಪಿ.ಎಚ್.ನಾರಾಯಣಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಂಕರಲಿಂಗ ದೇಸಾಯಿ ವಂದಿಸಿದರು. ಬಸವರಾಜ ಬಾದವಾಡಗಿ ಕಾರ್ಯಕ್ರಮ ನಿರೂಪಿಸಿದರು.

Share this article