ಶಿರಾ ತಾಲೂಕಿನ ಜಿಲ್ಲಾ ಪಂಚಾಯಿತಿ ಚುನಾವಣೆ ಮೀಸಲಾತಿಯನ್ನು ಸ್ಥಳೀಯ ಕಾಂಗ್ರೆಸ್ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದು, ನಿಷ್ಠಾವಂತ ಕಾರ್ಯಕರ್ತರು, ಹಿಂದುಳಿದ ವರ್ಗ ಹಾಗೂ ದಲಿತರನ್ನು ರಾಜಕೀಯವಾಗಿ ತುಳಿಯಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಬಿ. ಕೆ. ಮಂಜುನಾಥ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ತಾಲೂಕಿನ ಜಿಲ್ಲಾ ಪಂಚಾಯಿತಿ ಚುನಾವಣೆ ಮೀಸಲಾತಿಯನ್ನು ಸ್ಥಳೀಯ ಕಾಂಗ್ರೆಸ್ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದು, ನಿಷ್ಠಾವಂತ ಕಾರ್ಯಕರ್ತರು, ಹಿಂದುಳಿದ ವರ್ಗ ಹಾಗೂ ದಲಿತರನ್ನು ರಾಜಕೀಯವಾಗಿ ತುಳಿಯಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಬಿ. ಕೆ. ಮಂಜುನಾಥ್ ಆರೋಪಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಡುಗೊಲ್ಲ, ಕುರುಬ, ಬಲಿಜಿಗ, ಮಡಿವಾಳ, ತಿಗಳ, ಮುಸ್ಲಿಂ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯ ಸೇರಿ ಒಟ್ಟು ೧,೮೦,೦೦೦ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಶಾಸಕರಿಗೆ ಶೇ. ೮೦ರಷ್ಟು ಮತ ನೀಡಿರುವುದೇ ಈ ವರ್ಗ. ಆದರೆ, ಮೀಸಲಾತಿ ಯಲ್ಲಿ ಈ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದೆ. ಶೇ.೮೦ ಹಿಂದುಳಿದ ವರ್ಗ ಇರುವ ನಾದೂರು ಜಿಪಂ ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಮಧುಗಿರಿ ಸಂಘಟನಾತ್ಮಕ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ೭ ಕ್ಷೇತ್ರಗಳ ಪೈಕಿ ೫ ಕ್ಷೇತ್ರ ಮಹಿಳೆಯರಿಗೆ ಮೀಸಲಿಟ್ಟು ಪುರುಷರು ರಾಜಕೀಯಕ್ಕೆ ಬರದಂತೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.
ಸ್ವಪಕ್ಷೀಯ ಮುಖಂಡರ ಕಡೆಗಣನೆ:
ದೆಹಲಿ ವಿಶೇಷ ಪ್ರತಿನಿಧಿಯಂತಹ ಪ್ರಭಾವಿ ಸ್ಥಾನದಲ್ಲಿರುವ ಶಾಸಕರು, ದಶಕಗಳಿಂದ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ್ದ ಭೂವನಹಳ್ಳಿ ಶ್ರೀನಿವಾಸ್ , ಗುಳಿಗೇನಹಳ್ಳಿ, ನಾಗರಾಜ್, ಬರಗೂರು ರಾಮೇಗೌಡರ ಕುಟುಂಬ, ಸೋರೆಕುಂಟೆ ಹಾಗೂ ಚಿರತಹಳ್ಳಿ ಗ್ರಾಮಗಳ ತಮ್ಮದೇ ಸಮಾಜದ ಪ್ರಬಲ ಮುಖಂಡರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಿದ್ದಾರೆ ಎಂದು ಆಪಾದಿಸಿದರು.
ಅವೈಜ್ಞಾನಿಕ ಮೀಸಲಾತಿ ಪಟ್ಟಿಯನ್ನು ಶಾಸಕರು ಮತ್ತು ಸರ್ಕಾರ ಈ ಕೂಡಲೇ ರದ್ದುಪಡಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ, ಹಿಂದುಳಿದ ವರ್ಗಗಳು ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯದ ಪರವಾಗಿ ನಾನೇ ಖುದ್ದಾಗಿ ಬೀದಿಗಿಳಿದು ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಗಿರಿಧರ, ಮಾಜಿ ಅಧ್ಯಕ್ಷರಾದ ಪಡಿ ರಮೇಶ್, ರಂಗಸ್ವಾಮಿ, ಸಿಪಿಸಿ ಕರಿಯಣ್ಣ, ಮಾಜಿ ತಾಲೂಕ ಪಂಚಾಯತ್ ಸದಸ್ಯ ನಾಗರಾಜ್, ಶಿವಕುಮಾರ್, ಮಾಂತೇಶ್, ಸೈಯದ್ ಬಾಬಾ, ಕವಿತಾ ಸೇರಿದಂತೆ ಹಿಂದುಳಿದ ಮುಖಂಡರು ಹಾಜರಿದ್ದರು.
ಮದಲೂರು ಕೆರೆಗೆ ನೀರು:
ಶಾಸಕರ ಸಾಧನೆ ಏನಲ್ಲ
ಮದಲೂರು ಕೆರೆಗೆ ನೀರು ತರುವ ಹೋರಾಟದ ನಿಜವಾದ ರೂವಾರಿ ದಿವಂಗತ ಮಾಜಿ ಶಾಸಕರಾದ ದಾಸಪ್ಪ ಹಾಗೂ ಪಿ.ಎನ್. ರಂಗನಾಥಪ್ಪ ಅವರು, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಮಾಜಿ ಶಾಸಕ ರಾಜೇಶ್ ಗೌಡರ ನಿರಂತರ ಪ್ರಯತ್ನದಿಂದ ಜಿಲ್ಲೆಯಲಿ ಸಾಕಷ್ಟು ವಿರೋಧದ ನಡುವೆಯೂ ಮಾಧುಸ್ವಾಮಿ ನೇತೃತ್ವದಲ್ಲಿ ನೀರು ತರಲಾಯಿತು. ಇದರಲ್ಲಿ ಹಾಲಿ ಶಾಸಕರ ಸಾಧನೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.