ಮಾಜಿ ಶಾಸಕ ಬಿ ಬಿ ರಾಮಸ್ವಾಮಿಗೌಡ ಅಭಿಮತ । ಕನ್ನಡ ರಥಯಾತ್ರೆಗೆ ಸ್ವಾಗತ
ಕನ್ನಡಪ್ರಭ ವಾರ್ತೆ ಕುಣಿಗಲ್ಕನ್ನಡಿಗರಿಗೆ ಹಲವಾರು ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕಾದ ಅನಿವಾರ್ಯತೆ ಉಂಟಾಗಿದೆ. ಅಂತಾರಾಷ್ಟ್ರೀಯ ಮತ್ತು ಮುಕ್ತ ವ್ಯಾಪಾರಿಕರಣ ಮಾರುಕಟ್ಟೆ ಹಾಗೂ ಅಂತಾರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಗಳು, ಇತರ ವ್ಯವಹಾರಗಳಿಂದ ಈಗಾಗಲೇ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ ಎಂದು ಮಾಜಿ ಶಾಸಕ ಬಿ ಬಿ ರಾಮಸ್ವಾಮಿಗೌಡ ಬೇಸರ ವ್ಯಕ್ತಪಡಿಸಿದರು.
ಕುಣಿಗಲ್ ಪಟ್ಟಣದ ಗ್ರಾಮ ದೇವತೆ ದೇವಾಲಯದ ಮುಂಭಾಗ ತಾಲೂಕು ಆಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮತ್ತು ಇತರ ಸಂಘ ಸಂಸ್ಥೆಗಳು ಜಂಟಿಯಾಗಿ ಬರಮಾಡಿಕೊಂಡ ಕನ್ನಡ ರಥಯಾತ್ರೆಯನ್ನುದ್ದೇಶಿಸಿದ ಮಾತನಾಡಿದರು.ಸರ್ಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿಟ್ಟಿನಲ್ಲಿ ಜಾಗೃತಗೊಂಡು ಕನ್ನಡಿಗರಿಗೆ ನ್ಯಾಯ ಕೊಡುವ ಪ್ರಯತ್ನವಾಗಿ ಕನ್ನಡ ಮೀಸಲಾತಿಯನ್ನು ಉದ್ಯೋಗ ಕ್ಷೇತ್ರದಲ್ಲಿ ತರಬೇಕು ಎಂದು ಹೇಳಿದರು.
ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಬೆಂಗಳೂರಿಗರು ಕನ್ನಡವನ್ನು ಕೇಳಲು ಕುಣಿಗಲ್‌ಗೆ ಬನ್ನಿ ಎಂದು ನಾವು ಕರೆಯಬೇಕಾಗುತ್ತದೆ. ಕನ್ನಡ ಉಳಿಯಬೇಕಾದರೆ ಮಕ್ಕಳಲ್ಲಿ ಈಗಲೇ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.ಕುಣಿಗಲ್ ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ, ಸರ್ಕಾರದ ವತಿಯಿಂದ ನಿಯೋಜಿಸಿದ್ದ ಕಾರ್ಯಕ್ರಮವನ್ನು ತುರುವೇಕೆರೆಯಿಂದ ನಾವು ಬರಮಾಡಿಕೊಂಡು ಬೀಳ್ಕೊಡುಗೆ ಮಾಡುತ್ತೇವೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಕೂಡ ಪುಣ್ಯವಂತರು ಎಂದು ಅಭಿನಂದಿಸಿದರು,
ಕುಣಿಗಲ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಕಪನಿ ಪಾಳ್ಯ ರಮೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೋಸೆಫ್, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ, ಕ್ಷೇತ್ರ ಸಂಯೋಜಕ ಶಿಕ್ಷಣಾಧಿಕಾರಿ ಧನಂಜಯ, ಪುರಸಭಾ ಮುಖ್ಯ ಅಧಿಕಾರಿ ಮಂಜುಳಾ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ದಿನೇಶ್, ಮುಖಂಡರಾದ ವರದರಾಜು, ಹುಚ್ಚೇಗೌಡ, ಬಜರಂಗದಳದ ಪ್ರಮುಖ ಗಿರೀಶ್, ಗ್ರಾಮ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು, ಪುರಸಭಾ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.