ಕನ್ನಡಿಗರಿಗೆ ರೈಲ್ವೆ ಪರೀಕ್ಷೆಯಲ್ಲಿ ಅನ್ಯಾಯ: ಇಂದು ಕರವೇ ಪ್ರತಿಭಟನೆ

KannadaprabhaNewsNetwork |  
Published : May 12, 2026, 02:15 AM IST
ರೈಲು | Kannada Prabha

ಸಾರಾಂಶ

ರೈಲ್ವೆ ಇಲಾಖೆ ನೇಮಕಾತಿಯಲ್ಲಿ ಕನ್ನಡಿಗ ಅಭ್ಯರ್ಥಿಗಳಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಬಡ್ತಿಗಾಗಿ ನಡೆಯುವ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ಸಿಗುತ್ತಿಲ್ಲ.

ಹುಬ್ಬಳ್ಳಿ:

ರೈಲ್ವೆ ನೇಮಕಾತಿ, ಬಡ್ತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಮೇ 12ರಂದು ಬೆಳಗ್ಗೆ 11 ಗಂಟೆಗೆ ಕರವೇ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ನೇತೃತ್ವದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರವೇ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಲೂತಿಮಠ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ಇಲಾಖೆ ನೇಮಕಾತಿಯಲ್ಲಿ ಕನ್ನಡಿಗ ಅಭ್ಯರ್ಥಿಗಳಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಬಡ್ತಿಗಾಗಿ ನಡೆಯುವ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ಸಿಗುತ್ತಿಲ್ಲ. ಪ್ರತಿಭಟನೆ ಮಾಡಿದ ತಕ್ಷಣ ಪರೀಕ್ಷೆ ರದ್ದು ಮಾಡಿ ಮುಂದೂಡುತ್ತಾರೆ. ಮತ್ತೆ ಅದೇ ತರಹ ಚಾಳಿ ಮುಂದುವರಿಸಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಸಮಾನ ಅವಕಾಶ ದೊರೆಯಬೇಕು ಎಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ರೈಲ್ವೆ ನೇಮಕಾತಿಯಲ್ಲಿ ಸ್ಥಳೀಯ ರಾಜ್ಯಗಳಿಗೆ ಶೇ. 75ರಷ್ಟು ನೇಮಕಾತಿ ಮಾಡಿಕೊಳ್ಳಬೇಕು. ಕನ್ನಡ ಭಾಷೆಯ ನಿರ್ಲಕ್ಷ್ಯ ಮಾಡಬಾರದು. ಎಲ್ಲ ರೈಲ್ವೆ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಆಯ್ಕೆಯಾಗಿ ಸೇರಿಸಬೇಕು ಎಂದು ಆಗ್ರಹಿಸಿದರು.

ನೈಋತ್ಯ ರೈಲ್ವೆ ಮಂಡಳಿ ಇದನ್ನು ಜಾರಿಗೆ ತರದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲ ರೈಲ್ವೆ ಕಚೇರಿಗಳ ಎದುರು ಧರಣಿ ಹಮ್ಮಿಕೊಳ್ಳಲಾಗುವುದು. ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು. ಸಂಸದರು ಮತ್ತು ಶಾಸಕರ ಮೂಲಕವೂ ಒತ್ತಡ ಹಾಕಲಾಗುವುದು ಎಂದ ಅವರು, ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ಆರಂಭವಾಗಲಿದ್ದು ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಯ 500ಕ್ಕೂ ಅಧಿಕ ಕರವೇ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ರೈಲ್ವೆಯ ಮುಂಬಡ್ತಿ ಸೇರಿದಂತೆ ಎಲ್ಲ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸುವ ಕುರಿತು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಲಿಖಿತ ಭರವಸೆ ನೀಡಬೇಕು. ಜತೆಗೆ 15 ದಿನಗಳೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲ ರೈಲು ನಿಲ್ದಾಣಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕರವೇ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಾಪು ಧಾರೆ, ರಾಜ್ಯ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಮುತ್ತು ಅರಗಿಣಿ ಶೆಟ್ಟಿ, ಹಾವೇರಿ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ, ಗದಗ ಜಿಲ್ಲಾಧ್ಯಕ್ಷ ತಿಮ್ಮಣ್ಣ ಡೋಣಿ, ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಪ್ರವೀಣ ಗಾಯಕವಾಡ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರ್ಪಕವಾಗಿ ಬಸ್ ಸಂಚಾರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕುಡಿವ ನೀರಿನ ಸಮಸ್ಯೆ