ಹಾವೇರಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ ಕೊರತೆಯಾಗಿದ್ದು, ರಾಜ್ಯಕ್ಕೆ ವಾರ್ಷಿಕ ₹12ರಿಂದ ₹15 ಸಾವಿರ ಕೋಟಿ ನಷ್ಟವಾಗಿದೆ. ನಮಗೆ ಬರುವ ನ್ಯಾಯಯುತ ಪಾಲು ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಜೆಜೆಎಂನಲ್ಲಿ ₹15 ಸಾವಿರ ಕೋಟಿ ಇನ್ನೂ ಕೊಟ್ಟಿಲ್ಲ. ಈ ಅನುದಾನ ನೀಡಿದರೆ ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ. ಹಲವು ಬಾರಿ ನಮ್ಮ ಹಕ್ಕು ಮಂಡಿಸಿದರೂ ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮುಂದುವರೆದಿದೆ ಎಂದಿ ಸಿದ್ದರಾಮಯ್ಯ ವಾಕ್ಸಮರ ನಡೆಸಿದರು.
ರಾಜ್ಯದ ಜಿಡಿಪಿ ದೇಶದಲ್ಲೇ ನಂಬರ್ ಒನ್ ಆಗಿಸಿದ್ದು ನಮ್ಮ ಜನಪರ ಸರ್ಕಾರ. ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲೂ ರಾಜ್ಯ ದಾಖಲೆ ವೇಗದಲ್ಲಿ ಸಾಗುತ್ತಿದೆ. ಈ ಎಲ್ಲ ಸಾಧನೆ ಮತ್ತು ದಾಖಲೆಗಳನ್ನು ಕೇಂದ್ರ ಸರ್ಕಾರದ ಅನ್ಯಾಯದ ನಡುವೆಯೂ ಮಾಡಿ ತೋರಿಸಿದ್ದೇವೆ. ಬಿಜೆಪಿಯವರು ರಾಜ್ಯ ಸರ್ಕಾರ ದಿವಾಳಿಯಾಗಿದೆ, ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಖಜಾನೆ ಖಾಲಿಯಾಗಿದೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. 5 ಗ್ಯಾರಂಟಿಗಳ ಮೂಲಕ ₹1.18 ಲಕ್ಷ ಕೋಟಿಗಳನ್ನು ನೇರವಾಗಿ ಜನರ ಖಾತೆಗೆ ಹಾಕಿದ್ದೇವೆ. ದಿವಾಳಿಯಾಗಿದ್ದರೆ ಇದನ್ನು ಮಾಡಲು ಆಗುತ್ತಿರಲಿಲ್ಲ ಎಂದು ಹೇಳಿದರು.ಕ್ರಾಂತಿಕಾರಿ ಪ್ರಗತಿ: ಕಂದಾಯ ಇಲಾಖೆಗೆ ಕೃಷ್ಣ ಬೈರೇಗೌಡರು ಸಚಿವರಾದ ಮೇಲೆ ಸರ್ಕಾರದಲ್ಲಿ ಕ್ರಾಂತಿಕಾರಿ ಪ್ರಗತಿ ಆಗಿದೆ. ನಮ್ಮ ಸರ್ಕಾರ ಬಂದು 2 ವರ್ಷ 9 ತಿಂಗಳಾಗಿದೆ. ನಾವು ಕೊಟ್ಟ ಭರವಸೆಗಳಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಅವಧಿಯಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು. ಆರ್ಥಿಕ ತಜ್ಞರ ಜತೆಗೆ ದಿನಪತ್ರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಅಧ್ಯಯನಗಳು ವ್ಯಕ್ತಪಡಿಸಿದ್ದ ಸದಾಭಿಪ್ರಾಯಗಳನ್ನು ಮುಖ್ಯಮಂತ್ರಿಗಳು ಓದಿ ವಿವರಿಸಿ, ಬಿಜೆಪಿಯವರು ಜನರನ್ನು ತಪ್ಪು ದಾರಿಗೆಳೆಯುವುದು ಖಂಡನೀಯ ಎಂದರು.
ಸರ್ಕಾರ ಒಂದು ಸಾವಿರ ದಿನ ಪೂರೈಸಿದ್ದು, ಬಡವರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರ ಪರವಾಗಿ ನಾವು ನಿಲ್ಲುತ್ತೇವೆ. ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿ, ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.