-ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಜನತಾ ದರ್ಶನ
----ಕನ್ನಡ ಪ್ರಭ ವಾರ್ತೆ, ಮೊಳಕಾಲ್ಮುರು
ನಮ್ ಜನಗಳು ತುಂಬಾ ಒಳ್ಳೆಯವರು ಹಠಕ್ಕೆ ಬಿದ್ದು ನನ್ನ ಗೆಲ್ಲಿಸಿದ್ದಾರೆ. ಅವರ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಅಧಿಕಾರಿಗಳು ಅಭಿವೃದ್ಧಿ ಕಾರ್ಯದಲ್ಲಿ ಸಹಕಾರ ನೀಡಬೇಕೆಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು. ರಾಂಪುರ ಗ್ರಾ.ಪಂ. ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.ತಾಲೂಕಿನ ಜನತೆ ತುಂಬಾ ಮುಗ್ಧರು ಮತ್ತು ಒಳ್ಳೆಯವರು ಸದಾ ನನ್ನ ಏಳಿಗೆಯನ್ನೇ ಬಯಸಿ ನನ್ನನ್ನು ಶಾಸಕರನ್ನಾಗಿಸಿದ್ದಾರೆ. ಅವರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕೆಂದು ಹೇಳಿದರು.
ರಾಂಪುರ ಗ್ರಾಮಕ್ಕೆಕುಡಿವ ಕೊರತೆ ನೀಗಿಸಲು 60ಲಕ್ಷ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ರಾಂಪುರ ಜನತೆಗೆ ಶಾಶ್ವತ ಕುಡಿವ ನೀರಿನ ಕೊರತೆ ನೀಗಲಿದೆ. 85 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿರುವ ರಾಂಪುರ ಗ್ರಾ.ಪಂ.ಯನ್ನು ಮೇಲುದರ್ಜೆಗೇರಿಸಿ ಪ.ಪಂ.ಯಿತಿಯನ್ನಾಗಿಸಬೇಕೆನ್ನುವುದು ಈ ಭಾಗದ ಜನತೆಯ ಬಹುದಿನದ ಬೇಡಿಕೆ. ಈಗಾಗಲೇ ಸರ್ಕಾರದ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಗ್ರಾ.ಪಂ. ಯನ್ನು ಪ.ಪಂ.ಯನ್ನಾಗಿಸುತ್ತೇನೆಂದರು.ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೋಮಶೇಖರ್, ಗುಳೆ ನಿಯಂತ್ರಣಕ್ಕೆ ನರೇಗಾ ಯೋಜನೆಯಲ್ಲಿ ಕೆಲಸ ನೀಡಬೇಕು. ಕೂಲಿ ಕೇಳುವಂತ ಫಲಾನುಭವಿಗಳಿಗೆ ಕೆಲಸ ಕೊಡುವ ಮೂಲಕ ಸಕಾಲಕ್ಕೆ ಕೂಲಿ ಪಾವತಿಸಬೇಕು ಎಂದರು.
ಬಾಕ್ಸ್.......ನಿಧಾನ ಗತಿಯಲ್ಲಿ ಅಭಿವೃದ್ಧಿ ಕಾರ್ಯಗಳು
ಗ್ಯಾರೆಂಟಿ ಯೋಜನೆಗಳನ್ನ ಸರ್ಕಾರ ಯಶಸ್ವಿಯಾಗಿ ನಡೆಸುತ್ತಿರುವ ಪರಿಣಾಮ ಅನುದಾನ ಕೊರತೆ ಎದುರಾಗಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ. ಮುಂದಿನ ದಿನಗಳಲ್ಲಿ ಸರ್ಕಾರ ಎಲ್ಲವನ್ನು ಸರಿದೂಗಿಸಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದ ಅನುದಾನ ನೀಡುವ ವಿಶ್ವಾಸವಿದ್ದು, ಅಧಿಕಾರಿಗಳು ಸದ್ಯ ಬರುವ ಅನುದಾನ ಪರಿಣಾಮಕಾರಿ ಬಳಕೆ ಮಾಡಿಕೊಂಡು ತಾಲೂಕಿನ ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕರು ತಿಳಿಸಿದರು.-----
ಬಾಕ್ಸ್.... 2ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್
224 ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹೆಚ್ಚು ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್, ಸರ್ಕಾರಿ ಪ್ರಾಥಮಿಕ ಶಾಲೆಯ 20 ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ, ಆರೋಗ್ಯ ಇಲಾಖೆಯಿಂದ ಐದು ಜನರಿಗೆ ಆಯುಷ್ಮಾನ್ ಕಾರ್ಡ್, ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ ಕಿಟ್ ವಿತರಣೆ, ಈರುಳ್ಳಿ ಸಂಗ್ರಹಣ ಘಟಕ ನಿರ್ಮಾಣಕ್ಕೆ ಕಾರ್ಯದೇಶ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಐದು ಜನರಿಗೆ ತರಕಾರಿ ಬೀಜಗಳ ಕಿಟ್ಟ ವಿತರಣೆ, 5 ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡಲಾಯಿತು.-----
ಫೋಟೊ:ಉಪ ವಿಭಾಗಾಧಿಕಾರಿ ಕಾರ್ತಿಕ್, ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ರವಿ ಕುಮಾರ್, ಉಪಾಧ್ಯಕ್ಷೆ ಅನಿತಾ ವಿಜಯ ಕುಮಾರ್, ತಹಶೀಲ್ದಾರ್ ಜಗದೀಶ್, ಇ.ಒ.ಪ್ರಕಾಶ, ವ್ಯವಸ್ಥಾಪಕ ನಂದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಉಲ್ಲಾ, ಮುಖಂಡ ಕುಮಾರ ಸ್ವಾಮಿ, ಪಿಡಿಒ ಗುಂಡಪ್ಪ ಇದ್ದರು.