ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದ ವಿಸ್ಮಯಕಾರಿ ಕೀಟ ಪ್ರಪಂಚದಲ್ಲಿ ಈ ಬಾರಿ ಕೀಟಗಳಿಂದ ತಯಾರಿಸಿದ ಕೀ ಬಂಚ್‌ಗಳು ಜನರ ಗಮನಸೆಳೆಯುತ್ತಿವೆ.ವಿಸ್ಮಯಕಾರಿ ಕೀಟ ಪ್ರಪಂಚದಲ್ಲಿ ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ತಂದು ಅವುಗಳಿಂದ ವಿವಿಧ ರೀತಿಯ ಕೀ ಬಂಚ್‌ಗಳನ್ನು ತಯಾರಿಸಿರುವ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಅವುಗಳನ್ನು ಸುಂದರವಾಗಿ ಸಿಂಗರಿಸಿ ಪ್ರದರ್ಶನಕ್ಕಿಟ್ಟಿದ್ದಾರೆ. ಮೇಳಕ್ಕೆ ಆಗಮಿಸಿದ ಜನ ಕುತೂಹಲಭರಿತರಾಗಿ ಅವುಗಳನ್ನು ವೀಕ್ಷಿಸುತಿದ್ದಾರೆ.
ಪ್ರಮುಖವಾಗಿ ಜೇನುನೊಣ, ಚಿಟ್ಟೆ, ಜೀರುಂಡೆ, ಮಿಡತೆ, ಮಿಣಕು ಹುಳು, ಡ್ರ್ಯಾಗನ್ ಫ್ಲೈ ಸೇರಿದಂತೆ ಹತ್ತಾರು ಬಗೆಯ ಕೀಟಗಳಿಂದ ತಯಾರಿಸಿದ ಕೀ ಚೈನ್ ಗಳು ಪ್ರದರ್ಶನದಲ್ಲಿವೆ. ಇದೇ ಪ್ರಥಮ ಬಾರಿಗೆ ಕೀ ಬಂಚ್ ಮಾಡಿರುವ ವಿದ್ಯಾರ್ಥಿಗಳು ನಾಲ್ಕನೇ ದಿನ ಇದರ ಮಾರಾಟವನ್ನೂ ಹಮ್ಮಿಕೊಂಡಿದ್ದಾರೆ. ಈ ವೇಳೆ ಉತ್ತಮ ಪ್ರತಿಕ್ರಿಯೆ ದೊರೆತರೆ ಮುಂದಿನ ವರ್ಷದಿಂದ ಇಂತಹ ಕೀ ಬಂಚ್‌ಗಳನ್ನು ತಯಾರಿಸಿ ಮಾರಾಟ ಮಾಡುವ ಉದ್ದೇಶವನ್ನೂ ಹೊಂದಿದ್ದಾರೆ.ಪ್ರದರ್ಶನ ಕುರಿತಂತೆ ವಿದ್ಯಾಲಯದ ಪ್ರೊ. ಮಹಾಬಲೇಶ್ವರ ಹೆಗಡೆ ಮಾಹಿತಿ ನೀಡಿ, ಈ ಕೀಟಗಳಲ್ಲಿ ಕೆಲವು ಜನ್ಮತಾಳಿದ ದಿನವೇ ಸಾವನ್ನಪ್ಪುವುದರಿಂದ ಹಿಡಿದು ಸುಮಾರು 17 ವರ್ಷದ ವರೆಗೆ ಬದುಕುವಂತವುಗಳಿವೆ. ನಗಾರಿ ಕೀಟ 15ರಿಂದ 20 ವರ್ಷ ಬದುಕುತ್ತದೆ. ವಿಶೇಷವಾಗಿ ಗೆದ್ದಲು ಹುಳುವಿನ ಪ್ರಬೇಧವಾದ ರಾಣಿ ಹುಳು 30 ವರ್ಷಗಳ ವರೆಗೆ ಬದುಕಬಲ್ಲದು ಎಂದು ಅವರು ತಿಳಿಸಿದರು.
ಇಲ್ಲಿನ ಪ್ರದರ್ಶನದಲ್ಲಿ ಸುಮಾರು ಸಾವಿರ ಪ್ರಭೇದದ ಕೀಟಗಳ ಕೀ ಬಂಚ್ ತಯಾರಿಸಲಾಗಿದೆ. ಕೀಟಗಳಲ್ಲೇ ಆಹಾರ ಪದಾರ್ಥವಾಗಿ ಕೀಟಗಳು, ಕೀಟಗಳನ್ನು ತಿನ್ನುವ ಸಸ್ಯಗಳು, ಕೀಟಗಳ ರೋಬೋಟ್ ಮಾದರಿ, ವಿವಿಧ ರೀತಿಯ ಜೇನುನೋಣಗಳು, ಕೀಟಗಳ ಆಭರಣ, ಕೀ ಚೈನ್, ಕೀಟಗಳನ್ನೇ ಬಳಸಿ ವಿವಿಧ ಕಲಾಕೃತಿಗಳನ್ನು ರಚಿಸಲಾಗಿದೆ.ನಿಸರ್ಗದಲ್ಲಿ ಎಲ್ಲ ಪ್ರಬೇಧದ ಕೀಟಗಳೂ ಮುಖ್ಯ. ಭಾರತದಲ್ಲಿ ಸಿಗುವ ಕೀಟಗಳಿಂದ ಕೀ ಚೈನ್, ಆಭರಣ ತಯಾರಿಸಲಾಗಿದೆ. ಇಂತಹ ಕೀ ಬಂಚ್ ಮತ್ತು ಆಭರಣಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದನ್ನು ಗಮನಿಸಿ ತಯಾರಿಸಲಾಗಿದೆ. ಆಭರಣಗಳ ತಯಾರಿಕೆಗೆ ಪ್ರಬುದ್ಧ ಕೀಟಗಳನ್ನು ಆಯ್ದು ತರಲಾಗಿದೆ.
ಹುಳುಗಳಿಂದಲೇ ಆಪರೇಷನ್ ಸಿಂದೂರ:"ಈ ಸಲ ಕಪ್ಪು ನಮ್ದು, ಕೀಟಗಳನ್ನು ಬಳಸಿ ಮಾಡಿರುವ ಆಪರೇಷನ್ ಸಿಂದೂರ ಮಾದರಿಯ ಆಕರ್ಷಣೆಯ ಕೇಂದ್ರವಾಗಿದೆ. ಕೆಲ ಜಲವಾಸಿಗಳನ್ನು ಮೀನುಗಳಂತೆ ಅಕ್ವೆರಿಯಂನೊಳಗೆ ಪ್ರದರ್ಶನಕ್ಕೆ ಇಟ್ಟಿರುವುದು ಗಮನ ಸೆಳೆಯುತ್ತಿದೆ. ಕೀಟ ರೂಪದ ರೊಬೋಟಿಕ್ಸ್ ಮಾದರಿ ಮೇಳದ ಮತ್ತೊಂದು ಆಕರ್ಷಣೆಯಾಗಿದೆ.
ಎಲ್ಲರ ಕಣ್ಣು ರೇಷ್ಮೆ ಕೃಷಿಕ- ರಮಣಿ ಮೇಲೆ: ಪ್ರದರ್ಶನದಲ್ಲಿ ಗೊಂಬೆಗಳಿಗೆ ವಿಶೇಷವಾಗಿ ರೇಷ್ಮೆಗೂಡುಗಳ ಸಹಾಯದಿಂದ ಅಲಂಕರಿಸಿದ್ದು, ನೋಡಲು ಆಕರ್ಷಕವಾಗಿದೆ. ಇದನ್ನು ಅಲಂಕರಿಸಲು ಆರು ಕೆಜಿ ರೇಷ್ಮೆ ಗೂಡು ಬಳಸಿ ಐದಾರು ಜನ ವಿದ್ಯಾರ್ಥಿಗಳು, 8 ದಿನಗಳ ಕಾಲ ತಯಾರಿಸಿದ್ದಾರೆ. ಇದಕ್ಕೆ ರೇಷ್ಮೆ ಕೃಷಿಕ ಮತ್ತು ರೇಷ್ಮೆ ರಮಣಿ ಎಂದು ವಿದ್ಯಾರ್ಥಿಗಳು ಹೆಸರಿಸಿದ್ದಾರೆ ಎಂದು ಕೀಟಶಾಸ್ತ್ರ ವಿಭಾಗದ ಪಿಎಚ್‌ಡಿ ವಿದ್ಯಾರ್ಥಿ ಶಿವಕುಮಾರ ಮಾಹಿತಿ ನೀಡಿದರು.