ಮೈಸೂರು ಪಾದಯಾತ್ರೆ ಹಿಂದೆ ಒಳ ಒಪ್ಪಂದ ರಾಜಕಾರಣ: ಶಾಸಕ ಯತ್ನಾಳ

KannadaprabhaNewsNetwork | Published : Jul 30, 2024 12:31 AM

ಸಾರಾಂಶ

ಬಿಜೆಪಿ ಮುಖಂಡರು ಬೆಂಗಳೂರಿನಿಂದ ಮೈಸೂರಿಗೆ ಹೊರಟ ಪಾದಯಾತ್ರೆ ಸಿಎಂ ಸಿದ್ದರಾಮಯ್ಯ ವಿರುದ್ಧವಲ್ಲ, ಬದಲಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಒಳಒಪ್ಪಂದ ಭಾಗವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ವಪಕ್ಷದ ನಾಯಕರ ವಿರುದ್ಧವೇ ಹೊಸ ಬಾಂಬ್‌ ಸಿಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ

ಮುಡಾ ಹಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು ಬೆಂಗಳೂರಿನಿಂದ ಮೈಸೂರಿಗೆ ಹೊರಟ ಪಾದಯಾತ್ರೆ ಸಿಎಂ ಸಿದ್ದರಾಮಯ್ಯ ವಿರುದ್ಧವಲ್ಲ, ಬದಲಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಒಳಒಪ್ಪಂದ ಭಾಗವಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ವಪಕ್ಷದ ನಾಯಕರ ವಿರುದ್ಧವೇ ಹೊಸ ಬಾಂಬ್‌ ಸಿಡಿಸಿದ್ದಾರೆ.

ಸೋಮವಾರ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಜೊತೆಗೆ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಶಾಸಕ ರಮೇಶ ಜಾರಕಿಹೊಳಿ ಹೇಳಿದಂತೆ ವಾಲ್ಮೀಕಿ ಹಗರಣ ಸೇರಿದಂತೆ ಹಲವಾರು ಹಗರಣಗಳು ನಡೆದಿವೆ. ಪಕ್ಷದ ಹೈಕಮಾಂಡ್‌ ಒಪ್ಪಿಗೆ ಕೊಟ್ಟರೆ ಇವುಗಳ ವಿರುದ್ಧ ಜಾಗೃತಿ ಮೂಡಿಸಲು ನಾನು ಮತ್ತು ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮವಾರ ನಾನು ನೀಡಿದ ಹೇಳಿಕೆಗೆ ಬದ್ಧವಾಗಿದ್ದೇನೆ. ವಾಲ್ಮೀಕಿ ಹಗರಣ, ಇತರ ಹಗರಣಗಳ ವಿರುದ್ಧ ಪಾದಯಾತ್ರೆ ನಡೆಸಲು ಸಿದ್ಧರಾಗಿದ್ದು, ಹೈಮಾಂಡ್‌ ಒಪ್ಪಿಗೆ ಸಿಕ್ಕರೆ ನಾನು ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸುತ್ತೇವೆ ಎಂದು ಹೇಳಿದರು.

ವಿಜಯೇಂದ್ರ ರಾಜ್ಯಾಕ್ಷರಾಗಲೂ ಮೊದಲೇ ವಿರೋಧಿಸಿದ್ದೆ: ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ವಿಜೇಂದ್ರ ಆಯ್ಕೆ ವಿರೋಧಿಸುತ್ತಿರುವುದು ಈಗಲ್ಲ. ನೇಮಕ ಮಾಡುವಾಗಲೇ ವಿರೋಧಿಸಿದ್ದೆ. ಆದರೆ, ಬಹಿರಂಗ ಹೇಳಿಕೆ ನೀಡಿರಲಿಲ್ಲ. ಯಾಕೆಂದರೆ, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರಬಾರದು ಎಂದು ಪಕ್ಷದ ಹಿತದೃಷ್ಟಿಯಿಂದ ಸುಮ್ಮನಿದ್ದೆ. ಈ ವಿಚಾರವನ್ನು ಹೈಕಮಾಂಡ್‌ ಗಮನಕ್ಕೂ ತಂದಿದ್ದೇನೆ. ಹೈಕಮಾಂಡ್‌ ಏನು ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡುತ್ತಿದ್ದೇವೆ ಎಂದರು.

ಈ ವೇಳೆ ಮಾಜಿ ಸಚಿವ ಮಹೇಶ ಕುಮಟಳ್ಳಿ, ಧರೆಪ್ಪ ಠಕ್ಕನವರ ಇತರರು ಇದ್ದರು.

Share this article