ಕನ್ನಡಪ್ರಭ ವಾರ್ತೆ ಹೊಸದುರ್ಗ
ಶಾಲೆಗಳು ಹೊರನೋಟದ ಅಭಿವೃದ್ಧಿಯಾದರೆ ಸಾಲದು ಒಳನೋಟದ ಅಭಿವೃದ್ಧಿಯಾಗಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ತಾಲೂಕಿನ ಶ್ರೀರಾಂಪುರದಲ್ಲಿನ ಕೆಪಿಎಸ್ ಶಾಲೆಯಲ್ಲಿ ಶನಿವಾರ ಎಸ್‌ಡಿಎಂಸಿ ಸಮಿತಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಶೈಕ್ಷಣಿಕ ಗುಣಮಟ್ಟದ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಎಸ್‌ಡಿಎಂಸಿಯ ಕರ್ತವ್ಯ. ಕೆಪಿಎಸ್ ಶಾಲೆಗಳಲ್ಲಿ ಬರುವ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಈ ಮೂರು ವಿಭಾಗಗಳು ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು.
ಶಿಕ್ಷಕರು ತಮಗೆ ನೀಡಿರುವ ಗುರಿ ಪೂರ್ಣ ಗೊಳಿಸಲು ಸಮಯ ಬರುವವರೆಗೂ ಕಾಯದೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಪುನರಪಿ ಅಭ್ಯಾಸ ಮಾಡಿಸಿ ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದರು.
ಕಳೆದ ನನ್ನ ಅವಧಿಯಲ್ಲಿ ತಾಲೂಕಿನ ಶಾಲೆಗಳಿಗೆ 25 ಲಕ್ಷ ರು ಅನುದಾನ ಕೊಟ್ಟು ಪೀಠೋಪಕರಣ ಕೊಡಿಸಿದ್ದೆ ಈಗ ಮತ್ತೆ ಬೇಡಿಕೆ ಇದೆ ಕೊಡಿಸುವ ಕೆಲಸ ಮಾಡುತ್ತೇನೆ.ಎಲ್ಲ ಸಮಸ್ಯೆ ಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿಯೇ ಮುಗಿಸುತ್ತೇನೆ ಎಂದು ಹೇಳಲ್ಲ ಅನುದಾನದ ಲಭ್ಯತೆಯ ಮೇರೆಗೆ ಪೂರ್ಣ ಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಬಿಇಒ ಸಯ್ಯದ್ ಮೊಸೀನ್ ಪ್ರಸ್ಥಾವಿಕ ಮಾತನಾಡಿ, ರಾಜ್ಯ ದಲ್ಲಿ 1 ಸಾವಿರ ಕೆಪಿಎಸ್ ಶಾಲೆಗಳಿವೆ. ಕೆಪಿಎಸ್ ಶಾಲಾ ವಾತಾವರಣವನ್ನು ಒಂದೇ ಆಡಳಿತದಲ್ಲಿ ತರುವ ನಿಟ್ಟಿನಲ್ಲಿ 2021 ರಲ್ಲಿ ಸರ್ಕಾರ ಎಸ್ ಡಿ ಎಂ ಸಿಯನ್ನು ಜಾರಿಗೆ ತಂದಿದೆ.
ಎಸ್‌ಡಿಎಂಸಿ ಸದಸ್ಯರಾದ ಪೋಷಕ ಸದಸ್ಯರು ಕಾಲಕಾಲಕ್ಕೆ ಶಾಲೆಗೆ ಆಗಮಿಸಿ ಮಕ್ಕಳ ಕಲಿಕೆಯ ಬಗ್ಗೆ ಪರಿಶೀಲನೆ ಮಾಡಬೇಕು. ಸರ್ಕಾರದಿಂದ ಬರುವ ಅನುದಾನವನ್ನು ಕ್ರೂಢೀಕರಿಸಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಎಸ್‌ಡಿಎಂಸಿ ಸಮಿತಿ ನಾಮ ನಿರ್ದೇಶಿತ ಸದಸ್ಯ ಲೊಕೇಶಪ್ಪ ಮಾತನಾಡಿ, ಸಮಿತಿಯ ಎಲ್ಲಾ ಸದಸ್ಯರು ಸ್ವ ಹಿತಾಸಕ್ತಿ ಬಿಟ್ಟು ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು. ಸಮಸ್ಯೆಗಳನ್ನು ಹೇಳಿಕೊಂಡು ಕರ್ತವ್ಯಗಳಿಂದ ಜಾರಿಕೊಳ್ಳದೆ ಇರುವ ಸೌಕರ್ಯಗಳನ್ನು ಬಳಸಿಕೊಂಡು ಪ್ರಗತಿ ಕಾಣಬೇಕು.
ಸ್ವಚ್ಛತೆ ಬಗ್ಗೆ ಎಲ್ಲರೂ ಹೆಚ್ಚಿನ ಗಮನ ನೀಡಬೇಕು. ಹಿಂದೆ ಶಾಲಾ ಅವರಣವನ್ನು ಮಕ್ಕಳ ಕೈಯಲ್ಲಿ ಮಾಡಿಸಲಾಗುತ್ತಿತ್ತು, ಆದರೆ ಇಂದು ಮಕ್ಕಳ ಕೈಯಲ್ಲಿ ಸ್ವಚ್ಛತೆ ಮಾಡಿಸಿದರೆ ಜೈಲು ಸೇರಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಇನ್ನು, ಇದೇ ವೇಳೆ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಧರಣಪ್ಪ ಮಾತನಾಡಿ, 1 ರಿಂದ 5 ರವರೆಗೆ ಪೀಟೋಪಕರಣಗಳಿಲ್ಲ, ಬಿಸಿಯೂಟ ಮಾಡಲು ಸುಸಜ್ಜಿತ ಕಟ್ಟಡ ಬೇಕು ಎಂದು ಬೇಡಿಕೆಯಿಟ್ಟರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಕೆ.ವಿ.ಪ್ರಕಾಶ್, ಎಸ್ಡಿಎಂಸಿ ಉಪಾಧ್ಯಕ್ಷ ರೇವಣ್ಣ, ಉಪ ಪ್ರಾಂಶುಪಾಲ ಸತೀಶ್ ದತ್ತ ದೇಶಭಂಡಾರಿ, ಇಸಿಓ ಬಸವರಾಜಪ್ಪ, ಜಿಪಂ ಎಇಇ ಪ್ರಕಾಶ್, ಎಸ್‌ಡಿಎಂಸಿ ಪೋಷಕ ಸದಸ್ಯರು, ಪದನಿಮಿತ್ತ ಸದಸ್ಯರು, ನಾಮ ನಿರ್ದೇಶಕ ಸದಸ್ಯರು, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.