ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಒತ್ತಾಯ

KannadaprabhaNewsNetwork | Published : Sep 29, 2024 1:34 AM

ಸಾರಾಂಶ

ಸರ್ಕಾರದ ಸಹಾಯಧನ ಪಡೆದು ರಸ್ತೆಯಲ್ಲಿಯೇ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದರಿಂದ ರೈತರ ಕೃಷಿ ಚಟುವಟಿಕೆ ಮತ್ತು ಸಾರ್ವಜನಿಕರಿಗೆ ತೊಂದರೆ

ಗದಗ: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ, ರಸ್ತೆಯಲ್ಲಿಯೇ ವೈಯಕ್ತಿಕ ಶೌಚಾಲಯ ನಿರ್ಮಾಣ, ನಿಗದಿತ ಸಮಯದೊಳಗೆ ತಲುಪದ ಸಹಾಯಧನ, ಕಳಪೆ ಕಾಮಗಾರಿ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಕುರಿತು ಕಳೆದ ಮೂರು ದಿನಗಳಿಂದ ತಾಲೂಕಿನ ಲಕ್ಕುಂಡಿ ಗ್ರಾಮದ ಸಮುದಾಯ ಭವನದಲ್ಲಿ ನಡೆದ ವಾರ್ಡ್‌ ಸಭೆಯಲ್ಲಿ ಸುದಿರ್ಘವಾಗಿ ಚರ್ಚಿಸಲಾಯಿತು.

ಸರ್ಕಾರದ ಸಹಾಯಧನ ಪಡೆದು ರಸ್ತೆಯಲ್ಲಿಯೇ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದರಿಂದ ರೈತರ ಕೃಷಿ ಚಟುವಟಿಕೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು 11 ಮತ್ತು 7ನೇ ವಾರ್ಡಿನ ನಾಗರಿಕರು ದೂರಿದರು. ಮಾರುತಿ ನಗರದಲ್ಲಿ ಲೈಬ್ರರಿ ಸ್ಥಾಪನೆ, ನ್ಯಾಯ ಬೆಲೆ ಅಂಗಡಿ, ಅಂಬೇಡ್ಕರ್ ನಗರದಲ್ಲಿ ಲೈಬ್ರರಿ ಕಟ್ಟಡ ನಿರ್ಮಾಣ, ಹೈಟೆಕ್ ಶೌಚಾಲಯಕ್ಕಾಗಿ ಒತ್ತಾಯಿಸಲಾಯಿತು.

ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗೆ ಕೇವಲ ಹೆಸರು ನೋಂದಣಿ ಬೇಡ ಎಂದು 9ನೇ ವಾರ್ಡಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿ, ಜಂತ್ಲಿ ಶಿರೂರ ರಸ್ತೆ ದುರಸ್ತಿ ಮತ್ತು ಸಾರ್ವಜನಿಕರಿಗೆ ಅಪಾಯವಾಗಿರುವ ಹನುಮನ ಬಾವಿ ಸಂರಕ್ಷಣಾ ಕಾಮಗಾರಿ ಬೇಗನೆ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

ಗ್ರಾಮದ ಹಲವು ಓಣಿಯ ರಸ್ತೆಯಲ್ಲಿ ಹಿಂದಿನ ಅವಧಿಯಲ್ಲಿ ಕಳಪೆ ಮಟ್ಟದ ಸಿ.ಸಿ.ರಸ್ತೆ ನಿರ್ಮಾಣದಿಂದ ಕಾಮಗಾರಿ ಮುಕ್ತಾಯದ ಕೆಲ ತಿಂಗಳಲ್ಲಿಯೇ ಕಿತ್ತು ಹೋಗಿದ್ದು, ಕಲ್ಲಿನ ಕಡಿ ಮಾತ್ರ ಉಳಿದಿದೆ. ಇದರಿಂದ ಮಕ್ಕಳು, ವಯೋವೃದ್ಧರಿಗೆ, ಮಹಿಳೆಯರು ನಡೆದಾಡುವಾಗ ಕಲ್ಲಿನ ಕಡಿಗಳು ಕಾಲಿಗೆ ನಾಟುತ್ತಿದ್ದು ಗಾಯಗಳಾಗುತ್ತಿವೆ. ಈ ಬಗ್ಗೆ ಕಳೆದ ಸಭೆಯಲ್ಲಿಯೇ ತಿಳಿಸಲಾಗಿದೆ. ಕಡಿ ತೆಗೆದು ಹಾಕಿ ಅಥವಾ ಸಿ.ಸಿ.ರಸ್ತೆ ಮರು ನಿರ್ಮಿಸಿಕೊಡಬೇಕು ಎಂದು 9ನೇ ಮತ್ತು 6ನೇ ವಾರ್ಡಿನ ನಾಗರಿಕರು ಒತ್ತಾಯಿಸಿದರು.

ಮಳೆ ಮತ್ತು ಗಟಾರು ನೀರು ಹಲವು ವರ್ಷಗಳಿಂದ ನಮ್ಮ ಸ್ವಂತ ಜಾಗದಲ್ಲಿ ಹಾಕಿದ ಬಣವಿಯ ಸ್ಥಳದಲ್ಲಿ ನಿಲ್ಲುವುದರಿಂದ ಪ್ರತಿವರ್ಷ ಮೇವು ಕೆಡುತ್ತಿದೆ. ಈ ಬಗ್ಗೆ ಹಲವು ಬಾರಿ ಗ್ರಾಪಂಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ಕೇವಲ ಭರವಸೆ ಕೊಡುವುದಾಗಿದೆ. ಇನ್ನೂ ಅಂಗನವಾಡಿ ಕಟ್ಟಡವಿಲ್ಲದೇ ಮಠದಲ್ಲಿ ನಮ್ಮ ಮಕ್ಕಳು ಕಲಿಯುವಂತಾಗಿದೆ ಎಂದು 7ನೇ ವಾರ್ಡಿನ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಭೂ ಬಾಡಿಗೆದಾರ ನಿವೇಶನ ವಶಪಡಿಸಿಕೊಳ್ಳಿ: ಹಲವಾರು ವರ್ಷಗಳಿಂದ ಭೂ ಬಾಡಿಗೆದಾರರು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ಅವಧಿ ಮುಗಿದರೂ ತಮ್ಮ, ಮಕ್ಕಳು, ಮೊಮ್ಮಕ್ಕಳಿಗೆ ವರ್ಗಾಯಿಸುತ್ತ ಬರುತ್ತಿದ್ದಾರೆ. ಗ್ರಾಪಂ ಆಸ್ತಿ ಮಕ್ಕಳಿಗೆ, ಸಹೋದರರಿಗೆ ಹಂಚಿಕೆಯಾಗುತ್ತಿವೆ. ಭೂ ಬಾಡಿಗೆ ನಿಯಮಾವಳಿ ಪ್ರಕಾರ ಗ್ರಾಪಂನ ದೊಡ್ಡ ಆಸ್ತಿ ಮತ್ತೊಬ್ಬ ಅರ್ಹರಿಗೆ ಉದ್ಯೋಗ ಮಾಡಲು ದೊರೆಯಬೇಕು. ಈ ಬಗ್ಗೆ ಅಧಿಕಾರಿಗಳು, ಗ್ರಾಪಂ ಆಡಳಿತ ಕ್ರಮ ಜರುಗಿಸಬೇಕು ಎಂದು 3ನೇ ವಾರ್ಡಿನ ನಾಗರಿಕರು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಹಲವು ವೈಯಕ್ತಿಕ ಮತ್ತು ಸಮುದಾಯ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.

ಅಭಿವೃದ್ಧಿಗೆ ಸಹಕರಿಸಿ: ಜೆ.ಜೆ.ಎಂ. ಕಾಮಗಾರಿ ಅಪೂರ್ಣವಾಗಿರುವುದರಿಂದ ಸಮರ್ಪಕ ಕುಡಿಯುವ ನೀರು ಪೊರೈಕೆಯಲ್ಲಿ ವ್ಯತ್ಯಾಸವಾಗುತ್ತಿದ್ದು ನೀರಿನ ತೊಂದರೆ ಶೀಘ್ರ ಬಗೆಹರಿಸಲಾಗುವುದು. ನೀರನ್ನು ವ್ಯರ್ಥ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವಶ್ಯವಿರುವ ಕಡೆ ಹೈಟೆಕ್ ಶೌಚಾಲಯ ನಿರ್ಮಿಸಲಾಗುತ್ತಿದ್ದು ಗ್ರಾಮದ ಸ್ವಚ್ಛತೆಗೆ ಸಹಕರಿಸಬೇಕು. ಮನೇರೆಗಾ ಯೋಜನೆಯ ಫಲಾನುಭವಿಗಳು ಕಾಮಗಾರಿಯನ್ನು ಪೂರ್ಣಗೊಳಿಸಿ ಸಹಾಯ ಧನ ಪಡೆದುಕೊಳ್ಳಿ. ವಿಳಂಬವಾದರೂ ಪ್ರಾಮಾಣಿಕವಾಗಿ ಗ್ರಾಮದ ಅಭಿವೃದ್ಧಿ ಮಾಡಲು ಪ್ರಯತ್ನಿಸಲಾಗುತ್ತಿದ್ದು, ಅ. 2ರಂದು ನಡೆಯುವ ಗ್ರಾಮ ಸಭೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ವಿನಂತಿಸಿಕೊಂಡರು.

ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾಪಂ ಸದಸ್ಯರು, ಪಿಡಿಒ ರಾಜಕುಮಾರ ಭಜಂತ್ರಿ, ಎಸ್.ಡಿ.ಎ ತುಕಾರಾಮ ಹುಲಗಣ್ಣವರ, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Share this article