ಗ್ರಾಮೀಣಾಭಿವೃದ್ಧಿ ಆಯುಕ್ತರಿಂದ ನರೇಗಾ ಕಾಮಗಾರಿ ಪರಿಶೀಲನೆ

KannadaprabhaNewsNetwork |  
Published : Apr 22, 2024, 02:20 AM IST
20ಕೆಪಿಎಲ್22 ಬಹದ್ದೂರಬಂಡಿ, ಬಿಸರಳ್ಳಿ, ಕೋಳೂರು ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆಯುಕ್ತರಾದ ಪವನ್ ಕುಮಾರ್ ಮಾಲಪಾಟಿ ಅವರು ಶನಿವಾರದಂದು ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ಮಾಡಿದರು. | Kannada Prabha

ಸಾರಾಂಶ

ಬಹದ್ದೂರಬಂಡಿ, ಬಿಸರಳ್ಳಿ, ಕೋಳೂರು ಗ್ರಾಪಂಗಳಲ್ಲಿ ಕಾಮಗಾರಿ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆಯುಕ್ತ ಪವನ್ ಕುಮಾರ್ ಮಾಲಪಾಟಿ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ನರೇಗಾ ಯೋಜನೆಯಡಿ 2023-24 ಹಾಗೂ 2024-25ನೇ ಸಾಲಿನಲ್ಲಿ ಅನುಷ್ಠಾನಗೊಂಡ ಮತ್ತು ಅನುಷ್ಠಾನಗೊಳ್ಳುತ್ತಿರುವ ಬಹದ್ದೂರಬಂಡಿ, ಬಿಸರಳ್ಳಿ, ಕೋಳೂರು ಗ್ರಾಪಂಗಳಲ್ಲಿ ಕಾಮಗಾರಿ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆಯುಕ್ತ ಪವನ್ ಕುಮಾರ್ ಮಾಲಪಾಟಿ ಭೇಟಿ ನೀಡಿ ಪರಿಶೀಲಿಸಿದರು.

ಬಹದ್ದೂರಬಂಡಿ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಹೂವಿನಾಳ ರಸ್ತೆಯ ಬದಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕೆಲಸ, ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ಮಾಡಿದರು. ಸ್ಥಳದಲ್ಲಿದ್ದ ಕೂಲಿಕಾರರ ಜೊತೆಗೆ ಚರ್ಚಿಸಿದರು.

ಬಳಿಕ ಮಾತನಾಡಿದ ಅವರು, ಜಾಬ್‌ಕಾರ್ಡ್‌ಗಳಲ್ಲಿ ಕೂಲಿ ಕೆಲಸ ನಿರ್ವಹಿಸಿದ ಬಗ್ಗೆ ಸಂಪೂರ್ಣ ಮಾಹಿತಿ ಅಪಡೇಟ್ ಮಾಡತಕ್ಕದ್ದು. ಇದರಿಂದ ಕೂಲಿಕಾರರಿಗೆ ವರ್ಷದಲ್ಲಿ ಎಷ್ಟು ದಿನಗಳ ಕೂಲಿ ಕೆಲಸ ನಿರ್ವಹಿಸಿದ್ದೇವೆ ಹಾಗೂ ಎಷ್ಟು ಕೂಲಿ ಹಣ ಪಾವತಿಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಮೆಟ್ ಗಳು ನಿಮ್ಮ ಕೂಲಿಕಾರರಿಗೆ ಅಳತೆ ಕುರಿತು ಸರಿಯಾಗಿ ಮಾಹಿತಿ ನೀಡಿರಿ. ಇದರಿಂದ ಅವರಿಗೂ ಕೂಡಾ ಅಳತೆಯ ಬಗ್ಗೆ ತಿಳಿಯುತ್ತದೆ ಎಂದರು.

ನಾಲಾ ಹೂಳೆತ್ತುವ ಕಾಮಗಾರಿಯ ಕಡತದ ಅಂದಾಜು ಪತ್ರಿಕೆಯಲ್ಲಿ ಅಳವಡಿಸಿಕೊಂಡಿರುವ ಮಾಹಿತಿಯನ್ನು ಪರಿಶೀಲಿಸಿದರು. ಬೇಸಿಗೆ ಇರುವುದರಿಂದ ನಿರಂತರವಾಗಿ ಕೂಲಿಕಾರರಿಗೆ ಕೂಲಿ ಕೆಲಸ ಲಭ್ಯವಿದೆ. ಆ ಕಾರಣಕ್ಕಾಗಿ ಗ್ರಾಮ ಪಂಚಾಯತಿಯಿಂದ ಕ್ರಮವಹಿಸಲು ಸೂಚಿಸಿದರು.

ಸಾಮಾಜಿಕ ಅರಣ್ಯ ಇಲಾಖೆಯಿಂದ ಬಿಸರಳ್ಳಿ ಗ್ರಾಪಂ ವ್ಯಾಪ್ತಿಯ ಬಿಸರಳ್ಳಿ ಗ್ರಾಮದಿಂದ ಬಿಕನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಬದಿ ನೆಡುತೋಪು ಅನುಷ್ಠಾನಗೊಳಿಸಿರುವ ಕಾಮಗಾರಿ ವೀಕ್ಷಿಸಿದರು. ನೆಡುತೋಪುಗಳ ರಕ್ಷಣೆ ಬಹು ಮುಖ್ಯವಾದುದು. ಹೆಚ್ಚು ಹೆಚ್ಚು ನೆಡುತೋಪು ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕೆಂದು ಸೂಚಿಸಿದರು. ವೈಯಕ್ತಿಕ ಸೌಲಭ್ಯ ಪಡೆಯಲು ₹5 ಲಕ್ಷ ದವರೆಗೆ ಅವಕಾಶ ಇರುವುದರಿಂದ ದಾಳಿಂಬೆ ಇತ್ಯಾದಿಗಳನ್ನು ನರೇಗಾದಡಿ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕೆಂದು ಸ್ಥಳದಲ್ಲಿದ್ದ ರೈತರಿಗೆ ತಿಳಿಸಿದರು. ರೈತರಿಗೆ ಅವಕಾಶ ಇರುವ ಕಡೆ ಹೆಚ್ಚು ದಾಳಿಂಬೆ ತೋಟ ನಿರ್ಮಿಸಿಕೊಳ್ಳಲು ರೈತರಿಗೆ ಪ್ರೇರಣೆ ಮಾಡಬೇಕೆಂದು ಸ್ಥಳದಲ್ಲಿ ಹಾಜರಿದ್ದ ತೋಟಗಾರಿಕೆ ಉಪನಿರ್ದೇಶಕರು ಹಾಗೂ ಹಿರಿಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

2023-24 ಮತ್ತು 2024-25ನೇ ಸಾಲಿನಲ್ಲಿ ಕೋಳೂರು ಗ್ರಾಪಂಯಿಂದ ಕಾಟರಳ್ಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಶೌಚಾಲಯ, ಅಡುಗೆ ಕೋಣೆ ಇತ್ಯಾದಿ ಶಾಲಾಭಿವೃದ್ಧಿ ಕಾಮಗಾರಿಗಳನ್ನು, ಸ್ಥಳದಲ್ಲಿ ಕಾಮಗಾರಿಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ದಾಖಲಾತಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಆಯುಕ್ತಾಲಯದ ಜಂಟಿ ನಿರ್ದೇಶ (ತೋಟಗಾರಿಕೆ) ಶ್ರೀಶೈಲ ದಿಡ್ಡಿಮನಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಕ ಕೃಷ್ಣ ಉಕ್ಕುಂದ, ರಾಜ್ಯ ಯೋಜನಾ ಅಭಿಯಂತರ ಯಶವಂತ, ತಾಪಂ ಇಒ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಂಕ್ರಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರನಗೌಡ, ಜಿಪಂ ಎಡಿಪಿಸಿ ಮಹಾಂತಸ್ವಾಮಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಎಂಐಎಸ್ ಸಂಯೋಜಕ ಮೈನುದ್ದೀನ್, ತಾಲೂಕ ನರೇಗಾ ಸಿಬ್ಬಂದಿ, ಪಿಡಿಒಗಳು, ತಾಂತ್ರಿಕ ಸಹಾಯಕರು, ಬೇರ್ ಪೂಟ್ ಟೆಕ್ನಿಷಿಯನ್‌ಗಳು, ಗ್ರಾಮ ಕಾಯಕ ಮಿತ್ರರು ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ