ದೆಹಲಿಯ ಜಂತರ್ ಮಂತರ್ ನಲ್ಲಿ ಭಯೋತ್ಪಾದಕರಿಗೆ ಪ್ರೇರಣೆ ಕೊಡುವ ಕೆಲಸವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಉಡುಪಿ: ದೆಹಲಿಯ ಜಂತರ್ ಮಂತರ್ ನಲ್ಲಿ ಭಯೋತ್ಪಾದಕರಿಗೆ ಪ್ರೇರಣೆ ಕೊಡುವ ಕೆಲಸವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಎಲ್ಲವನ್ನು ಗಮನಿಸುತ್ತಿದೆ, ಕಾಕ್ರೋಚ್ ಗಳಿಗೆ ಗಲಭೆ, ಗಲಾಟೆ, ನೂಕಾಟ ಗೋಲಿಬಾರ್ ಆಗಬೇಕು, ಪ್ರಾಣ ಹಾನಿ ಆಗಬೇಕು ಅನ್ನೋ ನಿರೀಕ್ಷೆ ಇದೆ, ಆದರೇ ಪ್ರಧಾನಿ ನರೇಂದ್ರ ಮೋದಿ ಅವರು ಗಟ್ಟಿಯಾಗಿ ನಿಂತು ಯಾವುದಕ್ಕೂ ಅವಕಾಶ ನೀಡಿಲ್ಲ, ಬದಲಿಗೆ ಯುವಕರಿಗೆ ಬುದ್ಧಿ ಹೇಳಿ ಕಳುಹಿಸಲಾಗುತ್ತಿದೆ, ಈಗ ಯಾವ ವಿದ್ಯಾರ್ಥಿಗಳು ಪ್ರತಿಭಟನಾ ಸ್ಥಳದಲ್ಲಿ ಇಲ್ಲ, ಮಕ್ಕಳ ಹೆತ್ತವರು ಬುದ್ಧಿ ಹೇಳಿ ವಾಪಸ್ ಕರೆಸಿದ್ದಾರೆ, ಪ್ರಧಾನಿಗಳ ಮೂಲಕ ದೇಶ ಕಟ್ಟುವ ಕೆಲಸ ಆಗುತ್ತಿದೆ ಎಂದರು.
ಭಯೋತ್ಪಾದಕರು, ರಾಷ್ಟ್ರ ವಿರೋಧಿಗಳು ಸೇರಿ ಪ್ರಧಾನಿಗಳ ಮನೆಗೆ ನುಗ್ಗುವ ಷಡ್ಯಂತ್ರ ಮಾಡಿದ್ದರು, ಆದರೇ ಅದನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿಲ್ಲ, ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಹಿಡಿದು 12 ವರ್ಷ ಕಳೆಯಿತು, ಈಗಿನ ಯುವಕರಿಗೆ ನರೇಂದ್ರ ಮೋದಿ ಮೊದಲಿನ ಆಡಳಿತ ಹೇಗಿತ್ತು ಅನ್ನೋದು ಅರಿವಿಲ್ಲ, ಮೋದಿ ಪ್ರಧಾನಿಯಾಗುವ ಮುಂಚೆ ರೈಲು ಬಸ್ಸು ವಿಮಾನ ನಿಲ್ದಾಣಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗುತ್ತಿತ್ತು, ಅಪರಿಚಿತ ವಸ್ತು ಮುಟ್ಟಬೇಡಿ ಎಂದು ಎಚ್ಚರಿಸಲಾಗುತ್ತಿತ್ತು, ಬಾಂಬ್ ಇರಬಹುದು ಎಂದು ಎಚ್ಚರಿಸಲಾಗುತ್ತಿತ್ತು, ಆಗ ಈ 18 -19 ವರ್ಷದ ಹುಡುಗರು ತಂದೆ ತಾಯಿಯ ಕೈ ಹಿಡಿದು ಹೋಗುವ ಸಣ್ಣಪ್ರಾಯದಲ್ಲಿದ್ದರು, ದೇಶದಲ್ಲಿ ಆದ ಮಹತ್ವದ ಬದಲಾವಣೆಗಳು ಹೊಸ ತಲೆಮಾರಿನ ಹುಡುಗರಿಗೆ ಗೊತ್ತಿಲ್ಲ, ಆ ಕಾರಣಕ್ಕೆ ಕ್ರಾಕೋಚ್ ಗಳತ್ತ ಆಕರ್ಷಿತರಾಗಿದ್ದಾರೆ, ಹಾಗಾಗಿ ಏನೋ ಚಳುವಳಿ ಆಗುತ್ತಿದೆ ಎಂದು ಯುವಕರು ನಂಬಿದ್ದಾರೆ, ಈಗ ಯುವಕರಿಗೆ ಸತ್ಯ ದರ್ಶನ ಆಗಿದೆ ಎಂದವರು ಹೇಳಿದ್ದಾರೆ.
ವಿರೋಧಿಸಲು ವಿಷಯವೇ ಇಲ್ಲ: ಪ್ರಧಾನಿಗಳ ಸ್ವಾರ್ಥ ರಹಿತ ಸೇವೆಯಿಂದ ವಿಪಕ್ಷಗಳಿಗೆ ವಿರೋಧಿಸಲು ವಿಷಯವೇ ಇರಲಿಲ್ಲ, ಆದ್ದರಿಂದ ಜಂತರ್ ಮಂತರ್ ಚಳುವಳಿಯನ್ನು ಈಗ ಹಬ್ಬಿಸುತ್ತಿದ್ದಾರೆ ಎಂದರು.ಭಯೋತ್ಪಾದಕರಿಗೆ ಕಾಂಗ್ರೆಸ್ ಬೆಂಬಲ!: ಕರ್ನಾಟಕದ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದೆ, ಉಮಾರ್ ಖಾಲಿದ್ ಒಬ್ಬ ಭಯೋತ್ಪಾದಕ, ಸುಪ್ರೀಂ ಕೋರ್ಟ್ ಕೂಡ ಆತನಿಗೆ ಜಾಮೀನು ಕೊಟ್ಟರೆ ಅನಾಹುತ ಆಗುತ್ತದೆ ಎಂದು ಜಾಮೀನು ನೀಡಿಲ್ಲ, ಅಬ್ಜಲ್ ಗುರು ಪರ ಹೋರಾಟ ಮಾಡಿದಾತ, ಕಾಂಗ್ರೆಸ್ ಬೆಂಬಲಿತ ಹೋರಾಟದಲ್ಲಿ ಆತನ ಪರ ಫ್ಲೆಕ್ಸ್ ಪ್ರತ್ಯಕ್ಷವಾಗಿದೆ, ಇದನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿರುವುದು ಭಯೋತ್ಪಾದಕರಿಗೆ ನೇರ ಬೆಂಬಲ ಕೊಟ್ಟಂತೆ, ಕಾಂಗ್ರೆಸ್ ಮಾನಸಿಕ ಸ್ಥಿತಿ ಭಯೋತ್ಪಾದಕರನ್ನು ಬೆಂಬಲಿಸುವುದಾಗಿದೆ ಎಂದು ಕೋಟ ಆರೋಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.