ಮಂಗಳೂರು ದಕ್ಕೆ 3ನೇ ಹಂತದ ಕಾಮಗಾರಿಗೆ ಶೀಘ್ರ ಟೆಂಡರ್: ಗುಂಡೂರಾವ್‌

KannadaprabhaNewsNetwork | Published : Dec 3, 2023 1:00 AM

ಸಾರಾಂಶ

ಮಂಗಳೂರು ದಕ್ಕೆ ಮೂರನೇ ಹಂತದ ಕಾಮಗಾರಿಗೆ ಶೀಘ್ರವೇ ಟೆಂಟರ್ರ್‌ ಕರೆಯಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ಶ್‌ ಗುಂಡೂರಾವ್ವ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ಕಾಮಗಾರಿಗೆ ಡಿಸೆಂಬರ್ ಅಂತ್ಯದೊಳಗೆ ಟೆಂಡರ್ ಕರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮೀನುಗಾರರ ಸಮಸ್ಯೆಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂದರಿನ ಮೂರನೇ ಹಂತದ ಕಾಮಗಾರಿಗೆ 49 ಕೋಟಿ ರು.ಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಾಮಗಾರಿಗೆ ಒಂದು ವಾರದೊಳಗೆ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸಿ ನಂತರ ತಿಂಗಳಾಂತ್ಯದೊಳಗೆ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

37.5 ಕೋಟಿ ರು. ವೆಚ್ಚದಲ್ಲಿ ಮೀನುಗಾರಿಕಾ ಬಂದರಿನ ಮೊದಲ ಮತ್ತು ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ ಕುಸಿದಿರುವ ಜೆಟ್ಟಿಯ ಪುನರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ, ಈಗಿರುವ ಹರಾಜು ಪ್ರದೇಶದ ಅಭಿವೃದ್ಧಿ, ಕೊಳಚೆ ನೀರು ಸಂಸ್ಕರಣಾ ಘಟಕ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕ, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ದಕ್ಕೆಯಲ್ಲಿ ಮೇಲ್ಚಾವಣಿ: ದಕ್ಕೆಯಲ್ಲಿ ತೀವ್ರ ಬಿಸಿಲು ಇರುವುದರಿಂದ ಮೀನುಗಾರಿಕೆ ಇಲಾಖೆ ಮತ್ತು ಮಹಾನಗರ ಪಾಲಿಕೆ ಚರ್ಚಿಸಿ ಇಲ್ಲಿ ಮೇಲ್ಛಾವಣಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು. ಬಂದರಿನಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಖಡಕ್ಕಾಗಿ ಸೂಚಿಸಿದರು.

ದಕ್ಕೆಯಲ್ಲಿ 3.9 ಕೋಟಿ ರು. ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಸಾಗರಮಾಲಾ ಯೋಜನೆಯಡಿ 29 ಕೋಟಿ ರು. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ದೂರು ಬರಬಾರದು: ಈ ವರ್ಷ ಮಳೆ ಕಡಿಮೆ ಸುರಿದಿರುವುದರಿಂದ ಬೇಸಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡಲು ಆಕ್ಷನ್‌ ಪ್ಲ್ಯಾನ್‌ ಮಾಡಬೇಕು. ನೀರಿನ ಸಮಸ್ಯೆ ಕುರಿತ ಯಾವುದೇ ದೂರು ಬರದಂತೆ ನೋಡಿಕೊಳ್ಳಬೇಕು ಎಂದು ಸಚಿವ ಗುಂಡೂರಾವ್‌ ಸೂಚನೆ ನೀಡಿದರು.ತುಂಬೆ ವೆಂಟೆಡ್ ಅಣೆಕಟ್ಟಿನ ಕೆಳಭಾಗದಲ್ಲಿರುವ ಅಡ್ಯಾರ್ ಅಣೆಕಟ್ಟಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಮುಳುಗಡೆಯಾಗುವ 33 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 100 ಕೋಟಿ ರು. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದು ಕಾರ್ಯಗತವಾದರೆ ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದು ಸಣ್ಣ ನೀರಾವರಿ ಅಧಿಕಾರಿ ತಿಳಿಸಿದರು.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ. ನಾಗರಿಕರಿಗೆ ನೀರು ಪೂರೈಸಲು ಬೋರ್‌ವೆಲ್‌ಗಳನ್ನೂ ಗುರುತಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಹರೀಶ್‌ ಕುಮಾರ್‌, ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಪಂ ಸಿಇಒ ಆನಂದ್‌, ಡಿಸಿಪಿ ಸಿದ್ಧಾರ್ಥ್‌ ಗೋಯಲ್‌, ಪಾಲಿಕೆ ಆಯುಕ್ತ ಆನಂದ್‌ ಇದ್ದರು.ಉರಿ ಬಿಸಿಲಲ್ಲಿ ಓಡಾಟ, ಅಂಜಲ್‌ ಮೀನು ಹಿಡಿದ ಗುಂಡೂರಾವ್‌ಮೀನುಗಾರರ ಸಮಸ್ಯೆಗಳ ಕುರಿತಾದ ಸಭೆಗೂ ಮೊದಲು ಸಚಿವ ದಿನೇಶ್‌ ಗುಂಡೂರಾವ್‌ ಮಂಗಳೂರು ಮೀನುಗಾರಿಕಾ ಧಕ್ಕೆಗೆ ತೆರಳಿ ಖುದ್ದು ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಮೀನುಗಾರ ಮಹಿಳೆಯರ ಜತೆ ಮಾತುಕತೆ ನಡೆಸಿದರು. ಬಳಿಕ ಹರಾಜು ಕೂಗುವ ಸ್ಥಳಕ್ಕೆ ತೆರಳಿ ಅಂಜಲ್‌ ಮೀನನ್ನು ಕೈಯಲ್ಲಿ ಹಿಡಿದುಕೊಂಡು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸಚಿವರು ಗಮನ ಸೆಳೆದರು.

ಬಿರು ಬಿಸಿಲಲ್ಲಿ ಓಡಾಟ: ದಿನೇಶ್‌ ಗುಂಡೂರಾವ್ ಅವರು ದಕ್ಕೆ ಭೇಟಿ ನೀಡುವ ವೇಳೆ ಮಧ್ಯಾಹ್ನದ ಉರಿ ಬಿಸಿಲು. ತೀವ್ರ ಸೆಕೆ, ಬೆವರನ್ನೂ ಲೆಕ್ಕಿಸದೆ ಸುಮಾರು ಒಂದು ಗಂಟೆ ಕಾಲ ಅವರು ಧಕ್ಕೆಯ ಉದ್ದಗಲಕ್ಕೂ ತೆರಳಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮೀನುಗಾರರ ವಿವಿಧ ಸಮಸ್ಯೆಗಳನ್ನು ಆಲಿಸಿದರು. ಮೀನುಗಾರಿಕಾ ಮುಖಂಡರು, ಬೋಟ್ ಮಾಲೀಕರು, ಬಂದರು ಸಿಬ್ಬಂದಿ ಜತೆ ಮಾತುಕತೆ ನಡೆಸಿದರು.

ಅಳಲು ತೋಡಿಕೊಂಡ ಮೀನುಗಾರರು:

ಬಂದರಿನ ಅವ್ಯವಸ್ಥೆಗಳ ಬಗ್ಗೆ ಸಚಿವರ ಮೀನುಗಾರರು ಸಚಿವರ ಗಮನ ಸೆಳೆದರು. ಕೋಟ್ಯಂತರ ವಹಿವಾಟು ನಡೆಯುವ ಬಂದರಿಗೆ ಭದ್ರತೆ ಇಲ್ಲ, ಹಡಗಿಗೂ ಭದ್ರತೆ ಇಲ್ಲ, ಸಿಸಿ ಕ್ಯಾಮರಾಗಳಿಲ್ಲ ಎಂದು ದೂರಿದರು. ಶೀಘ್ರದಲ್ಲೇ ಮೀನುಗಾರರ ಬೇಡಿಕೆ ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದರು.

Share this article