ಗದಗ: ಸರ್ಕಾರಿ ಶಾಲೆ ಹಾಗೂ ಗ್ರಾಮದ ಪ್ರಮುಖ ಸ್ಥಳಗಳಲ್ಲಿ, ಸಿ.ಸಿ. ಕ್ಯಾಮೆರಾ ಅಳವಡಿಸುವುದು, ಗ್ರಾಮದಲ್ಲಿ ಹರಿದು ಹೋಗುವ ಮಳೆ ನೀರನ್ನು ಸಂಗ್ರಹಿಸಲು ಕೆರೆ ನಿರ್ಮಾಣ, ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ, ಶಾಲೆಗಳ ಶೌಚಾಲಯ ನಿರ್ವಹಣೆಗೆ ಸ್ವಚ್ಛತಾಗಾರರ ನೇಮಕ, ಕೃಷಿ ಚಟುವಟಿಕೆ ರಸ್ತೆ ಸುಧಾರಣೆ ಸೇರಿದಂತೆ ಹಲವಾರು ಮುಖ್ಯ ವಿಷಯಗಳನ್ನು ನಮ್ಮ ಗ್ರಾಮ ನಮ್ಮ ಯೋಜನೆ ತಯಾರಿಸುವ ಕುರಿತು ತಾಲೂಕಿನ ಲಕ್ಕುಂಡಿ ಗ್ರಾಮ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಅನುಮೋದನೆ ಪಡೆಯಲಾಯಿತು.
ಫಸಲು ರಾಶಿ ಮಾಡಲು ಈಗ ರೈತರು ರಾಷ್ಟ್ರೀಯ ಹೆದ್ದಾರಿಯನ್ನೇ ಅವಲಂಬಿಸಿದ್ದು ಇದು ಅಪಾಯಕಾರಿಯಾಗಿದ್ದು, ಇದಕ್ಕೆ ಕನಿಷ್ಠ 5 ಎಕರೆ ಜಮೀನು ಖರೀದಿಸಿ ರಾಶಿ ಮಾಡುವ ಸ್ಥಳ ಕಣವನ್ನಾಗಿ ಮಾಡಬೇಕೆಂದು ರೈತರು ಒತ್ತಾಹಿಸಿದರು. ಗ್ರಾಮದಲ್ಲಿ ಕಳ್ಳತನವನ್ನು ತಪ್ಪಿಸಲು ಮತ್ತು ಶಾಲಾ ಮೈದಾನದಲ್ಲಿ ಕಿಡಿಗೇಡಿಗಳ ಅಸಭ್ಯ ವರ್ತನೆ ತಪ್ಪಿಸಲು ಸಿ.ಸಿ. ಕ್ಯಾಮೆರಾ ಅಳವಡಿಸಲು ಗ್ರಾ. ಪಂ. ಕ್ರಿಯಾ ಯೋಜನೆ ರೂಪಿಸಬೇಕು. ಲೋಡ್ ಶೆಡ್ಡಿಂಗ್ ಇದ್ದಾಗ ತೋಟದ ಮನೆಯಲ್ಲಿ ರೈತರು ವಸತಿ ಇರಲು ಸಿಂಗಲ್ ಪೇಜ್ ವಿದ್ಯುತ್ ಪೂರೈಕೆ ಮಾಡುವುದು ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಗ್ರಾ. ಪಂ. ಅಧ್ಯಕ್ಷ ಕೆ.ಎಸ್. ಪೂಜಾರ ಮುಂತಾದವರು ಮಾತನಾಡಿದರು. ಪಿಡಿಒ ಅಮೀರನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, 11 ವಾರ್ಡಗಳ ಅಭಿವೃದ್ಧಿ ಮಾಡಬೇಕಾದ ವಿಷಯಗಳ ಚರ್ಚೆಯನ್ನು ಸಭೆಗೆ ತಿಳಿಸಿ ಅನುಮೋದನೆ ಪಡೆದರು.ಗ್ರಂಥಾಲಯ, ಸ್ಮಶಾನ, ಆರೋಗ್ಯ, ಕೃಷಿ, ತೋಟಗಾರಿಕೆ, ಶಿಕ್ಷಣ, ವಿದ್ಯುತ್, ಸಾರಿಗೆ, ಸಂಜೀವಿನಿ ಒಕ್ಕೂಟ, ಸಮುದಾಯ ಭವನ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು. ಬಿಇಒ ವಿ.ವಿ.ನಡುವಿನಮನಿ, ಕೃಷಿ ಇಲಾಖೆಯ ಬಸವರಾಜೇಶ್ವರಿ, ಯೋಜನಾಧಿಕಾರಿ ಗೋವಿಂದರೆಡ್ಡಿ, ತೋಟಗಾರಿಕೆ ಇಲಾಖೆಯ ಶಂಭು ನೆಗಳೂರು, ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ಶಂಭು ನೆಗಳೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಲ್ಯಾಣ ಇಲಾಖೆಯ ರಾಜೇಶ್ವರಿ ಉಪ್ಪಿನ ಹೆಸ್ಕಾಂ ಅಧಿಕಾರಿ ದೊಡ್ಡಮನಿ, ಗ್ರಾಪಂ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಯರು ಉಪಸ್ಥಿತರಿದ್ದರು. ಕೆ.ಬಿ. ಜಾನೋಪಂತರ ಸ್ವಾಗತಿಸಿದರು. ಎಂ.ಎ. ಗಾಜಿ ವಂದಿಸಿದರು.