ಎಲ್ಲಾ ಕ್ರೀಡಾಂಗಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : Jun 22, 2025, 11:48 PM IST
೨೦ಕೆಎಂಎನ್‌ಡಿ-೬ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಕ್ರೀಡಾಂಗಣಗಳ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು. ಜಿಪಂ ಸಿಇಓ ಕೆ.ಆರ್.ನಂದಿನಿ ಇದ್ದರು. | Kannada Prabha

ಸಾರಾಂಶ

ಜಿಲ್ಲೆಯ ಕ್ರೀಡಾಂಗಣದಲ್ಲಿ ಪ್ರತ್ಯೇಕ ಕಬಡ್ಡಿ, ಬ್ಯಾಸ್ಕೆಟ್ ಬಾಲ್, ಶೆಟಲ್ ಕಾಕ್ ಹಾಗೂ ವಾಲಿಬಾಲ್ ಅಂಕಣಗಳನ್ನು ನಿರ್ಮಿಸುತ್ತಿದ್ದು, ಕ್ರೀಡಾಪಟುಗಳಿಗೆ ವಸ್ತ್ರ ಬದಲಾಯಿಸಲು ಅನುಕೂಲವಾಗುವಂತೆ ಸುವ್ಯವಸ್ಥಿತವಾದ ವಸ್ತ್ರ ಬದಲಾಯಿಸುವ ಕೊಠಡಿಗಳನ್ನು ನಿರ್ಮಿಸಿಕೊಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕ್ರೀಡಾಂಗಣಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಹಾಗೂ ಕ್ರೀಡಾಭ್ಯಾಸ ನಡೆಸುವ ಕ್ರೀಡಾಪಟುಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಯಾವುದೇ ರೀತಿಯ ಕೊರತೆ ಉಂಟಾಗದಂತೆ ಜಿಲ್ಲೆಯ ಎಲ್ಲಾಕ್ರೀಡಾಂಗಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಕ್ರೀಡಾಂಗಣಗಳ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯವಾಗಿ ಕ್ರೀಡಾಂಗಣ ಹಾಗೂ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನಹರಿಸುವಂತೆ ತಿಳಿಸಿದರು.

ಜಿಲ್ಲೆಯ ಕ್ರೀಡಾಂಗಣದಲ್ಲಿ ಪ್ರತ್ಯೇಕ ಕಬಡ್ಡಿ, ಬ್ಯಾಸ್ಕೆಟ್ ಬಾಲ್, ಶೆಟಲ್ ಕಾಕ್ ಹಾಗೂ ವಾಲಿಬಾಲ್ ಅಂಕಣಗಳನ್ನು ನಿರ್ಮಿಸುತ್ತಿದ್ದು, ಕ್ರೀಡಾಪಟುಗಳಿಗೆ ವಸ್ತ್ರ ಬದಲಾಯಿಸಲು ಅನುಕೂಲವಾಗುವಂತೆ ಸುವ್ಯವಸ್ಥಿತವಾದ ವಸ್ತ್ರ ಬದಲಾಯಿಸುವ ಕೊಠಡಿಗಳನ್ನು ನಿರ್ಮಿಸಿಕೊಡಬೇಕು. ಕ್ರೀಡಾಂಗಣಗಳಲ್ಲಿ ಪ್ಲಾಸ್ಟಿಕ್ ಬಿಸಾಡುವುದು, ಕಸಗಳ ವಿಲೇವಾರಿಯಾಗದೆ ಇರುವುದು ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಮತ್ತು ಕಸಗಳ ವಿಲೇವಾರಿಯಾಗದೆ ಇರುವುದು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ಮಾತನಾಡಿ, ಜಿಲ್ಲೆಯಲ್ಲಿನ ಕ್ರೀಡಾಂಗಣಗಳಲ್ಲಿ ಕ್ರೀಡಾಭ್ಯಾಸ ಮಾಡುವ ಕ್ರೀಡಾಪಟುಗಳಿಗೆ ಏನಾದರೂ ಸಮಸ್ಯೆಗಳು ಹಾಗೂ ಮೂಲ ಸೌಕರ್ಯಗಳಲ್ಲಿ ಕೊರತೆ ಉಂಟಾಗುತಿದೆಯೇ ಎಂದು ತಿಳಿಯಲು ಜಿಲ್ಲೆಯ ಕ್ರೆಡಾಪಟುಗಳನ್ನು ಒಳಗೊಂಡಂತೆ ಮುಂದಿನ ದಿನಗಳಲ್ಲಿ ಸಭೆಯನ್ನು ಆಯೋಜಿಸಿ ಎಂದು ಸಲಹೆ ನೀಡಿದರು.

ಕ್ರೀಡಾಂಗಣಗಳಲ್ಲಿ ವ್ಯಾಯಾಮ ಮಾಡುವವರಿಗಾಗಿ, ಕ್ರೀಡಾಪಟುಗಳಿಗಾಗಿ, ಸಾರ್ವಜನಿಕರಿಗಾಗಿ ಹಾಗೂ ಮಕ್ಕಳಿಗಾಗಿ ಅರೋಗ್ಯಕರವಾದ ತಂಪುಪಾನೀಯ, ಹಣ್ಣುಗಳನ್ನು ಒದಗಿಸಲು ಹಾಗೂ ಮಾರಾಟ ಮಾಡಲು ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಬೇಕು ಎಂದರು.

ಸಭೆಯಲ್ಲಿ ಯುವಜನ ಸೇವಾ ಹಾಗೂ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಕರ್ನಾಟಕ ಭೂ ಸೇನಾ ನಿಗಮದ ಸೋಮಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮೇಗೌಡ, ನೆಹರು ಯುವ ಕೇಂದ್ರದ ಮುಖ್ಯ ಲೆಕ್ಕಾಧಿಕಾರಿ ವಿ.ರವಿಚಂದ್ರನ್, ನಿರ್ಮಿತಿ ಕೇಂದ್ರದ ಅಧಿಕಾರಿ ಜಯಪ್ರಕಾಶ್, ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಲಿಂಗರಾಜು, ನಗರಸಭೆಯ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ಉಪಸ್ಥಿತರಿದ್ದರು.

PREV