ನರಗುಂದ: ಹೋರಾಟದಲ್ಲಿ ಮಡಿದ ರೈತನ ವೀರಗಲ್ಲನ್ನು ಸರ್ಕಾರ ಸದ್ಯ ಇದ್ದ ಜಾಗೆಯಲ್ಲಿ ಸ್ಥಾಪಿಸಬೇಕು ಎಂದು ಕಾಂಗ್ರೆಸ್ ರಾಜ್ಯ ವೈದ್ಯಕೀಯ ಘಟಕದ ಉಪಾಧ್ಯಕ್ಷ ಡಾ.ಸಂಗಮೇಶ ಕೊಳ್ಳಿ ಆಗ್ರಹಿಸಿದ್ದಾರೆ.
ಅವರು ಮಂಗಳವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ, ರೈತ ಸೇನಾ ಸಂಘಟನೆ, ರೈತ ಸಂಘ ಹಾಗೂ ಹಸಿರು ಸೇನೆ, ಕನ್ನಡಪರ ಒಕ್ಕೂಟಗಳ ಸಂಘಟನೆ, ಕರ್ನಾಟಕ ರೈತ ಸೇನೆ, ಕರವೇ, ನಮ್ಮ ಕರ್ನಾಟಕ ಸೇನೆ, ದಲಿತ ಸಂಘಟನೆ ಸಂಯುಕ್ತಾಶ್ರಯದಲ್ಲಿ ವೀರಗಲ್ಲ ಸ್ಥಾಪನೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,1980ರಲ್ಲಿ ನೀರಿನ ಕರ ವಿರುದ್ಧ ನಡೆದ ಹೋರಾಟದಲ್ಲಿ ಪೊಲೀಸ್‌ರ ಗುಂಡಿಗೆ ಬಲಿಯಾದ ಈರಪ್ಪ ಕಡ್ಲಿಕೊಪ್ಪ ವೀರಗಲ್ಲವು ಖಾಸಗಿ ಜಾಗೆಯಲ್ಲಿದ್ದು, ಈ ವೀರಗಲ್ಲಿಗೆ ಸ್ಥಳ ನೀಡಿದ ಖಾಸಗಿಯವರೊಂದಿಗೆ ಮಾತನಾಡಿ ಆ ಜಾಗೆಯನ್ನು ಸರ್ಕಾರ ತನ್ನ ಕಬ್ಜಾಕ್ಕೆ ತೆಗಿದುಕೊಂಡು ಅದೇ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಕಳೆದ 43 ವರ್ಷಗಳಿಂದ ಸರ್ಕಾರಕ್ಕೆ ನಾನು ರೈತ ಹೋರಾಟದಲ್ಲಿ ಮರಣ ಹೊಂದಿದ ಈರಪ್ಪ ಕಡ್ಲಿಕೊಪ್ಪವರ ವೀರಗಲ್ಲ ಮತ್ತು ಸ್ಮಾರಕ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಆದರಿಂದ ಸರ್ಕಾರ ಜು 21ರೊಳಗೆ ವೀರಗಲ್ಲಗೆ ಜಾಗೆ ನೀಡಿರುವ ಖಾಸಗಿಯವರೊಂದಿಗೆ ಮಾತನಾಡಿ ಆ ಜಾಗೆಯನ್ನು ಸರ್ಕಾರ ತನ್ನ ಕಬ್ಜಾ ಮಾಡಿಕೊಂಡು ಅದೇ ಜಾಗೆಯಲ್ಲಿ ಸ್ಥಾಪನೆ ಮಾಡಬೇಕು. ಸ್ಥಾಪನೆ ಮಾಡದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡ ವೀರಬಸಪ್ಪ ಹೂಗಾರ, ಬಸವರಾಜ ಸಾಬಳೆ, ಎಸ್.ಬಿ. ಜೋಗಣ್ಣವರ, ಚನ್ನು ನಂದಿ, ವಿಠಲ ಜಾಧವ, ಸಿ.ಎಸ್. ಪಾಟೀಲ,ವೀರಣ್ಣ ಸೊಪ್ಪಿನ,ನಬಿಸಾಬ್ ಕಿಲ್ಲೇದಾರ, ಸುಭಾಸ ಗಿರಿಯಣ್ಣವರ, ಅರ್ಜುನ ಮಾನೆ, ಮಲ್ಲೇಶ ಅಬ್ಬಗೇರಿ, ಈರಪ್ಪ ಮ್ಯಾಗೇರಿ ಸೇರಿದಂತೆ ಮುಂತಾದವರು ಇದ್ದರು.