ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ 2,551 ಸರ್ಕಾರಿ ಕಟ್ಟಡಗಳ ಮೇಲೆ ಸೋಲಾರ್ ಘಟಕ ಸ್ಥಾಪನೆ

KannadaprabhaNewsNetwork | Published : Nov 30, 2024 12:48 AM

ಸಾರಾಂಶ

ಸೂರ್ಯಶಕ್ತಿಯಿಂದ ಪಡೆಯುವ ವಿದ್ಯುತ್‌ಗೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಶಾಶ್ವತ ಮತ್ತು ನಿರಂತರವಾಗಿ ವಿದ್ಯುತ್ ಪಡೆಯಬಹುದಾಗಿರುವುದು ಮಾತ್ರವಲ್ಲದೇ ಇದು ಪರಿಸರಸ್ನೇಹಿಯಾಗಿರುವ ಜತೆಗೆ ಕಟ್ಟಡಗಳ ಚಾವಣಿಯನ್ನು ವ್ಯವಸ್ಥಿತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ.

ಕಾರವಾರ: ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು ತಮ್ಮ ಕಟ್ಟಡದಲ್ಲಿನ ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ಪರಿಸರ ಸ್ನೇಹಿಯಾಗಿ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಜಿಲ್ಲೆಯ 2,551 ಸರ್ಕಾರಿ ಕಟ್ಟಡಗಳ ಚಾವಣಿ ಮೇಲೆ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.

ಹೆಸ್ಕಾಂನ ಆರ್.ಆರ್. ಸಂಖ್ಯೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 2,697 ಸರ್ಕಾರಿ ಕಟ್ಟಡಗಳಿದ್ದು, ಅವುಗಳಲ್ಲಿ 73 ಕಟ್ಟಡಗಳ ಚಾವಣಿಯಲ್ಲಿ ಈಗಾಗಲೇ ವಿವಿಧ ಯೋಜನೆಗಳ ಮೂಲಕ ಸೌರ ವಿದ್ಯುದೀಕರಣ ಆಗಿದ್ದು, 73 ಕಟ್ಟಡಗಳಲ್ಲಿ ವಿವಿಧ ಕಾರಣಗಳಿಂದ ಸೋಲಾರ್ ಸ್ಥಾವರಗಳನ್ನು ಅಳವಡಿಸುವುದು ಕಾರ್ಯಸಾಧ್ಯವಿಲ್ಲವೆಂದು ಗುರುತಿಸಲಾಗಿದೆ. ಬಾಕಿ ಉಳಿದ 2,551 ಕಟ್ಟಡಗಳ ಚಾವಣಿಯಲ್ಲಿ ಸೌರ ವಿದ್ಯುತ್ ಸ್ಥಾವರ ಅಳವಡಿಸುವ ಕುರಿತಂತೆ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ.

ಹೆಸ್ಕಾಂನ ಶಿರಸಿ ವಿಭಾಗದಲ್ಲಿ 650 ಕಟ್ಟಡಗಳಿದ್ದು, ಇವುಗಳಲ್ಲಿ ಈಗಾಗಲೇ 25 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದೆ. 625 ಕಟ್ಟಡಗಳ ಚಾವಣಿಯಲ್ಲಿ ಸೋಲಾರ್ ಸ್ಥಾವರ ಅಳವಡಿಸಬಹುದು. ದಾಂಡೇಲಿ ವಿಭಾಗದ 537 ಕಟ್ಟಡಗಳಲ್ಲಿ 26 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದ್ದು, 510 ಕಟ್ಟಡಗಳ ಚಾವಣಿಯಲ್ಲಿ ಸೋಲಾರ್ ಸ್ಥಾವರ ಅಳವಡಿಸಬಹುದು. ಕಾರವಾರ ವಿಭಾಗದ 1359 ಕಟ್ಟಡಗಳಲ್ಲಿ 12 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದ್ದು, 1277 ಕಟ್ಟಡಗಳ ಚಾವಣಿಯಲ್ಲಿ ಸೋಲಾರ್ ಸ್ಥಾವರ ಅಳವಡಿಸಬಹುದು. 70 ಕಟ್ಟಡಗಳಲ್ಲಿ ಸ್ಥಾವರಗಳನ್ನು ಅಳವಡಿಸುವುದು ಸಾಧ್ಯವಿಲ್ಲ. ಹೊನ್ನಾವರ ವಿಭಾಗದ 151 ಕಟ್ಟಡಗಳಲ್ಲಿ 10 ಕಟ್ಟಡಗಳಿಗೆ ಸೌರ ವಿದ್ಯುದೀಕರಣ ಪೂರ್ಣಗೊಂಡಿದ್ದು, 139 ಕಟ್ಟಡಗಳ ಚಾವಣಿಯಲ್ಲಿ ಸೋಲಾರ್ ಸ್ಥಾವರ ಅಳವಡಿಸಬಹುದು. 2 ಕಟ್ಟಡಗಳಲ್ಲಿ ಸ್ಥಾವರಗಳನ್ನು ಅಳವಡಿಸಲು ಆಗುವುದಿಲ್ಲ.

ಪ್ರಸ್ತುತ ಈಗಾಗಲೇ ಸೌರ ವಿದ್ಯುದೀಕರಣಗೊಂಡಿರುವ 73 ಸರ್ಕಾರಿ ಕಟ್ಟಡಗಳಲ್ಲಿ ಒಟ್ಟು 406.86 ಕಿವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಸೌರ ವಿದ್ಯುದೀಕರಣಗೊಳಿಸಲು ಗುರುತಿಸಲಾಗಿರುವ 2,551 ಸರ್ಕಾರಿ ಕಟ್ಟಡಗಳಿಂದ 73,299 ಕಿವ್ಯಾ ವಿದ್ಯುತ್ ಉತ್ಪಾದನೆಯಾಗುವ ಗುರಿ ಹೊಂದಲಾಗಿದೆ.

ಸಾಂಪ್ರದಾಯಿಕ ಮೂಲದಿಂದ ಉತ್ಪಾದಿಸುವ ವಿದ್ಯುತ್ ಉತ್ಪಾದನೆಯ ವೆಚ್ಚದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವುದು ಮಾತ್ರವಲ್ಲದೇ ಪರಿಸರ ಮತ್ತು ಜೀವ ವೈವಿಧ್ಯತೆಯ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿದ್ದು, ಈ ವಿದ್ಯುತ್ ಮೂಲಗಳು ಕಾಲಕ್ರಮೇಣ ನಶಿಸಲಿವೆ. ಸೂರ್ಯಶಕ್ತಿಯಿಂದ ಪಡೆಯುವ ವಿದ್ಯುತ್‌ಗೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಶಾಶ್ವತ ಮತ್ತು ನಿರಂತರವಾಗಿ ವಿದ್ಯುತ್ ಪಡೆಯಬಹುದಾಗಿರುವುದು ಮಾತ್ರವಲ್ಲದೇ ಇದು ಪರಿಸರಸ್ನೇಹಿಯಾಗಿರುವ ಜತೆಗೆ ಕಟ್ಟಡಗಳ ಚಾವಣಿಯನ್ನು ವ್ಯವಸ್ಥಿತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ.

1849 ಜನರಿಂದ ಅರ್ಜಿ...

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ದೇಶಾದ್ಯಂತ 1 ಕೋಟಿ ಕುಟುಂಬಗಳಿಗೆ ಸೌರ ಚಾವಣಿ ಸ್ಥಾಪಿಸುವ ಗುರಿ ಹೊಂದಲಾಗಿದೆ. ಇದರಿಂದ ಪ್ರತಿ ಮನೆಗೆ ತಿಂಗಳಿಗೆ 300 ಯುನಿಟ್‌ವರೆಗೆ ಉಚಿತ/ಕಡಿಮೆ ದರದ ವಿದ್ಯುತ್ ಒದಗಿಸಲು ಸಹಾಯ ಮಾಡಲಾಗುತ್ತಿದೆ. ಈ ಯೋಜನೆಯಿಂದ ಗ್ರಾಹಕರು ತಮ್ಮ ಮನೆಗೆ ತಾವೇ ವಿದ್ಯುತ್ ಉತ್ಪಾದಿಸುವ ಜತೆಗೆ ಹೆಚ್ಚುವರಿ ವಿದ್ಯುತ್‌ನ್ನು ಹೆಸ್ಕಾಂಗೆ ನೀಡಿ ಆರ್ಥಿಕ ಲಾಭ ಪಡೆಯಬಹುದು ಹೆಸ್ಕಾಂ ಅಧೀಕ್ಷಕ ದೀಪಕ್ ಕಾಮತ್ ಹೇಳಿದ್ದಾರೆ.ಜಿಲ್ಲೆಯಲ್ಲಿ ಮನೆಗಳ ಚಾವಣಿಯಲ್ಲಿ ಸೋಲಾರ್ ಘಟಕ ಅಳವಡಿಸಲು 1849 ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದಾರೆ. ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮವನ್ನು ಮಾದರಿ ಸೌರ ಗ್ರಾಮ ಯೋಜನೆಗೆ ಆಯ್ಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. 79 ನೀರಾವರಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

Share this article