ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ನೂತನ ಕನ್ನಡಭವನದಲ್ಲಿ ನಡೆದ 10 ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಬುಧವಾರ ಗೋಷ್ಠಿಗಳ ಅಧ್ಯಕ್ಷ ಭಾಷಣ ಮಾಡಿದ ಅವರು, ಹಳ್ಳಿಗಳ ಬದಿ ಹಾದುಹೋಗುವ ಮುಖ್ಯರಸ್ತೆಯ ಕ್ರಾಸ್‌ಗಳಲ್ಲಿ ಖಾಸಗಿ ಇಂಗ್ಲಿಷ್ ಕಾನ್ವೆಂಟ್‌ಗಳನ್ನು ಪ್ರಾರಂಭಿಸಿ ಹಳ್ಳಿಮಕ್ಕಳಿಗೆ ಅನುಕೂಲ ಕಲ್ಪಿಸುವ ನೆಪದಲ್ಲಿ ಹಣ ಗಳಿಕೆಯ ದಂದೆಗಿಳಿದಿದ್ದಾರೆ. ಹೀಗಾಗಿ ಸರ್ಕಾರ ನಡೆಸುವ ಹಳ್ಳಿ ಶಾಲೆಗಳಲ್ಲಿ ದಿನೇದಿನೇ ಮಕ್ಕಳ ಹಾಜರಾತಿ ಕುಸಿಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂಗ್ಲಿಷ್ ಶಾಲೆಗಳಿಗೇ ಆದ್ಯತೆಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಶೇ.25 ರಷ್ಟು ಬಡವಿದ್ಯಾರ್ಥಿಗಳಿಗೆ ಪ್ರವೇಶವನ್ನು ಕಾಯ್ದಿರಿಸಿರುವುದು ಆಶಾದಾಯಕ ನಡೆ. ಆದರೂ ಈ ಕಾಯ್ದೆ ಅಡಿಯಲ್ಲಿಯೂ ಇಂಗ್ಲಿಷ್ ಶಾಲೆಗಳಿಗೇ ನೂಕುನುಗ್ಗಲು ಎಂಬ ಕರಾಳ ಸತ್ಯವನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.
ಸಾಧನೆಗಳನ್ನು ಪಟ್ಟಿಮಾಡುತ್ತ ಭೂತ ಮತ್ತು ವರ್ತಮಾನದ ಬೆನ್ನಿಗೆ ಬಿದ್ದ ನಾವು ಭವಿಷ್ಯದ ದಾರಿಯ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈಗೀಗ ಕನ್ನಡ ಮಾತನಾಡುವ, ಓದುವ ಮತ್ತು ಬರೆಯುವವರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕನ್ನಡ ಭಾಷೆಯ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವ ಸಂಕಟದ ಮಾತು ಇದು ಎಂದರು.
ನಮ್ಮಮಧ್ಯೆ ಇರುವ ತಂದೆ, ಮಗ, ಮೊಮ್ಮಗ ಈ ಮೂರು ತಲೆಮಾರುಗಳ ಪೀಳಿಗೆಯಲ್ಲಿ ಈ ಆರೋಪ ಬಹಳಷ್ಟು ಅನ್ವಯಿಸುವುದು ಮೊಮ್ಮಗನಿಗೆ. ಅಂದರೆ ಈಗಿನ ಯುವಪೀಳಿಗೆಗೆ. ಈಗ ಚಾಲ್ತಿಯಲ್ಲಿರುವ ಲಿಬರಲೈಜೇಷನ್, ಪ್ರೈವೇಟೈಜೇಷನ್ ಮತ್ತು ಗ್ಲೋಬಲೈಜೇಷನ್ ಬರಾಟೆಯಲ್ಲಿ ಐಟಿ-ಬಿಟಿಯ ಆಕರ್ಷಕ ಜಾಲದಲ್ಲಿ ಸೃಜನಶೀಲತೆ ಮಾಯವಾಗುತ್ತಿದೆ. ಅವರಿಗೆ ಹೆಚ್ಚು ಗುರಿಗಳಿಲ್ಲ. ಇರುವುದೊಂದೇ ಗುರಿ. ಯಾವುದಾದರೂ ಐ.ಟಿ, ಬಿ.ಟಿ ಕ್ಷೇತ್ರದಲ್ಲಿ ಉದ್ಯೋಗ ಗಳಿಸುವುದು. ದುರಂತವೆಂದರೆ ಇವರ ಬೆನ್ನಹಿಂದೆ ಪೋಷಕರ ಒತ್ತಾಸೆಯೂ ಇದೆ ಎಂದ ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ, ಗೌರವ ಕಾರ್ಯದರ್ಶಿ ಅಮೃತ್ ಕುಮಾರ್, ಲೇಕಕ ಹಾಗೂ ಚಿಂತಕ ಕೆ.ರಾಜ್ ಕುಮಾರ್, ಶಿಕ್ಷಣ ಮಹಾವಿದ್ಯಾಲಯದ ಪ್ರಾಶುಪಾಲ ಬಾಹುಬಲಿ ಮತ್ತಿತರರು ಇದ್ದರು.