ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳಿಗೆ ಕಾಯಕ ಸಂಸ್ಕೃತಿ ಬೆಳೆಸಿ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

KannadaprabhaNewsNetwork |  
Published : Oct 22, 2026, 02:45 AM IST
(ಫೋಟೊಬಿಕೆಟಿ5,  ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ  ಅವರು ಲಕ್ಷ್ಮಿ ನಗರದಲ್ಲಿ  ಶ್ರೀ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.) | Kannada Prabha

ಸಾರಾಂಶ

ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಲಕ್ಷ್ಮಿ ನಗರದಲ್ಲಿ ಶ್ರೀ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲಕ್ಷ್ಮಿ ಎಂದರೆ ಕಾಯಕ. ಕಾಯಕವೇ ಲಕ್ಷ್ಮಿ, ಜಾತ್ರೆ ಎಂದರೆ ಜಾಗೃತಿ. ಆರ್ಥಿಕ ಶಿಸ್ತಿನಿಂದ ಸಮೃದ್ಧಿ ಸಾಧ್ಯ. ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳಿಗೆ ಕಾಯಕ ಸಂಸ್ಕೃತಿ ಬೆಳೆಸಬೇಕು. ಕಾಯಕದ ಮಹತ್ವ ಜಾಗೃತಗೊಳಿಸುವ ಉದ್ದೇಶದಿಂದ ಲಕ್ಷ್ಮಿ ಜಾತ್ರೆ ಆಯೋಜಿಸಲಾಗುತ್ತದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಲಕ್ಷ್ಮಿ ನಗರದಲ್ಲಿ ಶ್ರೀ ಲಕ್ಷ್ಮೀ ದೇವಸ್ಥಾನ ಜೀಣ್ಣೋದ್ಧಾರ ಸಮಿತಿ, ಶ್ರೀ ಮಹಾಲಕ್ಷ್ಮೀ ಮಹಿಳಾ ಮಂಡಳಿ, ಶ್ರೀ ಗಜಾನನ ಯುವಕ ಮಂಡಳಿ, ಹಾಗೂ ಶ್ರೀ ಮಾತೃಭೂಮಿ ಯುವಕ ಮಂಡಳಿ, ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶ್ರೀಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಕಾಯಕ ಜೀವಿಗಳಿಂದ ಲಕ್ಷ್ಮಿ ಎಂದಿಗೂ ದೂರವಾಗುವುದಿಲ್ಲ. ಬದುಕಿನಲ್ಲಿ ಶಿಸ್ತು ಮತ್ತು ಆರೋಗ್ಯಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಹಣಕಾಸಿನ ಶಿಸ್ತಿಗೂ ಇದೆ. ಹಣಕಾಸಿನ ಶಿಸ್ತಿನೊಂದಿಗೆ ನಿರಂತರವಾಗಿ ಕ್ರಿಯಾಶೀಲರಾಗಿದ್ದರೆ ಜೀವನದಲ್ಲಿ ಆರ್ಥಿಕ ಕೊರತೆ ತಗ್ಗಿಸಿಕೊಂಡು ಸಮೃದ್ಧಿ ಸಾಧಿಸಬಹುದು ಎಂದವರು ಹೇಳಿದರು.

ಮನುಷ್ಯನ ಮೈಮನಗಳಲ್ಲಿ ಮನೆಮಾಡಿರುವ ಸೋಮಾರಿತನ ಮತ್ತು ದಾರಿದ್ರ್ಯ ಮನೋಭಾವವನ್ನು ದೂರಮಾಡಿ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಬೆಳೆಸಿಕೊಂಡಾಗ ಔದ್ಯೋಗಿಕ ಕ್ರಾಂತಿಗೆ ನಾಂದಿ ಹಾಡಬಹುದು. ದೇಶ ಆರ್ಥಿಕವಾಗಿ ಸದೃಢವಾಗಬೇಕಾದರೆ ಪ್ರತಿಯೊಬ್ಬರೂ ಕೌಶಲ್ಯ ಬೆಳೆಸಿಕೊಂಡು ನಿರಂತರ ಕಾಯಕಜೀವಿಗಳಾಗಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಪಿ.ಎಚ್ ಪೂಜಾರ ಮಾತನಾಡಿ, ಲಕ್ಷ್ಮೀನಗರದ ಅಭಿವೃದ್ಧಿಗೆ ಸ್ಥಳೀಯರ ಒಗ್ಗಟ್ಟು ಮತ್ತು ನಿರಂತರ ಪರಿಶ್ರಮ ಶ್ಲಾಘನೀಯವಾಗಿದ್ದು, ಲಕ್ಷ್ಮೀನಗರದೊಂದಿಗೆ ಹಲವು ವರ್ಷಗಳ ನಂಟು ಹೊಂದಿರುವುದನ್ನು ಸ್ಮರಿಸಿದ ಅವರು, ಈ ಹಿಂದೆ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕೈಗೊಂಡ ಪ್ರಯತ್ನಗಳನ್ನು ನೆನಪಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಅಶೋಕ ಲಿಂಬಾವಳಿ ಮಾತನಾಡಿ, ಲಕ್ಷ್ಮೀ ನಗರದಲ್ಲಿ ನಡೆಯುತ್ತಿರುವ ಲಕ್ಷ್ಮೀದೇವಿಯ ನವರಾತ್ರಿ ಉತ್ಸವ ಕೇವಲ ಸ್ಥಳೀಯರಿಗೆ ಸೀಮಿತವಾಗದೆ, ಇಡೀ ಊರು, ರಾಜ್ಯ, ದೇಶ ಹಾಗೂ ಜಗತ್ತಿನ ಜನರಿಗೆ ಒಳಿತನ್ನುಂಟು ಮಾಡಲಿ. ಉತ್ತಮ ಮಳೆ-ಬೆಳೆ ಸಮೃದ್ಧಿಯಾಗಿ ಜಗತ್ತು ಸುಭಿಕ್ಷವಾಗಿರಲಿ ಎಂಬ ಆಶಯದೊಂದಿಗೆ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಭಕ್ತಿ, ಶ್ರದ್ಧೆ, ನಂಬಿಕೆ ಮತ್ತು ಧಾರ್ಮಿಕ ಮೌಲ್ಯಗಳಿಗೆ ವಿಶೇಷ ಸ್ಥಾನವಿದೆ. ಸಮಾಜದಲ್ಲಿ ಧರ್ಮ, ಶಾಂತಿ ಹಾಗೂ ಸಹಬಾಳ್ವೆಯ ಮಹತ್ವವನ್ನು ಅರಿತು ಎಲ್ಲರೂ ನಡೆದುಕೊಳ್ಳಬೇಕು ಎಂದು ಹೇಳಿದರು.ಡಾ. ಅಪೂರ್ವ ಉ. ಗುಳೇದ ಮಾತನಾಡಿದರು.

ಶಾಸಕರಾದ ಉಮೇಶ ಮೇಟಿ ಅವರು ನೂತನ ದ್ವಾರ ಉದ್ಘಾಟಿಸಿದರು.ನಾಗರಾಜ ಬಿ ಪದಕಿ ಪ್ರಾಸ್ತವಿಕ ನುಡಿದರು. ಸುಭಾಷ ಸೂರ್ಯವಂಶಿ ಸ್ವಾಗತಿಸಿದರು. ರಾಜೇಶ್ವರಿ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ವೈಜಾಪುರ, ಕೆ ಮೋಹನ ಗೌಡ, ಸಂತೋಷ ನಾಗಲಗಿ ಗೌರವ ಉಪಸ್ಥಿತಿಯಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕಾಪುರ; ವೈಭವದ ವೆಂಕಟೇಶ್ವರ ರಥೋತ್ಸವ
ಬೆಳಗಾವಿಯಲ್ಲಿ ಅದ್ಧೂರಿ ದಸರಾ ಮಹೋತ್ಸವ