ಮಕ್ಕಳಲ್ಲಿ ಭ್ರಷ್ಟಾಚಾರ ವಿರೋಧಿ ಭಾವನೆ ಮೂಡಿಸಿ

KannadaprabhaNewsNetwork |  
Published : Oct 31, 2025, 02:45 AM IST
ಪೋಟೊ: ಕೊಪ್ಪಳ ನಗರದ ಜಿಲ್ಲಾಡಳಿತದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಉಪಲೋಕಾಯುಕ್ತರಿಂದ ಸಾರ್ವಜನಿಕರ ದೂರು, ಅಹವಾಲು ಸ್ವೀಕಾರ ಕಾರ್ಯಕ್ರಮ ಹಾಗೂ ಬಾಕಿ ಇರುವ ಪ್ರಕರಣಗಳ ವಿಚಾರಣೆ ಮತ್ತು ಇದರ ಅಂಗವಾಗಿ ನಡೆದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ. | Kannada Prabha

ಸಾರಾಂಶ

ಲಂಚ ಪಡೆಯುವುದು ಮಾತ್ರವಲ್ಲ ಕೊಡುವುದು ಕೂಡ ಅಪರಾಧವೇ

ಕೊಪ್ಪಳ: ಭ್ರಷ್ಟಾಚಾರ ದೇಶದ ಅಭಿವೃದ್ಧಿಗೆ ತೊಡಕಾಗಿದ್ದು, ಅದನ್ನು ಬೇರಿನಿಂದಲೇ ನಿರ್ಮೂಲನೆ ಮಾಡಲು ಮಕ್ಕಳಿಗೆ ಭ್ರಷ್ಟಾಚಾರ ವಿರೋಧಿ ಭಾವನೆ ಮೂಡಿಸಬೇಕು ಎಂದು ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಹೇಳಿದರು.

ನಗರದ ಜಿಲ್ಲಾಡಳಿತದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಉಪಲೋಕಾಯುಕ್ತರಿಂದ ಸಾರ್ವಜನಿಕರ ದೂರು, ಅಹವಾಲು ಸ್ವೀಕಾರ ಕಾರ್ಯಕ್ರಮ ಹಾಗೂ ಬಾಕಿ ಇರುವ ಪ್ರಕರಣಗಳ ವಿಚಾರಣೆ ಮತ್ತು ಇದರ ಅಂಗವಾಗಿ ನಡೆದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಭ್ರಷ್ಟಾಚಾರದ ಅರ್ಥ, ಅಪರಾಧದ ಬಗ್ಗೆ ತಿಳಿದಿದ್ದರೂ ಪರೋಕ್ಷವಾಗಿ ಎಲ್ಲರೂ ಆ ಪ್ರಕ್ರಿಯೆಯಲ್ಲಿ ಒಳಗೊಂಡಿರುತ್ತಾರೆ. ಲಂಚ ಪಡೆಯುವುದು ಮಾತ್ರವಲ್ಲ ಕೊಡುವುದು ಕೂಡ ಅಪರಾಧವೇ. ಭ್ರಷ್ಟಾಚಾರ ನಿರ್ಮೂಲನೆಗೆ ಸ್ವಯಂ ಅರಿವು, ಸ್ವಯಂ ಪ್ರತಿಜ್ಞೆ ಬಹಳ ಮುಖ್ಯ. ಆ ಪ್ರಜ್ಞೆ ಮೂಡಬೇಕೆಂದರೆ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಭ್ರಷ್ಟಾಚಾರ ವಿರೋಧಿ ಭಾವನೆ ಮೂಡಿಸಬೇಕು ಎಂದು ಹೇಳಿದರು.

ಪ್ರತಿಯೊಬ್ಬ ವಿದ್ಯಾವಂತ ವ್ಯಕ್ತಿಯೂ ಸಂವಿಧಾನ ಓದಬೇಕು. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ, ಹಕ್ಕು ನೀಡಿದೆ. ಅವುಗಳನ್ನು ನಾವು ಕಾನೂನಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ, ಜಿಪಂ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ಸಾರ್ವಜನಿಕರ ಅಗತ್ಯದ ಸಮಯದಲ್ಲಿ ವೈದ್ಯರು, ಅಧಿಕಾರಿಗಳು ಅವರಿಗೆ ಲಭ್ಯವಾಗಬೇಕು. ಈ ಬಗ್ಗೆ ಎಲ್ಲ ಇಲಾಖೆಗಳ ಮುಖ್ಯಸ್ಥರು ನಿರ್ದಿಷ್ಟ ಸುತ್ತೋಲೆ ಹೊರಡಿಸಿ ಎಪಿಎಂಸಿ, ಕಟ್ಟಡ ಕಾರ್ಮಿಕರಿಗೆ, ಸರಕು ಹಾಗೂ ಸೇವೆ ಡೆಲಿವರಿ ಮಾಡುವ ಉದ್ಯೋಗಿಗಳಿಗೆ ಆಯಾ ಇಲಾಖಾ ವ್ಯಾಪ್ತಿಯ ಅಧಿಕಾರಿಗಳು ಮತುವರ್ಜಿ ವಹಿಸಿ ವಿಮೆ ಮಾಡಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಮಾತನಾಡಿ, ಅಧಿಕಾರಿ, ನೌಕರರು ಸ್ವಜನ ಪಕ್ಷಪಾತ ಹಾಗೂ ಸ್ವಹಿತಾಸಕ್ತಿ ಬಿಟ್ಟು ಸಾರ್ವಜನಿಕ ಸೇವೆ ನೀಡಬೇಕು. ಸರ್ಕಾರಿ ಸೇವೆಯು ರಾಜ್ಯ, ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು. ಸರ್ಕಾರಿ ಸವಲತ್ತು, ಸೇವೆ ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು.

ಪೋಸ್ಟರ್ ಬಿಡುಗಡೆ:ಭ್ರಷ್ಟಾಚಾರದ ಕುರಿತು ಜಾಗೃತಿ ಅರಿವು ಸಪ್ತಾಹ-2025 ರ ಕರಪತ್ರ ಹಾಗೂ ಪೋಸ್ಟರ್‌ ಉಪಲೋಕಾಯುಕ್ತರು ಬಿಡುಗಡೆಗೊಳಿಸಿದರು.

ಪ್ರತಿಜ್ಞಾವಿಧಿ ಸ್ವೀಕಾರ: ಪ್ರತಿಯೊಬ್ಬರೂ ಭ್ರಷ್ಟಾಚಾರದ ವಿರುದ್ಧದ ಮನೋಭಾವನೆ ಹೊಂದುವ ಉದ್ದೇಶದಿಂದ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿಯನ್ನು ಉಪಲೋಕಾಯುಕ್ತ ನ್ಯಾ.ಬಿ. ವೀರಪ್ಪ ಬೋಧಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಸಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್. ದರಗದ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ, ಕರ್ನಾಟಕ ಲೋಕಾಯುಕ್ತದ ವಿಚಾರಣೆ ಅಪರ ನಿಬಂಧಕ ಡಾ. ಕಸನಪ್ಪ ನಾಯ್ಕ, ರಮಾಕಾಂತ್ ಚವ್ಹಾಣ ಹಾಗೂ ಅರವಿಂದ ಎನ್.ವಿ., ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸತೀಶ್ ಎಸ್. ಚಿಟಗುಬ್ಬಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತಕುಮಾರ್, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಅಹವಾಲು ಹಾಗೂ ದೂರು ಸಲ್ಲಿಸಲು ಬಂದ ಸಾರ್ವಜನಿಕರು ಉಪಸ್ಥಿತರಿದ್ದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ